Asianet Suvarna News Asianet Suvarna News

ಸಲಿಂಗಿಗಳಿಗೆ ಸುಪ್ರೀಂಕೋರ್ಟ್ ತೀರ್ಪು ಏಕೆ ಮುಖ್ಯ?

ಸಮ್ಮತಿಯ ಸಲಿಂಗಕಾಮವನ್ನು ಅಪರಾಧ ಎಂದು ಸಾರುವ 158 ವರ್ಷದಷ್ಟು ಹಳೆಯದಾದ ಐಪಿಸಿ ಸೆಕ್ಷನ್‌ 377ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತಂತೆ ಸುಪ್ರೀಂಕೋರ್ಟ್‌ ಮಹತ್ವದ  ತೀರ್ಪು ಪ್ರಕಟಿಸಿದ್ದು, ಸಲಿಂಗ ಕಾಮ ಅಪರಾಧವಲ್ಲ ಎಂದು ಹೇಳಿದೆ. 

Importance of Supreme Court verdict on Gay sex
Author
Bengaluru, First Published Sep 7, 2018, 9:37 AM IST

ಬೆಂಗಳೂರು (ಸೆ. 07): ಕೆಲ ತಿಂಗಳುಗಳ ಹಿಂದೆ ಒಬ್ಬ ಅವಿವಾಹಿತ ಯುವಕ ನನ್ನನ್ನು ಕಾಣಲೆಂದು ಆಸ್ಪತ್ರೆಗೆ ಬಂದಿದ್ದ. ಉತ್ತರ ಕರ್ನಾಟಕದ ಒಂದು ಸಣ್ಣ ಊರಿನಲ್ಲಿ ಓದಿ ಬೆಳೆದಿದ್ದ ಅವನ ಕೋರಿಕೆ, ತನ್ನ ಸಲಿಂಗ ಆಕರ್ಷಣೆಯನ್ನು ಕಡಿಮೆಗೊಳಿಸಿ ಎಂಬುದಾಗಿತ್ತು.

ಗಂಡಾಗಿ ಹುಟ್ಟಿ ಇನ್ನೊಬ್ಬ ಗಂಡಿನೆಡೆಗೆ ಆಕರ್ಷಿತನಾಗುವುದು ಅವನಲ್ಲಿ ಅಸಹ್ಯದ ಭಾವನೆಗಳನ್ನು ಮೂಡಿಸಿತ್ತು. ಸಮಗ್ರವಾಗಿ ಅವನೊಂದಿಗೆ ಸಮಾಲೋಚಿಸಿದಾಗ ಗೊತ್ತಾದದ್ದು, ಸಮಾಜ ತನ್ನನ್ನು ಹಾಗೂ ತನ್ನ ಲೈಂಗಿಕ ಆಕರ್ಷಣೆಯನ್ನು ಎಲ್ಲಿ ಹೀನಾಯವಾಗಿ ಕಾಣುತ್ತದೋ ಎಂಬ ಭಯ ಅವನನ್ನು ಇಷ್ಟು ದೂರದವರೆಗೆ ಕರೆ ತಂದಿತ್ತು. ಅದಕ್ಕಾಗಿ ಅವನು ಯಾವುದೇ ರೀತಿಯ ಚಿಕಿತ್ಸೆಗೆ ಒಳಗಾಗಲು ತಯಾರಿದ್ದ ಕೂಡ. ಅವನ ಆತಂಕ, ಭಯಗಳನ್ನು ಒಪ್ಪುತ್ತಲೇ ಪ್ರಕೃತಿಯ ವೈವಿಧ್ಯಗಳಲ್ಲಿ ಒಂದಾದ ಲೈಂಗಿಕ ಅಭಿಮುಖತೆಗಳ ಬಗ್ಗೆ ವಿವರಿಸತೊಡಗಿದೆ.

ಆತನಿಗೆ ಅದ್ಯಾವುದೂ ಬೇಡವಾಗಿತ್ತು. ಹೇಗಾದರೂ ಸರಿ ತಾನು ಒಂದು ಹೆಣ್ಣಿನ ಬಗ್ಗೆ ಆಕರ್ಷಿತನಾಗುವಂತೆ ಮಾಡಿ ಎಂಬುದಷ್ಟೇ ಅವನ ಬೇಡಿಕೆಯಾಗಿತ್ತು. ಲೈಂಗಿಕ ಅಲ್ಪಸಂಖ್ಯರು ಅನುಭವಿಸುವ ಒತ್ತಡಕ್ಕೆ  ಇದು ಒಂದು ಉದಾಹರಣೆಯಷ್ಟೆ.

ಜಾತಿ, ಜನಾಂಗ, ಧರ್ಮ, ಲಿಂಗ, ಲೈಂಗಿಕತೆ ಈ ಯಾವುದೇ ಅಲ್ಪಸಂಖ್ಯಾತರು, ಬಹುಸಂಖ್ಯಾತರಿಂದ ನೇರವಾಗಿ ಅಥವಾ ಪರೋಕ್ಷವಾಗಿ ತಮ್ಮ ಕುರಿತೇ ಹಲವು ಬಗೆಯ ನೇತ್ಯಾತ್ಮಕ ಧೋರಣೆಗಳನ್ನು ಬೆಳೆಸಿಕೊಳ್ಳಬಹುದು. ಇದನ್ನು ಇನ್ನಷ್ಟು ಸಂಕೀರ್ಣಗೊಳಿಸುವುದು ನಮ್ಮ ಕಾನೂನು ಕಾಯಿದೆಗಳು.

ಸಾಮಾಜಿಕ ತಾರತಮ್ಯಗಳ ಜೊತೆ ಜೊತೆಗೆ ನ್ಯಾಯ ವ್ಯವಸ್ಥೆ ಕೂಡ ಅಲ್ಪಸಂಖ್ಯಾತರ ಬಗ್ಗೆ ತಾರತಮ್ಯ ಮಾಡಿದಾಗ ಅದು ವ್ಯಕ್ತಿಯ ಮೇಲೆ ಬೀರಬಹುದಾದ ದುಷ್ಪರಿಣಾಮಗಳನ್ನು ಊಹಿಸಿ ನೋಡಿ. ಭಾರತೀಯ ದಂಡಸಂಹಿತೆ 377 ಕಳೆದ 157 ವರ್ಷಗಳಿಂದ ಮಾಡಿದ್ದು ಇದನ್ನೇ.

ಈಗ ಭಾರತೀಯ ಲಿಂಗ/ ಲೈಂಗಿಕ ಅಲ್ಪಸಂಖ್ಯಾತನ ಆಕಾಶದಲ್ಲಿ ಹೊಸ ಸೂರ್ಯ ಮೂಡಿದೆ. ದೇಶದ ಪರಮೋಚ್ಚ ನ್ಯಾಯಾಲಯ ಇಬ್ಬರು ವಯಸ್ಕರ ನಡುವೆ ಖಾಸಗಿಯಾಗಿ ಜರುಗುವ ಲೈಂಗಿಕ ಕ್ರಿಯೆಗಳಿಗೆ ಸೆಕ್ಷನ್ 377 ಅನ್ವಯವಾಗದು ಎಂದಿದೆ.

ಮಾನವ ಹಕ್ಕುಗಳಿಗೆ ದೊರೆತ ಒಂದು ದೊಡ್ಡ ಗೆಲುವು ಇದೆನ್ನಬಹುದು. 2013 ರ ತೃತೀಯ ಲಿಂಗಿಗಳ ಕುರಿತಾದ ತೀರ್ಪು ಹಾಗೂ 2017 ರ ಖಾಸಗಿತನದ ಕುರಿತಾದ ತೀರ್ಪುಗಳಿಂದ ಪರಮೋಚ್ಚ ನ್ಯಾಯಾಲಯದ ಕುರಿತು ಆಶಾದಾಯಕವಾಗಿದ್ದ ಭಾರತೀಯ ಲಿಂಗ/ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಉತ್ತೇಜನಕಾರಿ ತೀರ್ಪು ಇದಾಗಿದೆ.

ಲೈಂಗಿಕ ಆರೋಗ್ಯ ಬಹಳ ಮುಖ್ಯ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಚಂದ್ರಚೂಡ್ ಅವರು ಗಮನಿಸಿದಂತೆ ಸೆಕ್ಷನ್ 377 ಕೇವಲ ಲೈಂಗಿಕ ಕ್ರಿಯೆಯನ್ನಷ್ಟೇ ಅಪರಾಧ ಮಾಡುವುದಿಲ್ಲ. ಮುಖ್ಯವಾಗಿ ಅದು ಸಂಗಾತಿಯ ಆಯ್ಕೆಯನ್ನು ಅಪರಾಧವಾಗಿಸುತ್ತದೆ.

ಇದು ಸಂವಿಧಾನದ 21 ನೇ ಅನುಚ್ಛೇದಕ್ಕೆ ವ್ಯತಿರಿಕ್ತವಾಗಿದ್ದು, ವ್ಯಕ್ತಿಯ ಘನತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಅಲ್ಲಗಳೆಯುತ್ತದೆ. ಮನೋವಿಜ್ಞಾನವು ಮನುಷ್ಯ ಕಲ್ಯಾಣಕ್ಕೆ ತೊಡಗಿಸಿಕೊಳ್ಳುವುದೇ ಆದರೆ ಮನುಷ್ಯ ಕಲ್ಯಾಣಕ್ಕೆ ಒದಗಬಹುದಾದ ಅಡ್ಡಿ ಆತಂಕಗಳ ಕುರಿತೂ ಅದು ಚಿಂತಿಸಬೇಕಾಗುತ್ತದೆ.

ಲೈಂಗಿಕ ಅಭಿಮುಖತೆ ಎಂದರೆ ಒಬ್ಬ ವ್ಯಕ್ತಿಯ ದೀರ್ಘಕಾಲೀನ ಭಾವನಾತ್ಮಕ, ಪ್ರಾಣಯಿಕ ಮತ್ತು ಲೈಂಗಿಕ ಆಕರ್ಷಣೆ. ಈ ಆಕರ್ಷಣೆ ಗಂಡು ಹೆಣ್ಣು ಅಥವಾ ಇಬ್ಬರೆಡೆಗೂ ಇರಬಹುದು. ಲೈಂಗಿಕ ಅಭಿಮುಖತೆಯು ಈ ಆಕರ್ಷಣೆಗಳ ತಳಹದಿಯಲ್ಲಿ ಮೂಡುವ ವ್ಯಕ್ತಿಯ ಅಸ್ಮಿತೆ. ಅದರ ಜೊತೆಗಿನ ವ್ಯಕ್ತಿಚರ್ಯೆಗಳು ಹಾಗೆಯೇ ಈ ಆಕರ್ಷಣೆಗಳನ್ನುಹಂಚಿಕೊಳ್ಳುವಂತಹ ಸಮುದಾಯಗಳಲ್ಲಿನ ಪಾಲ್ಗೊಳ್ಳುವಿಕೆಯನ್ನೂ ಒಳಗೊಳ್ಳಬಹುದು.

ನಾವು ನಮ್ಮ ಲೈಂಗಿಕ ಅಭಿಮುಖತೆಯನ್ನು ಇತರರೊಂದಿಗಿನ ಚರ್ಚೆಗಳ ಮುಖಾಂತರ ಕೂಡ ವ್ಯಕ್ತಪಡಿಸುತ್ತೇವೆ. ಉದಾಹರಣೆಗೆ ಕೈಕೈ ಹಿಡಿದುಕೊಳ್ಳುವುದು, ತಬ್ಬಿಕೊಳ್ಳುವುದು ಇತ್ಯಾದಿ. ಲೈಂಗಿಕ ವರ್ತನೆಗಳಷ್ಟೇ ಅಲ್ಲದೆ ಸಂಗಾತಿಗಳು ಅಲೈಂಗಿಕ ನಿಕಟತೆ, ಪರಸ್ಪರ ಬೆಂಬಲ, ಮೌಲ್ಯ ಮತ್ತು ಜೀವನೋದ್ದಿಶ್ಯಗಳ ಹಂಚಿಕೊಳ್ಳುವಿಕೆ ಮತ್ತು ನಿರಂತರ ಬಾಂಧವ್ಯಗಳನ್ನು ತೋರಿಸಬಹುದು.

ಆದ್ದರಿಂದಲೇ ಲೈಂಗಿಕ ಅಭಿಮುಖತೆ ಕೇವಲ ವೈಯಕ್ತಿಕ ಗುಣಲಕ್ಷಣ ಎನ್ನುವುದು ಸರಿಯಾದ ಮಾತಲ್ಲ. ಲೈಂಗಿಕ ಅಭಿಮುಖತೆಯು ಯಾವ ಒಂದು ಗುಂಪಿನಲ್ಲಿ ಒಬ್ಬ ವ್ಯಕ್ತಿಯು ತೃಪ್ತಿಕರ ಮತ್ತು ಪರಿಪೂರ್ಣ ಸಂಬಂಧಗಳನ್ನು ಹೊಂದಲು ಸಾಧ್ಯವೋ ಅದೆಲ್ಲವನ್ನೂ ಒಳಗೊಂಡಿದೆ.

ವ್ಯಕ್ತಿ ಇವುಗಳಿಂದ ವಂಚಿತರಾದಾಗ ಸಾಕಷ್ಟು ಮಾನಸಿಕ ತುಮುಲಗಳಲ್ಲಿ ಸಿಲುಕಬಹುದು. ವ್ಯಕ್ತಿಯ ಆತ್ಮಗೌರವಕ್ಕೆ ಧಕ್ಕೆಯಾಗುವುದು ಖಿನ್ನತೆ, ಆತಂಕದ ರೋಗಗಳಿಗೆ ಎಡೆ ಮಾಡಬಹುದು. ಅಲ್ಲದೆ ಸಮಾಜದ ಮತ್ತು ಕುಟುಂಬಗಳ ಒತ್ತಡದಿಂದಾಗಿ ಆಕರ್ಷಣೆ ಇರದಾಗ್ಯೂ ಅನ್ಯಲಿಂಗಿಯ ಜೊತೆ ಮದುವೆಗಳು ನಡೆಯುವುದರಿಂದಾಗುವ ಪರಿಣಾಮಗಳ ಬಗ್ಗೆಯೂ ನಾವು ಕೇಳಿದ್ದೇವೆ.

ಲೈಂಗಿಕ ಅಲ್ಪಸಂಖ್ಯಾತ ಯುವಜನತೆಯಲ್ಲಿ ಆತ್ಮಹತ್ಯೆಯ ಪ್ರಕರಣಗಳು ದುಪ್ಪಟ್ಟಿರುವುದನ್ನು ಈಗಾಗಲೇ ಗಮನಿಸಿದ್ದೇವೆ. ತಮ್ಮ ಲೈಂಗಿಕ ಅಭಿಮುಖತೆಯನ್ನು ಸಕಾರಾತ್ಮಕವಾಗಿ ಒಪ್ಪಿಕೊಂಡವರ ಜೀವನದ ಗುಣಮಟ್ಟ ಹೆಚ್ಚುತ್ತದೆ ಎಂಬುದೂ ಸಾಬೀತಾಗಿದೆ. ಅಧ್ಯಯನಗಳ ಪ್ರಕಾರ ತಮ್ಮ ಲೈಂಗಿಕ ಅಭಿಮುಖತೆಯ ಬಗ್ಗೆ ಇತ್ಯಾತ್ಮಕ ಧೋರಣೆ ಬೆಳೆಸಿಕೊಂಡು ಅದನ್ನು ತಮ್ಮ ಜೀವನದೊಟ್ಟಿಗೆ ಸಮೀಕರಿಸಿಕೊಂಡವರು ಮಾನಸಿಕವಾಗಿ ಹೆಚ್ಚು ಆರೋಗ್ಯಪೂರ್ಣರಾಗಿರುತ್ತಾರೆ.

ಆಗಬೇಕಾದ್ದು ಇನ್ನೂ ಸಾಕಷ್ಟಿದೆ. ಬದಲಾಗುತ್ತಿರುವ ಸಮಾಜದ ಜೊತೆಗೆ ಕಾನೂನು ಕೂಡ ಬದಲಾಗಿರುವುದು ಸ್ವಾಗತಾರ್ಹ. ವೈದ್ಯಕೀಯ ಮತ್ತು ಮನೋವೈಜ್ಞಾನಿಕ ಸಂಘ ಸಂಸ್ಥೆಗಳು ಇನ್ನಷ್ಟು ಬೆಂಬಲವನ್ನು ಈ ಸಮುದಾಯಕ್ಕೆ ತೋರಬೇಕಿದೆ.

ಧಾರ್ಮಿಕ ಮತ್ತು ಸಾಮಾಜಿಕ ಮಡಿವಂತಿಕೆಗಳು ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಕುರಿತು ಚರ್ಚಿಸಬೇಕಿದೆ. ಸಲೈಂಗಿಕ ಸಾಂಗತ್ಯಗಳಿಗೆ ಮನ್ನಣೆ, ಲೈಂಗಿಕ ಅಭಿಮುಖತೆಯಿಂದಾಗುವ ತಾರತಮ್ಯ ಮತ್ತು ಬೆದರಿಕೆಗಳನ್ನು ಹತ್ತಿಕ್ಕುವಿಕೆ ಮುಂತಾಗಿ ಇನ್ನೂ ನಾವು ಸಾಧಿಸಬೇಕಾದ್ದು ಬೇಕಾದಷ್ಟಿದೆ.

ಲೇಖನದ ಮೊದಲಲ್ಲಿ ಉಲ್ಲೇಖಿಸಿದ ಯುವಕನಂತಹ ಜನರಲ್ಲಿ ತಮ್ಮ ದೇಹದ ಬಗ್ಗೆ ತಮ್ಮ ಆಕರ್ಷಣೆಯ ಬಗೆಗೆ ಇತ್ಯಾತ್ಮಕ ಧೋರಣೆಗಳನ್ನು ಮೂಡಿಸಬೇಕಿದೆ. ಸಲಿಂಗಿಗಳಿಗೆ ಗೌರವಯುತ ಬದುಕನ್ನು ಒದಗಿಸುವ ನಿಟ್ಟಿನಲ್ಲಿ ಈಗಿನ ತೀರ್ಪು ಒಂದು ಆರಂಭವಷ್ಟೆ.  

-ಮೋಹನ್ ರಾಜು 

ಚಿಕಿತ್ಸಕ ಮನೋವಿಜ್ಞಾನಿ 

Follow Us:
Download App:
  • android
  • ios