ಇಸ್ಲಾಮಾಬಾದ್‌[ಮೇ.08]: ಭಾರತದ ನೂತನ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರಿಗೆ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಶಿ ಶುಕ್ರವಾರ ಪತ್ರ ಬರೆದಿದ್ದು, ಎಲ್ಲಾ ಪ್ರಮುಖ ವಿಷಯಗಳ ಕುರಿತು ಭಾರತದೊಂದಿಗೆ ಚರ್ಚೆಗೆ ಪಾಕಿಸ್ತಾನ ಸಿದ್ಧ ಎಂದಿದ್ದಾರೆ.

ಪ್ರಾದೇಶಿಕ ಶಾಂತಿ ಕಾಯ್ದುಕೊಳ್ಳಲು ಬದ್ಧತೆಯೊಂದಿಗೆ, ಇಸ್ಲಾಮಾಬಾದ್‌ ಮತ್ತು ದೆಹಲಿ ನಡುವಿನ ಎಲ್ಲ ಮಹತ್ವದ ವಿಷಯಗಳ ಕುರಿತು ಮಾತುಕತೆಗೆ ಮುಂದಾಗೋಣ ಎಂದು ಪತ್ರದಲ್ಲಿ ಕೋರಿದ್ದಾರೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ಖಾನ್‌ ಕೂಡ ಮೇ 26ರಂದು ಪ್ರಧಾನಿ ನರೇಂದ್ರ ಮೋದಿ ಜತೆ ಮಾತುಕತೆ ನಡೆಸಿ ಪ್ರಾದೇಶಿಕ ಶಾಂತಿ ಮತ್ತು ಸಮೃದ್ಧಿಗೆ ಜತೆಯಾಗಿ ಹೋಗೋಣ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮೋದಿ, ಹಿಂಸೆ ರಹಿತ ವಾತಾವರಣ ಸೃಷ್ಟಿ, ಪರಸ್ಪರ ವಿಶ್ವಾಸ ಹಾಗೂ ಭಯೋತ್ಪಾದನೆ ನಿರ್ಮೂಲನೆಯಿಂದ ಮಾತ್ರ ಪ್ರಾದೇಶಿಕ ಶಾಂತಿ ಸಾಧ್ಯ ಎಂದು ಸ್ಪಷ್ಟಪಡಿಸಿದ್ದರು.