Asianet Suvarna News Asianet Suvarna News

ಕಾವೇರಿ ಉಳಿವಿಗೆ ಮತ್ತೊಂದು ಅಗ್ನಿ ಪರೀಕ್ಷೆ: ಸುಪ್ರೀಂಕೋರ್ಟ್‌ ತೀರ್ಪಿನತ್ತ ಎಲ್ಲರ ಚಿತ್ತ

Important Day For Kannadigas

ಬೆಂಗಳೂರು(ಸೆ.12): ಕಾವೇರಿ ಉಳಿವಿಗೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ. ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ಮುಂದುವರೆಸಬೇಕೋ, ಬೇಡವೋ ಎನ್ನುವ ನಿರ್ಧಾರ ಇಂದು ಸುಪ್ರೀಂಕೋರ್ಟ್'ನಲ್ಲಿ ಹೊರಬೀಳಲಿದೆ. ಮತ್ತೊಂದೆಡೆ ಇಂದೇ ಕಾವೇರಿ ಮೇಲುಸ್ತುವಾರಿ ಸಭೆ ನಡೆಯಲಿದೆ. ಹೀಗಾಗಿ ಸುಪ್ರೀಂಕೋರ್ಟ್ ಹಾಗೂ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ತೀರ್ಮಾನದತ್ತ ರಾಜ್ಯದ ಜನರ ಚಿತ್ತ ನೆಟ್ಟಿದೆ.

ರಾಜ್ಯದ ಪಾಲಿಗೆ ಇಂದು ಮಹತ್ವದ ದಿನ. ತಮಿಳುನಾಡಿಗೆ ಕನ್ನಡ ನಾಡಿನ ಜೀವನದಿ ಕಾವೇರಿ ಹರಿಯಬೇಕಾ? ಬೇಡವಾ ಎನ್ನುವ ನಿರ್ಧಾರ ಹೊರಬೀಳುವ ದಿನ. ಏನಾಗುತ್ತದೋ ಏನೋ ಎಂಬ ಆತಂಕದಿಂದಲೇ ಸುಪ್ರೀಂಕೋರ್ಟ್ ತೀರ್ಪನ್ನೇ  ಎದುರು ನೋಡುತ್ತಿದ್ದಾರೆ ಕಾವೇರಿ ಕೊಳ್ಳದ ಜನ.

ನಮ್ಮ ರಾಜ್ಯದ ಜಲಾಶಯಗಳಲ್ಲೂ ನೀರಿಲ್ಲದಿದ್ದರೂ, ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕಾವೇರಿ ಹರಿಯುತ್ತಿದ್ದಾಳೆ. ಇದನ್ನು ವಿರೋಧಿಸಿ ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಅದರಲ್ಲೂ ಮಂಡ್ಯದಲ್ಲಿ ಕಾವೇರಿ ಹೋರಾಟ ಜೋರಾಗಿಯೇ ನಡೆಯುತ್ತಿದೆ. ಇದರಿಂದ ಎಚ್ಚೆತ್ತಿರುವ ರಾಜ್ಯ ಸರ್ಕಾರ  ತಮಿಳುನಾಡಿಗೆ ನೀರು ಬಿಡುವಂತೆ ನೀಡಿರುವ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿ ಶನಿವಾರ ರಾತ್ರಿ  ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತು. ಕೋರ್ಟ್‌ ನ ಆದೇಶದಂತೆ ಈಗಾಗಲೇ 66 ಸಾವಿರ ಕ್ಯೂಸೆಕ್‌ ನೀರು ಹರಿಯ ಬಿಟ್ಟಿದ್ದೇವೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಮಾಡಲು ತೀವ್ರವಾದ ನೀರಿನ ಅಭಾವವಿದೆ. ಹೀಗಾಗಿ ಆದೇಶಕ್ಕೆ ಮಾರ್ಪಾಡು ಮಾಡಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ಸುಪ್ರೀಂಕೋರ್ಟ್‌ನಲ್ಲಿ  ನಡೆಯಲಿದೆ. ನ್ಯಾ.ದೀಪಕ್​ ಮಿಶ್ರಾ ನೇತೃತ್ವದಲ್ಲಿ ಇಂದು ಬೆಳಗ್ಗೆ 10.30ಕ್ಕೆ ವಿಚಾರಣೆ ನಡೆಯಲಿದ್ದು,  ರಾಜ್ಯದ ಜನರ ಚಿತ್ತ ಸುಪ್ರೀಂಕೋರ್ಟ್ ತೀರ್ಪಿನತ್ತ ನೆಟ್ಟಿದೆ.

ಬೆಳಗ್ಗೆ 11.30ಕ್ಕೆ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ 

ಇನ್ನೊಂದೆಡೆ ಕಡೆ ಇವತ್ತೇ ಕೇಂದ್ರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಶಶಿಶೇಖರ್​ ನೇತೃತ್ವದಲ್ಲಿ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ  ನಡೆಯಲಿದೆ. ಇಲ್ಲಿ ಕೂಡ ತಮಿಳುನಾಡಿಗೆ ನೀರು ಬಿಡುವ ಕೋರ್ಟ್​ ಆದೇಶದ ಕುರಿತು ಕರ್ನಾಟಕ ತನ್ನ ಆಕ್ಷೇಪಣೆ ಸಲ್ಲಿಸಿದೆ. ಬೆಳಗ್ಗೆ 11.30ಕ್ಕೆ  ಶ್ರಮಶಕ್ತಿ ಭವನದಲ್ಲಿ ಮೇಲುಸ್ತುವಾರಿ ಸಮಿತಿ ಸಭೆ ನಡೆಯಲಿದ್ದು, ಕರ್ನಾಟಕ, ತಮಿಳುನಾಡು , ಕೇರಳ ಹಾಗೂ ಪುದುಚೇರಿ ರಾಜ್ಯಗಳ ಮುಖ್ಯಕಾರ್ಯದರ್ಶಿಗಳು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಕೋರ್ಟ್​ ತೀರ್ಪು, ಮತ್ತು ಮೇಲುಸ್ತುವಾರಿ ಸಮಿತಿ ನಿರ್ಧಾರದತ್ತ  ರಾಜ್ಯದ ಚಿತ್ತ ನೆಟ್ಟಿದೆ.

Follow Us:
Download App:
  • android
  • ios