ಭ್ರಷ್ಟಾಚಾರದ ಕಾಮಗಾರಿಯ ವಿರುದ್ಧ ಸಾಗರದ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುವ ಜತೆಗೆ ಹಿರಿಯ ಅಧಿಕಾರಿಗಳು, ಅರಣ್ಯ ಮಂತ್ರಿಗೂ ದೂರು ನೀಡಲಾಗಿದೆ. ಅಧಿಕಾರಿಗಳಿಗೆ ಮಾತಿನ ಚಾಟಿಯ ಮೂಲಕ ಕರ್ತವ್ಯ ನೆನಪಿಸುವ ಕಾಗೋಡು ತಿಮ್ಮಪ್ಪ ತಮ್ಮ ಆಪ್ತ ಅಧಿಕಾರಿಯ ಭ್ರಚ್ಟಾಚಾರಕ್ಕೆ ಏನಂತಾ ಉತ್ತರಿಸುತ್ತಾರೆ?
ಶಿವಮೊಗ್ಗ (ಫೆ.16): ಆತ ಐಎಫ್ಎಸ್ ಅಧಿಕಾರಿಯಲ್ಲ. ಆದರೂ ಐಎಫ್ಎಸ್ ಅಧಿಕಾರದ ಭಾಗ್ಯ. ನಿಯಮ ಮೀರಿ ಪ್ರಭಾರಿ ಹುದ್ದೆಯಲ್ಲಿ ದರ್ಬಾರ್ ನಡೆಸುತ್ತಿರುವ ಆ ಅಧಿಕಾರಿ ಕೆಲಸ ಮಾಡಿದ್ದಕ್ಕಿಂತ ನುಂಗಿದ್ದೇ ಹೆಚ್ಚು. ಖಡಕ್ ಸಚಿವರು ಎಂದೇ ಹೆಸರಾಗಿದ್ದ ಸಚಿವ ಕಾಗೋಡು ತಿಮ್ಮಪ್ಪನವರ ಸ್ವಕ್ಷೇತ್ರದಲ್ಲಿ ಮೆರೆದಾಡುತ್ತಿರೋ ಗೋಲ್ಮಾಲ್ ಅಧಿಕಾರಿಯ ಒಂದು ಏಕ್ಸ್ ಕ್ಲೂಸಿವ್ ವರದಿ ಇಲ್ಲಿದೆ.
ಈ ಅಧಿಕಾರಿ ಹೆಸರು ಮೋಹನ್ ಗಂಗೊಳ್ಳಿ. ಪ್ರಭಾರ ಹುದ್ದೆ ನಿರ್ವಹಿಸುವುದಕ್ಕೆ ಕಾನೂನು ಪ್ರಕಾರ ಕೇವಲ 6 ತಿಂಗಳು ಅವಕಾಶ ಇದೆ. ಆದರೆ ಈತ ಮಾತ್ರ ಮೂರೂವರೆ ವರ್ಷಗಳಿಂದ ಎರೆಡೆರಡು ಹುದ್ದೆ ನಿರ್ವಹಿಸ್ತಿದ್ದಾನಂತೆ. ಅಷ್ಟಕ್ಕೂ ಇಂಥದ್ದೊಂದು ಭ್ರಷ್ಟ ಕುಳಕ್ಕೆ ಬೆಂಗಾವಲಾಗಿ ನಿಂತಿದ್ದು ಹಿರಿಯ ರಾಜಕಾರಣಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಹೀಗಂತ ಆ ಭಾಗದ ಜನರೇ ಹೇಳ್ತಿದ್ದಾರೆ.
ಸಾಗರ ಉಪ ವಿಭಾಗದ ಅರಣ್ಯ ಇಲಾಖೆಯ ಪ್ರಭಾರಿ ಡಿಎಫ್'ಓ, ಐಎಫ್'ಎಸ್'ಯೇತರ ಅಧಿಕಾರಿಯಾಗಿದ್ದರೂ ಐಎಫ್'ಎಸ್ ಅಧಿಕಾರಿ ಹುದ್ದೆಯಲ್ಲಿ ದರ್ಬಾರ್ ಮೆರೀತಿದ್ದಾನೆ. ಇನ್ನೂ ಈತ ಸಾಗರ ವಿಭಾಗದ ಪ್ರಭಾರ ವಹಿಸಿಕೊಳ್ಳುತ್ತಿದ್ದಂತೆ ನಡೆದಿರುವ ಭ್ರಷ್ಟಾಚಾರಕ್ಕೆ ಕೊನೆಯೇ ಇಲ್ಲ. ಕೂಣೆಹೊಸೂರು ಗ್ರಾಮದ ಬಳಿ ಸರ್ವೆ ನಂ 23 ರಲ್ಲಿ ಕಂದಕದ ಕಾಮಗಾರಿ ಹೆಸರಲ್ಲಿ ಹೊಡೆದಿದ್ದು ಲಕ್ಷಾಂತರ ರೂಪಾಯಿ.
ಮೋಹನ್ ಗಂಗೊಳ್ಳಿಯ ಭ್ರಷ್ಟಾಚಾರದ ಮತ್ತೊಂದು ಸ್ಯಾಂಪಲ್ ಇದು. ಸಾಗರ ತಾಲೂಕಿನ ಬಂದಗದ್ದೆ ಗ್ರಾಮದಲ್ಲಿ ಅರಣ್ಯ ಪಾಲಕರ ವಸತಿ ಗೃಹ ಕಾಮಗಾರಿಯನ್ನು 2015-16ರಲ್ಲೇ ಪೂರ್ಣ ಗೊಳಿಸಿದ್ದಾಗಿ ಸುಮಾರು 20 ಲಕ್ಷ ರೂಪಾಯಿ ಕಾಮಗಾರಿ ಹಣ ಪಾವತಿಸಲಾಗಿದೆ. ಅಸಲಿಗೆ ಕಾಮಗಾರಿಯೇ ಮುಗಿದಿಲ್ಲ.
ಭ್ರಷ್ಟಾಚಾರದ ಕಾಮಗಾರಿಯ ವಿರುದ್ಧ ಸಾಗರದ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುವ ಜತೆಗೆ ಹಿರಿಯ ಅಧಿಕಾರಿಗಳು, ಅರಣ್ಯ ಮಂತ್ರಿಗೂ ದೂರು ನೀಡಲಾಗಿದೆ. ಅಧಿಕಾರಿಗಳಿಗೆ ಮಾತಿನ ಚಾಟಿಯ ಮೂಲಕ ಕರ್ತವ್ಯ ನೆನಪಿಸುವ ಕಾಗೋಡು ತಿಮ್ಮಪ್ಪ ತಮ್ಮ ಆಪ್ತ ಅಧಿಕಾರಿಯ ಭ್ರಚ್ಟಾಚಾರಕ್ಕೆ ಏನಂತಾ ಉತ್ತರಿಸುತ್ತಾರೆ?
ವರದಿ: ರಾಜೇಶ್ ಕಾಮತ್
