ಅಮರಾವತಿ[ಜು.25]: ಖಾಸಗಿ ವಲಯದಲ್ಲಿಯೂ ಸ್ಥಳೀಯರಿಗೆ ಶೇ.75ರಷ್ಟುಉದ್ಯೋಗವಕಾಶ ಕಲ್ಪಿಸಲು ಅವಕಾಶ ಮಾಡಿಕೊಡುವ ಮಸೂದೆಗೆ ಆಂಧ್ರಪ್ರದೇಶ ವಿಧಾನಸಭೆ ಬುಧವಾರ ಅಂಗೀಕಾರ ನೀಡಿದೆ. ಈ ಮೂಲಕ ಇಂಥ ಮಸೂದೆ ಅಂಗೀಕರಿಸಿದ ಮೊದಲ ರಾಜ್ಯವಾಗಿ ಹೊರಹೊಮ್ಮಿದೆ.

ಉದ್ಯಮಗಳು ಹಾಗೂ ಕಾರ್ಖಾನೆಗಳ ಮಸೂದೆ-2019ರ ಅಂಗೀಕಾರದ ಪರಿಣಾಮ ಉದ್ಯಮಗಳು, ಫ್ಯಾಕ್ಟರಿಗಳು, ಜಂಟಿ ಉದ್ಯಮ ಘಟಕಗಳು ಹಾಗೂ ಸಾರ್ವಜನಿಕ ಸಹಯೋಗದಲ್ಲಿನ ಉದ್ಯಮಗಳ ನೇಮಕಾತಿಯಲ್ಲಿ ಸ್ಥಳೀಯರಿಗೆ ಶೇ.75 ಮೀಸಲಾತಿ ಕಲ್ಪಿಸಬೇಕು. ಒಂದು ವೇಳೆ ಕಾರ್ಖಾನೆ ಅಥವಾ ಉದ್ಯಮಕ್ಕೆ ಅಗತ್ಯವಿರುವ ಕೌಶಲ್ಯ ಸ್ಥಳೀಯ ಅಭ್ಯರ್ಥಿ ಬಳಿ ಇಲ್ಲದೆ ಇದ್ದಲ್ಲಿ, ಆತನಿಗೆ 3 ವರ್ಷಗಳಲ್ಲಿ ಅಗತ್ಯವಿರುವ ಕೌಶಲ್ಯದ ತರಬೇತಿ ನೀಡಬೇಕು ಎಂಬ ಅಂಶವನ್ನು ಮಸೂದೆಯಲ್ಲಿ ಸೇರಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಸಿಎಂ ಜಗನ್‌ ಮೋಹನ್‌ ರೆಡ್ಡಿ, ‘ಪ್ರತಿಯೊಂದು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಇಂಜಿನಿಯರಿಂಗ್‌ ಕಾಲೇಜುಗಳ ಜೊತೆಗೂಡಿ ಯುವಕರ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸಲಾಗುವುದು. ನಾವು ಈ ಭ್ರಷ್ಟವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತಿದ್ದು, ಯಾವೊಂದು ಉದ್ಯಮಿಗಳು ಯಾವುದೇ ಹಂತದಲ್ಲಿ ಯಾರಿಗೂ ಸಹ ಲಂಚ ನೀಡುವ ಅಗತ್ಯವಿಲ್ಲ. ಆದರೆ, ಸ್ಥಳೀಯ ಯುವಕರಿಗೆ ಉದ್ಯೋಗ ಕಲ್ಪಿಸುವುದು ಮಾತ್ರವೇ ಉದ್ಯಮಗಳ ಜವಾಬ್ದಾರಿ’ ಎಂದು ಹೇಳಿದರು.

ಈ ಹಿಂದೆ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ ಸಹ ರಾಜ್ಯದ ಕೈಗಾರಿಕೆ ಘಟಕಗಳಲ್ಲಿ ಸ್ಥಳೀಯ ಯುವಕರಿಗೆ ಶೇ.70 ಮೀಸಲಾತಿ ಕಲ್ಪಿಸುವ ಕಾನೂನು ರೂಪಿಸುವುದಾಗಿ ಹೇಳಿದ್ದರು.