ನವದೆಹಲಿ/ಶ್ರೀನಗರ: ಇರಾಕ್‌ ಹಾಗೂ ಸಿರಿಯಾದಲ್ಲಿ ರಕ್ತದ ಕೋಡಿ ಹರಿಸಿದ್ದ, ಈಗ ಬಹುತೇಕ ದುರ್ಬಲಗೊಂಡಿರುವ ‘ಐಸಿಸ್‌’ (ಇಸ್ಲಾಮಿಕ್‌ ಸ್ಟೇಟ್‌) ಉಗ್ರ ಸಂಘಟನೆ ಭಾರತದಲ್ಲಿ ತನ್ನ ಪ್ರಾಂತ್ಯವೊಂದನ್ನು ರಚಿಸಿರುವುದಾಗಿ ಇದೇ ಮೊದಲ ಬಾರಿಗೆ ಘೋಷಿಸಿಕೊಂಡಿದೆ. ಆದರೆ ಆ ಪ್ರಾಂತ್ಯ ಯಾವುದು, ಎಲ್ಲಿದೆ ಎಂಬ ಸಂಗತಿಯನ್ನು ಸಂಘಟನೆ ಬಹಿರಂಗಪಡಿಸಿಲ್ಲ.

ತನ್ನ ಪ್ರಾಂತ್ಯವನ್ನು ‘ವಿಲಾಯಾಹ್‌ ಆಫ್‌ ಹಿಂದ್‌’ ಎಂದು ಐಸಿಸ್‌ ಕರೆದಿದೆ. ಈ ಕುರಿತು ಉಗ್ರ ಸಂಘಟನೆಗೆ ಸೇರಿದ ಅಮಾಖ್‌ ನ್ಯೂಸ್‌ ಏಜೆನ್ಸಿ ಶುಕ್ರವಾರ ತಡರಾತ್ರಿ ವರದಿ ಮಾಡಿದೆ. ಕಾಶ್ಮೀರದ ಶೋಪಿಯಾನ್‌ನಲ್ಲಿ ಶುಕ್ರವಾರ ಭದ್ರತಾ ಪಡೆಗಳು ಎನ್‌ಕೌಂಟರ್‌ ನಡೆಸಿ ಐಸಿಸ್‌ ಜತೆ ನಂಟು ಹೊಂದಿದ್ದ ಉಗ್ರನೊಬ್ಬನನ್ನು ಕೊಂದು ಹಾಕಿದ್ದವು. ಅದರ ಬೆನ್ನಿಗೇ ಪ್ರಾಂತ್ಯ ರಚನೆ ಕುರಿತ ‘ಬಾಂಬ್‌’ ಅನ್ನು ಐಸಿಸ್‌ ಹಾಕಿದೆ.

ಉಗ್ರ ಸಂಘಟನೆಯ ವಾಸ್ತವಿಕ ಆಡಳಿತವನ್ನು ಪ್ರತಿಂಬಿಸುವಂತಹ ಯಾವುದೇ ಭಾಗ ಇಲ್ಲದಿದ್ದರೂ, ಪ್ರಾಂತ್ಯ ರಚಿಸಿರುವುದಾಗಿ ಐಸಿಸ್‌ ಹೇಳುತ್ತಿರುವುದು ಶುದ್ಧ ಅಸಂಬದ್ಧ. ಹಾಗಂತ ಅದನ್ನು ತಳ್ಳಿ ಹಾಕಲು ಆಗುವುದಿಲ್ಲ ಎಂದು ಐಸಿಸ್‌ ಉಗ್ರರ ಮೇಲೆ ನಿಗಾ ಇಟ್ಟಿರುವ ‘ಸೈಟ್‌’ ಇಂಟೆಲ್‌ ಗ್ರೂಪ್‌ನ ನಿರ್ದೇಶಕಿ ರೀಟಾ ಕಾರ್ಟ್ ತಿಳಿಸಿದ್ದಾರೆ.

ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ ಇಶ್ಫಾಕ್‌ ಅಹಮದ್‌ ಸೋಫಿ ಎಂಬ ಉಗ್ರನನ್ನು ಭದ್ರತಾ ಪಡೆಗಳು ಶುಕ್ರವಾರ ಹತ್ಯೆ ಮಾಡಿದ್ದವು. ಕಳೆದೊಂದು ದಶಕದಿಂದ ಕಾಶ್ಮೀರದ ಹಲವು ಭಯೋತ್ಪಾದಕ ಸಂಘಟನೆಗಳ ಜತೆ ಗುರುತಿಸಿಕೊಂಡಿದ್ದ ಆತ, ಇತ್ತೀಚೆಗೆ ಇಸ್ಲಾಮಿಕ್‌ ಸ್ಟೇಟ್‌ ಪಾಳೆಯ ಸೇರಿದ್ದ. ಕಾಶ್ಮೀರದಲ್ಲಿ ಆ ಸಂಘಟನೆಯ ಜತೆ ನಂಟು ಹೊಂದಿದ್ದ ಏಕೈಕ ವ್ಯಕ್ತಿಯಾಗಿದ್ದ ಎಂದು ಭದ್ರತಾಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ, ಶೋಪಿಯಾನ್‌ ಎನ್‌ಕೌಂಟರ್‌ ಸಂದರ್ಭ ಯೋಧರಿಗೆ ಭಾರಿ ಹಾನಿಯಾಗಿದೆ ಎಂದು ಐಸಿಸ್‌ ಸುದ್ದಿಸಂಸ್ಥೆ ತಿಳಿಸಿದೆಯಾದರೂ, ಅದನ್ನು ಭದ್ರತಾ ಪಡೆಗಳು ನಿರಾಕರಿಸಿವೆ. ಗುಂಡಿನ ಚಕಮಕಿ ಆಯಿತು. ಉಗ್ರನನ್ನು ಹೊಡೆದುರುಳಿಸಲಾಯಿತು. ಹಾನಿಯಾಗಿಲ್ಲ ಎಂದು ತಿಳಿಸಿವೆ. ಆದರೆ, ಸೋಫಿ ಈ ಹಿಂದೆ ಭದ್ರತಾ ಪಡೆಗಳ ಮೇಲೆ ಹಲವಾರು ಬಾರಿ ಗ್ರೆನೇಡ್‌ ದಾಳಿ ನಡೆಸಿದ್ದ ಎನ್ನಲಾಗಿದೆ.