ನವದೆಹಲಿ[ಫೆ.09]: ಬಿಜೆಪಿಯ ಉಕ್ಕಿನ ಮನುಷ್ಯ ಖ್ಯಾತಿಯ ಎಲ್‌.ಕೆ. ಅಡ್ವಾಣಿ ಸಂಸತ್ತಿನಲ್ಲಿ ತಮ್ಮ ಪ್ರಖರವಾದ ಭಾಷಣದಿಂದಲೇ ಖ್ಯಾತಿ ಗಳಿಸಿದವರು. ಆದರೆ, ಕಳೆದ 5 ವರ್ಷಗಳಲ್ಲಿ ಅಡ್ವಾಣಿ ಸಂಸತ್ತಿನಲ್ಲಿ ಮೌನಕ್ಕೆ ಶರಣಾಗಿದ್ದು, ದಾಖಲೆಗಳಲ್ಲಿ ಕಂಡುಬಂದಿದೆ.

ಸಂಸತ್‌ ಕಲಾಪದಲ್ಲಿ ಅಡ್ವಾಣಿ ಶೇ.92ರಷ್ಟು ಹಾಜರಾತಿ ಹೊಂದಿದ್ದರೂ, 5 ವರ್ಷದಲ್ಲಿ ವರು ಆಡಿದ್ದು ಕೇವಲ 365 ಶಬ್ದ ಮಾತ್ರ! ಅಡ್ವಾಣಿ ಅವರ ಮಾತಿನ ಪ್ರಖರತೆ ಹೇಗಿರುತ್ತಿತ್ತು ಎನ್ನುವುದಕ್ಕೆ 2012ರಲ್ಲಿ ಅಸ್ಸಾಂನ ಅಕ್ರಮ ವಲಸಿಗರ ವಿಷಯ ಹಾಗೂ ಜನಾಂಗೀಯ ಹಿಂಸೆಯ ಖಂಡಿಸಿ ಯುಪಿಎ- 2 ಸರ್ಕಾರದ ವಿರುದ್ಧ ಬಿಜೆಪಿ ಮಂಡಿಸಿದ್ದ ನಿಲುವಳಿ ಸೂಚನೆಯ ಮೇಲಿನ ಚರ್ಚೆ ಒಂದು ಉದಾಹರಣೆ.

ಚರ್ಚೆಯ ವೇಳೆ ಸುದೀರ್ಘ ಭಾಷಣ ಮಾಡಿದ್ದ ಅಡ್ವಾಣಿ 5000 ಶಬ್ದಗಳನ್ನು ಆಡಿದ್ದರು. 2009-ರಿಂದ 2014ರ ಅವಧಿಯಲ್ಲಿ ಅವರು 42 ಚರ್ಚೆಗಳಲ್ಲಿ ಪಾಲ್ಗೊಂಡು 35,926 ಶಬ್ದ ಆಡಿದ್ದಾರೆ. ಆದರೆ, ವಿಪರ್ಯಾಸವೆಂದರೆ 2014ರ ಬಳಿಕ ಅಡ್ವಾಣಿ ಲೋಕಸಭೆಯಲ್ಲಿ ಉಚ್ಚರಿಸಿದ ಶಬ್ದಗಳು ಕೇವಲ 365. 2014ರ ಡಿ.19ರ ಬಳಿಕ ಲೋಕಸಭೆಯಲ್ಲಿ ಅಡ್ವಾಣಿ ಒಂದೇ ಒಂದು ಶಬ್ದವನ್ನೂ ಆಡಿಲ್ಲ.