ಲಕ್ನೋ[ಜು.20]: ದೇಶದಾದ್ಯಂತ ಹಲವಾರು ರಾಜ್ಯಗಳ ರಾಜ್ಯಪಾಲರ ಅದಲು ಬದಲು ಕಾರ್ಯ ನಡೆದಿದೆ. ಇವರಲ್ಲಿ ಮಧ್ಯಪ್ರದೇಶದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದ ಆನಂದಿಬೆನ್ ಪಟೇಲ್‌ರನ್ನು ಉತ್ತರ ಪ್ರದೇಶ ರಾಜ್ಯಪಾಲರಾಗಿ ಮರು ನೇಮಿಸಲಾಗಿದೆ. ಅತ್ತ ಬಿಹಾರದ ರಾಜ್ಯಪಾಲ ಲಾಲಜಿ ಟಂಡನ್‌ರನ್ನು ಮಧ್ಯಪ್ರದೇಶ ಗವರ್ನರ್ ಆಗಿ ನೇಮಿಸಲಾಗಿದೆ. 

ಇನ್ನು ಜಗದೀಪ್ ಧನ್ಖಡ್‌ರನ್ನು ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ನೇಮಿಸಿದ್ದರೆ, ಇತ್ತ ರಮೆಶ್ ಬೈಸ್‌ರನ್ನು ತ್ರಿಪುರ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಫಾಗೂ ಚೌಹಾನ್‌ರನ್ನು ಬಿಹಾರ ಹಾಗೂ ಆರ್. ಎನ್ ರವಿಯನ್ನು ನಾಗಾಲ್ಯಾಂಡ್ ಗವರ್ನರ್ ಆಗಿ ನಿಯುಕ್ತಿಗೊಳಿಸಲಾಗಿದೆ.

ಕಳೆದ ಕೆಲವು ತಿಂಗಳಿನಿಂದ ಹಲವಾರು ರಾಜ್ಯಗಳ ರಾಜ್ಯಪಾಲರ ಬದಲಾವಣೆಯಾಗುತ್ತದೆ ಎಂಬ ವದಂತಿ ಹರಿದಾಡುತ್ತಿತ್ತು. ಅದರೀಗ ರಾಜ್ಯಪಾಲರ ನೇಮಕದಿಂದ ಈ ವದಂತಿ ಸುಳ್ಳಲ್ಲ ಎಂಬುವುದು ಸ್ಪಷ್ಟವಾಗಿದೆ. ಉತ್ತರ ಪ್ರದೇಶದ ರಾಜ್ಯಪಾಲ 85  ವರ್ಷದ ರಾಮ ನಾಯ್ಕ್ ರಿಗೆ ವಿರಾಮ ನೀಡಲಾಗಿದ್ದು, ಅವರ ಸ್ಥಾನಕ್ಕೆ ಮಧ್ಯಪ್ರದೇಶದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದ ಆನಂದಿಬೆನ್‌ರನ್ನು ನೇಮಿಸಲಾಗಿದೆ. 

ಇನ್ನು ಬಿಹಾರಕ್ಕೆ ರಾಜ್ಯಪಾಲರಾಗಿ ನೇಮಕಗೊಂಡ ಫಾಗೂ ಚೌಹಾನ್ ಉತ್ತರ ಪ್ರದೆಶದ ಹಿರಿಯ ನಾಯಕ ಎಂಬುವುದು ಉಲ್ಲೇಖನೀಯ. 1948ರ ಜನವರಿ 1ರಂದು ಜನಿಸಿದ್ದ ಫಾಗೂ ಚೌಹಾನ್ ಆಜಂಘಡದ ನಿವಾಸಿ. ಉತ್ತರ ಪ್ರದೇಶದ 17ನೇ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಶಾಸಕರಾದ ಕೀರ್ತಿ ಫಾಗೂ ಚೌಹಾನ್ ರದ್ದು. ಸದ್ಯ ಬಿಹಾರ ರಾಜ್ಯಪಾಲರಾಗಿ ನೇಮಿಸುವ ಮೂಲಕ ಪಕ್ಷ ಅವರಿಗೆ ಬಹುದೊಡ್ಡ ಜವಾಬ್ದಾರಿಯನ್ನು ವಹಿಸಿದೆ.