ಇಸ್ಲಾಮಾಬಾದ್(ಜು.25): ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರವೊಂದು ಅಧಿಕಾರಕ್ಕೆ ಬರುವುದನ್ನು ತಡೆಯಲು ಮೂಲಭೂತವಾದಿ ಶಕ್ತಿಗಳು ಇನ್ನಿಲ್ಲದಂತೆ ಪ್ರಯತ್ನ ನಡೆಸಿವೆ. ಮತದಾನದ ವೇಳೆ ಬಾಂಬ್ ದಾಳಿಗಳ ಮೂಲಕ ಜನರಲ್ಲಿ ಭಯ ಹುಟ್ಟಿಸುವ ತಂತ್ರವನ್ನು ಮೂಲಭೂತವಾದಿಗಳು ಮಾಡುತ್ತಿದ್ದಾರೆ. ಆದರೆ ಇವೆಲ್ಲವನ್ನು ಮೆಟ್ಟಿ ನಿಂತು ಪಾಕಿಸ್ತಾನದ ಜನ ಜನತಂತ್ರವನ್ನು ಯಶಸ್ವಿಗೊಳಿಸುತ್ತಾರಾ ಕಾದು ನೋಡಬೇಕಿದೆ.

ಈ ಬಾರಿ ಪಾಕಿಸ್ತಾದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ಪಕ್ಷ ಯಾವುದು ಎಂಬದು ಜಗತ್ತಿನ ಕುತೂಹಲ ಕೆರಳಿಸಿದೆ. ಕಾರಣ ಪ್ರಧಾನಿ ಪಟ್ಟ ಬಹುತೇಕ ಪೂರ್ವ ನಿರ್ಧಾರಿತ ಎಂಬುದು ಅದರ ಇತಿಹಾಸದಿಂದ ತಿಳಿಯುತ್ತದೆ. ಆದರೆ ಈ ಬಾರಿ ಅಂತಹ ವಾತಾವರಣ ಅಲ್ಲಿ ಇಲ್ಲ. ಹಲವು ರಾಜಕೀಯ ಪಕ್ಷಗಳು ಮತ್ತು ಪ್ರಭಾವಿ ವ್ಯಕ್ತಿಗಳು ಈ ಬಾರಿ ಪ್ರಧಾನಿ ಹುದ್ದೆಯ ರೇಸ್‌ನಲ್ಲಿದ್ದಾರೆ.

ಪಾಕಿಸ್ತಾನದ ಇತಿಹಾಸ ಕೆದಕಿದರೆ ಪ್ರಜಾತಾಂತ್ರಿಕ ದಾರಿಯ ಮೂಲಕ ಅಧಿಕಾರಕ್ಕೆ ಬಂದ ಸರ್ಕಾರಗಳನ್ನು  ಆಳಿದ್ದು ಭುಟ್ಟೋ ಮತ್ತು ಶರೀಫ್ ಮನೆತನವೇ. ಆದರೆ ಈ ಬಾರಿ ಮಾಜಿ ಕ್ರಿಕೆಟಿಗ, ಪಾಕಿಸ್ತಾನ್ ತೆಹ್ರಿಕ್-ಎ-ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಕೂಡ ಪ್ರಧಾನಿ ರೇಸ್‌ನಲ್ಲಿರುವುದು ವಿಶೇಷ.

ಪಾಕಿಸ್ತಾನ್ ತೆಹ್ರಿಕ್-ಎ-ಇನ್ಸಾಫ್ ಪಕ್ಷದ ಇಮ್ರಾನ್ ಖಾನ್, ಪಾಕಿಸ್ತಾನ್ ಮುಸ್ಲಿಂ ಲೀಗ್ ಪಕ್ಷದ (ನವಾಜ್ ಬಣ) ಶೆಹಬಾಜ್ ಶರೀಫ್ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಬಿಲಾವಲ್ ಭುಟ್ಟೋ ಜರ್ದಾರಿ ಈ ಬಾರಿಯ ಪ್ರಧಾನಿ ರೇಸ್ ನಲ್ಲಿರುವ ಪ್ರಮುಖರು.

332 ಸದಸ್ಯ ಬಲದ ಪಾಕಿಸ್ತಾನದ ನ್ಯಾಶನಲ್ ಅಸೆಂಬ್ಲಿಯಲ್ಲಿ 272 ಸಾಮಾನ್ಯ ಮತ್ತು 69 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ. ಇದರಲ್ಲಿ 166 ಸೀಟು ಗೆದ್ದ ಪಕ್ಷವೇ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯ.

ಪಾಕಿಸ್ತಾನದ ಜನತೆ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಯಾರ ಕೈ ಹಿಡಿಯಲಿದ್ದಾರೆ?, ಯಾರು ಪಾಕಿಸ್ತಾನದ ಮುಂದಿನ ಪ್ರಧಾನಿಯಾಗಲಿದ್ದಾರೆ?, ಮುಂದಿನ ನಾಗರಿಕ ಸರ್ಕಾರ ಪಾಕಿಸ್ತಾನದ ಕುರಿತು ಜಗತ್ತಿನ ವಿಶ್ಲೇಷಣೆ ಬದಲಿಸಲಿದೆಯಾ? ಎಂಬೆಲ್ಲಾ ಪ್ರಶ್ನೆಗಳಿಗೆ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ದೊರೆಯಲಿದೆ.