Asianet Suvarna News Asianet Suvarna News

ಇಸ್ರೇಲ್'ಗೆ ಕಾಲಿಡುವ ಮೊದಲ ಭಾರತೀಯ ಪ್ರಧಾನಿ ನರೇಂದ್ರ ಮೋದಿ; ಏನಿದರ ಒಳಗುಟ್ಟು?

ಅಮೆರಿಕ ದೇಶವು ಕಡಲಿನ ಕಣ್ಗಾವಲಿನ ಉದ್ದೇಶಕ್ಕೆ 22 ಡ್ರೋನ್'ಗಳನ್ನು ಭಾರತಕ್ಕೆ ನೀಡಿತ್ತು. ಆದರೆ, ಇಸ್ರೇಲ್ ದೇಶವು ಕಣ್ಗಾವಲಿಗಷ್ಟೇ ಅಲ್ಲ, ಯುದ್ಧಕ್ಕೂ ಸಿದ್ಧವಿರುವ ಡ್ರೋನ್'ಗಳನ್ನು ಭಾರತಕ್ಕೆ ಮಾರಾಟ ಮಾಡಲು ಸಿದ್ಧವಿದೆ. ಹಿಂದಿನ ಯುಪಿಎ ಸರಕಾರ ಇಸ್ರೇಲ್'ನ ಪ್ರಬಲ ಹೆರೋನ್ ಟಿಪಿ ಡ್ರೋನ್'ಗಳನ್ನು ಕೊಳ್ಳಲು ಮೀನ-ಮೇಷ ಎಣಿಸಿತ್ತು. ಈಗ ಮೋದಿಯು ದೇಶದ ಪ್ರಧಾನಿಯಾಗಿರುವಾಗ ಇಂತಹ ಯೋಜನೆಗಳು ತಡೆಯಿಲ್ಲದೇ ಅನುಷ್ಠಾನಗೊಳ್ಳಲಿವೆ.

importance of modi visit to israel
  • Facebook
  • Twitter
  • Whatsapp

ನವದೆಹಲಿ(ಜುಲೈ 03): ಪ್ರಧಾನಿ ನರೇಂದ್ರ ಮೋದಿ ನಾಳೆ ಮಂಗಳವಾರ ಇಸ್ರೇಲ್'ಗೆ ನೆಲಕ್ಕೆ ಕಾಲಿಡುತ್ತಿದ್ದಾರೆ. ಇಷ್ಟೇ ಆಗಿದ್ದರೆ ಮೋದಿಯ ಅಸಂಖ್ಯಾತ ವಿದೇಶ ಪ್ರವಾಸಗಳಲ್ಲಿ ಇದೂ ಒಂದಾಗಿರುತ್ತಿತ್ತು. ಆದರೆ, ಮೋದಿಯವರ ಇಸ್ರೇಲ್ ಭೇಟಿ ಅಕ್ಷರಶಃ ಐತಿಹಾಸಿಕವಾಗಿದೆ. ಹಲವು ರೀತಿಯ ಸಂಚಲನಗಳು ಸೃಷ್ಟಿಯಾಗಲಿವೆ. ಭಾರತದ ಈ ಹಿಂದಿನ ಯಾವ ಪ್ರಧಾನಿ ಮತ್ತು ರಾಷ್ಟ್ರಪತಿಗಳು ಮಾಡದ ಧೈರ್ಯವನ್ನು ಮೋದಿ ತೋರಿಸಿದ್ದಾರೆ. ಇಸ್ರೇಲ್'ಗೆ ಕಾಲಿಡುವ ಭಾರತದ ಮೊದಲ ಪ್ರಧಾನಿ ಎನಿಸಿದ್ದಾರೆ. ಇದೊಂದೇ ಕಾರಣಕ್ಕೆ ಈ ಭೇಟಿ ಇಷ್ಟೊಂದು ಮಹತ್ವ ಪಡೆದುಕೊಂಡಿಲ್ಲ. ಭಾರತ ಮತ್ತು ಇಸ್ರೇಲ್ ನಡುವಿನ ಬಾಂಧವ್ಯ ಹಾಗೂ ಇಸ್ರೇಲ್ ಬಗ್ಗೆ ಪ್ರಧಾನಿ ಮೋದಿ ಹೊಂದಿರುವ ಸಹಜ ಆರಾಧನಾ ಭಾವನೆ ಇತ್ಯಾದಿ ಹಲವು ಸ್ತರಗಳಲ್ಲಿ ಈ ಭೇಟಿಯನ್ನು ಅವಲೋಕಿಸಬಹುದು.

1) ಮಿಲಿಟರಿ ಒಪ್ಪಂದಗಳು:
ಶಸ್ತ್ರಾಸ್ತ್ರ ಆಮದು ರಾಷ್ಟ್ರಗಳಲ್ಲಿ ಭಾರತದ್ದು 2ನೇ ಸ್ಥಾನ. ಭಾರತಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿರುವ ರಾಷ್ಟ್ರಗಳಲ್ಲಿ ಅಮೆರಿಕ ಮತ್ತು ರಷ್ಯಾವನ್ನು ಹಿಂದಿಕ್ಕಿ ಇಸ್ರೇಲ್ ಮೊದಲ ಸ್ಥಾನದಲ್ಲಿದೆ. ಇಸ್ರೇಲ್ ಪ್ರತೀ ವರ್ಷ 6 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಪೂರೈಸುತ್ತದೆ. ಮೋದಿಯವರ "ಮೇಕ್ ಇನ್ ಇಂಡಿಯಾ" ಯೋಜನೆಗೆ ಇಸ್ರೇಲ್ ಕಂಪನಿಗಳು ಹೆಚ್ಚು ಸಕರಾತ್ಮಕವಾಗಿ ಸ್ಪಂದಿಸುತ್ತಿವೆ. ಜಗತ್ತಿನ ಅತ್ಯುತ್ತಮ ಕ್ಷಿಪಣಿ ಮತ್ತು ಕ್ಷಿಪಣಿ ನಿರೋಧಕ ವ್ಯವಸ್ಥೆಗಳು ಇಸ್ರೇಲ್'ನಿಂದ ಭಾರತಕ್ಕೆ ಸರಬರಾಜಾಗಲಿವೆ. ಭಾರತಕ್ಕೆ ಅತ್ಯುತ್ತಮ ಶಸ್ತ್ರಾಸ್ತ್ರಗಳು ಲಭ್ಯವಾದರೆ, ಇಸ್ರೇಲ್'ಗೆ ತನ್ನ ಶಾಸ್ತ್ರಾಸ್ತ್ರ ಮಾರಾಟ ಮಾಡಲು ಭಾರತ ಒಂದು ಅತ್ಯುತ್ತಮ ಮಾರುಕಟ್ಟೆಯಾಗಿದೆ.

ಅಮೆರಿಕ ದೇಶವು ಕಡಲಿನ ಕಣ್ಗಾವಲಿನ ಉದ್ದೇಶಕ್ಕೆ 22 ಡ್ರೋನ್'ಗಳನ್ನು ಭಾರತಕ್ಕೆ ನೀಡಿತ್ತು. ಆದರೆ, ಇಸ್ರೇಲ್ ದೇಶವು ಕಣ್ಗಾವಲಿಗಷ್ಟೇ ಅಲ್ಲ, ಯುದ್ಧಕ್ಕೂ ಸಿದ್ಧವಿರುವ ಡ್ರೋನ್'ಗಳನ್ನು ಭಾರತಕ್ಕೆ ಮಾರಾಟ ಮಾಡಲು ಸಿದ್ಧವಿದೆ.

ಹಿಂದಿನ ಯುಪಿಎ ಸರಕಾರ ಇಸ್ರೇಲ್'ನ ಪ್ರಬಲ ಹೆರೋನ್ ಟಿಪಿ ಡ್ರೋನ್'ಗಳನ್ನು ಕೊಳ್ಳಲು ಮೀನ-ಮೇಷ ಎಣಿಸಿತ್ತು. ಈಗ ಮೋದಿಯು ದೇಶದ ಪ್ರಧಾನಿಯಾಗಿರುವಾಗ ಇಂತಹ ಯೋಜನೆಗಳು ತಡೆಯಿಲ್ಲದೇ ಅನುಷ್ಠಾನಗೊಳ್ಳಲಿವೆ.

2) ಕೃಷಿ ಕ್ಷೇತ್ರ: ಇಸ್ರೇಲ್ ದೇಶವು ಮಿಲಿಟರಿ ತಂತ್ರಜ್ಞಾನದಲ್ಲಷ್ಟೇ ಅಲ್ಲ ಕೃಷಿ ತಂತ್ರಜ್ಞಾನದಲ್ಲೂ ಬಹಳ ಮುಂದಿದೆ. ತನ್ನ ಬರಡು ನೆಲವನ್ನು ಹಸಿರಿನ ಕಣಜವನ್ನಾಗಿಸಿದ ಸಾಧನೆ ಇಸ್ರೇಲ್'ನದ್ದು. ನೀರು ನಿರ್ವಹಣೆ ಮತ್ತು ಕೃಷಿ ಕ್ಷೇತ್ರದಲ್ಲಿ ಇಸ್ರೇಲ್ ಹೊಂದಿರುವ ಪರಿಣತಿಯು ಭಾರತದ ನೆರವಿಗೆ ಬರಬಹುದು. ಮೋದಿಯವರ ಇಸ್ರೇಲ್ ಭೇಟಿ ವೇಳೆ ಈ ನಿಟ್ಟಿನಲ್ಲಿ ಮಹತ್ವದ ಒಪ್ಪಂದಗಳಾಗುವ ನಿರೀಕ್ಷೆ ಇದೆ.

ಇಸ್ರೇಲ್'ಗೆ ಏನು ಲಾಭ?
ಪ್ಯಾಲೆಸ್ಟೀನ್ ದೇಶವನ್ನು ಅತಿಕ್ರಮಿಸಿಕೊಂಡಿರುವ ಆರೋಪ ಇಸ್ರೇಲ್ ಮೇಲಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳು ಇದೇ ವಿಚಾರದ ಹಿನ್ನೆಲೆಯಲ್ಲಿ ಇಸ್ರೇಲ್'ನಿಂದ ತುಸು ದೂರವೇ ಇರಲು ಇಚ್ಛಿಸುತ್ತವೆ. ಭಾರತ ಮತ್ತು ಇಸ್ರೇಲ್ ನಡುವೆ ದಶಕಗಳಿಂದ ಸ್ನೇಹವಿದ್ದರೂ ಭಾರತ ಒಮ್ಮೆಯೂ ಇಸ್ರೇಲ್ ಜೊತೆ ಬಹಿರಂಗವಾಗಿ ಸ್ನೇಹ ವ್ಯಕ್ತಪಡಿಸಿಲ್ಲ. ಪ್ಯಾಲೆಸ್ಟೀನ್'ನ ಸ್ವಾತಂತ್ರ್ಯ ಹೋರಾಟಕ್ಕೆ ಭಾರತ ಪರೋಕ್ಷವಾಗಿ ಬೆಂಬಲ ನೀಡುತ್ತಲೇ ಬಂದಿತ್ತು. ಹೀಗಾಗಿ, ಭಾರತದ ಯಾವ ಪ್ರಧಾನಿಯೂ ಇಸ್ರೇಲ್ ನೆಲಕ್ಕೆ ಹೋಗಿರಲಿಲ್ಲ. ಈಗ ಮೋದಿ ಭೇಟಿಯು ಪೆಲೆಸ್ಟೀನ್ ವಿಚಾರದಲ್ಲಿ ಇಸ್ರೇಲ್'ಗೆ ಹೆಚ್ಚು ಮಾನ್ಯತೆ ಸಿಗುವಂತೆ ಮಾಡಿದೆ. ಮೋದಿ ಆಗಮನದ ಬೆಳವಣಿಗೆಯನ್ನು ಅಲ್ಲಿಯ ಸರಕಾರ ತನ್ನ ಟ್ರಂಪ್ ಕಾರ್ಡ್ ರೀತಿ ಬಿಂಬಿಸುತ್ತಿದೆ. ಪ್ಯಾಲೆಸ್ಟೀನ್ ಮೇಲಿನ ತನ್ನ ಹಕ್ಕಿಗೆ ಹೊಸ ಮಾನ್ಯತೆ ಸಿಕ್ಕಿದೆ ಎಂದು ಬೀಗುತ್ತಿದೆ.

ಭಾರತಕ್ಕೇನು ಸಂಕಟ?
ಸ್ವಾತಂತ್ರ್ಯೋತ್ತರದಲ್ಲಿ ಭಾರತದ್ದು ಆಲಿಪ್ತ ನೀತಿಯೇ ಪ್ರಧಾನ. ವಿಶ್ವದ ಯಾವ ರಾಷ್ಟ್ರಗಳ ಗುಂಪಿಗೂ ಭಾರತ ಸೇರಿಕೊಳ್ಳದೇ ತಟಸ್ಥ ಧೋರಣೆ ತಾಳಿಕೊಂಡು ಬರುತ್ತಿದೆ. ಇಸ್ರೇಲ್ ಬಗ್ಗೆ ಬಹುತೇಕ ಇಸ್ಲಾಮಿಕ್ ರಾಷ್ಟ್ರಗಳು ವೈರತ್ವ ಇಟ್ಟುಕೊಂಡಿವೆ. ಪ್ಯಾಲೆಸ್ಟೀನ್ ವಿಚಾರದಲ್ಲಿ ಭಾರತ ಎಂದಿಗೂ ಇಸ್ರೇಲ್'ಗೆ ಬೆಂಬಲ ನೀಡಿದ್ದಿಲ್ಲ. ಪೆಟ್ರೋಲ್ ಉತ್ಪನ್ನಗಳಿಗೆ ಭಾರತವು ಅರಬ್ ರಾಷ್ಟ್ರಗಳ ಮೇಲೆ ಅವಲಂಬಿತವಾಗಿದೆ. ಈಗ ಇಸ್ರೇಲ್'ಗೆ ಬೆಂಬಲ ನೀಡಿದರೆ ಅರಬ್ ರಾಷ್ಟ್ರಗಳಿಂದ ವಿರೋಧ ಎದುರಿಸಲು ಭಾರತ ಸಿದ್ಧವಿರಬೇಕಾಗುತ್ತದೆ.

ಭಯೋತ್ಪಾದನೆಯಿಂದ ಸಮಾನ ಪೀಡಿತರು:
ಭಾರತ ಮತ್ತು ಇಸ್ರೇಲ್ ದೇಶಗಳೆರಡೂ ಇಸ್ಲಾಮಿಕ್ ಉಗ್ರವಾದದ ಪೀಡನೆಗೆ ಒಳಗಾಗಿವೆ. ಇಸ್ರೇಲ್'ಗೆ ತನ್ನ ಸುತ್ತಲಿರುವ ಎಲ್ಲಾ ಇಸ್ಲಾಮಿಕ್ ರಾಷ್ಟ್ರಗಳು ವೈರಿಯಾಗಿವೆ. ಪ್ರತೀ ಕ್ಷಣವೂ ಇಸ್ರೇಲ್ ಜಾಗೃತ ಸ್ಥಿತಿಯಲ್ಲಿರಬೇಕಾಗಿದೆ. ಇತ್ತ, ಭಾರತವೂ ದಶಕಗಳಿಂದ ಇಸ್ಲಾಮಿಕ್ ಭಯೋತ್ಪಾದನೆಯಿಂದ ಪೀಡಿತವಾಗಿದೆ. ಈ ವಿಚಾರವು ಎರಡೂ ದೇಶಗಳನ್ನು ಸಹಜವಾಗಿಯೇ ಹತ್ತಿರವಾಗಿಸುತ್ತವೆ.

ಐತಿಹಾಸಿಕ ಬಂಧ:
ಭಾರತದಲ್ಲಿರುವ ಹಿಂದೂ ಧರ್ಮ ಮತ್ತು ಇಸ್ರೇಲ್'ನ ಜುದಾಯಿಸಂ ಎರಡರಲ್ಲೂ ತಾತ್ವಿಕ ಸಾಮ್ಯತೆ ಇದೆ. ಸಾವಿರಾರು ವರ್ಷಗಳಿಂದ ಎರಡೂ ರಾಷ್ಟ್ರಗಳು ಸಾಂಸ್ಕೃತಿಕವಾಗಿ ಸ್ನೇಹ ಸಂಬಂಧ ಹೊಂದಿವೆ. ಹೀಗಾಗಿ, ಭಾರತ ಮತ್ತು ಇಸ್ರೇಲ್ ನಡುವೆ ಸ್ವಾಭಾವಿಕ ಮಿತ್ರತ್ವದ ಭಾವನೆ ನೆಲಸಿದೆ.

ಈ ಮೇಲಿನ ಅಂಶಗಳನ್ನು ಗಮನಿಸಿದರೆ, ಭಾರತಕ್ಕೆ ಇಸ್ರೇಲ್ ಒಂದು ವಿಶ್ವಾಸಾರ್ಹ ಮಿತ್ರ ರಾಷ್ಟ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಭಾರತವೇನಾದರೂ ಅಪಾಯಕ್ಕೆ ಸಿಲುಕಿದಲ್ಲಿ ಅಮೆರಿಕ ಅಥವಾ ರಷ್ಯಾವು ಸಹಾಯಕ್ಕೆ ಬರುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ, ಇಸ್ರೇಲ್'ನಿಂದ ನೆರವು ಬರುವುದು ನಿಶ್ಚಿತ ಎಂದು ಹೇಳುತ್ತಾರೆ ತಜ್ಞರು.

Follow Us:
Download App:
  • android
  • ios