ವಾಷಿಂಗ್ಟನ್‌: ಅಧ್ಯಕ್ಷ ಚುನಾವಣೆಗೆ ನಿಂತ ದಿನದಿಂದಲೂ ವಿವಾದಿತ ವ್ಯಕ್ತಿಯಾಗಿಯೇ ಕುಖ್ಯಾತಿ ಹೊಂದಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೀಗ ಸಂಸತ್ತಿನಿಂದ ವಾಗ್ದಂಡನೆಗೆ ಗುರಿಯಾಗುವ ಭೀತಿ ಎದುರಿಸುತ್ತಿದ್ದಾರೆ. ಇಂಥದ್ದೊಂದು ಸಾಧ್ಯತೆಯನ್ನು ಮನಗಂಡಿರುವ ಟ್ರಂಪ್‌, ಅಂಥದ್ದು ಏನಾದರೂ ಆದಲ್ಲಿ ದೇಶದ ಆರ್ಥಿಕತೆ ಮಲಗಲಿದೆ ಎಂದು ಎಚ್ಚರಿಸಿದ್ದಾರೆ.

ತಪ್ಪೊಪ್ಪಿಗೆ ಹೇಳಿಕೆ: ಅಧ್ಯಕ್ಷ ಟ್ರಂಪ್‌ಗೆ ವಾಗ್ದಂಡನೆ ಭೀತಿ ಸೃಷ್ಟಿಯಾಗುವುದಕ್ಕೆ ಕಾರಣ, ಅವರ ವಕೀಲ ಮೈಕೆಲ್‌ ಕೋಹೆನ್‌ ಅವರು ನ್ಯಾಯಾಲಯದ ವಿಚಾರಣೆ ವೇಳೆ, ಅಧ್ಯಕ್ಷೀಯ ಚುನಾವಣೆ ವೇಳೆ ತಾವು ಹಲವು ರೀತಿಯ ಅಕ್ರಮ ಎಸಗಿರುವುದನ್ನು ಒಪ್ಪಿಕೊಂಡಿರುವುದು. ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿತ್ತು ಎಂಬ ಪ್ರಕರಣದ ವಿಚಾರಣೆ ವೇಳೆ ಹಾಜರಾಗಿದ್ದ ಕೋಹೆನ್‌, ಟ್ರಂಪ್‌ ಅವರ ಪರವಾಗಿ ತಾವು ತೆರಿಗೆ ವಂಚನೆ ಮಾಡಿರುವುದನ್ನು, ಬ್ಯಾಂಕ್‌ ಸ್ಟೇಟ್‌ಮೆಂಟ್‌ ಕುರಿತು ಸುಳ್ಳು ಮಾಹಿತಿ ನೀಡಿರುವುದನ್ನು, ಪ್ರಚಾರಕ್ಕೆ ಬಳಸಿದ ಹಣದ ಲೆಕ್ಕಪತ್ರದಲ್ಲಿ ವಂಚನೆ ಮಾಡಿರುವುದನ್ನು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಟ್ರಂಪ್‌ ಜೊತೆ ಲೈಂಗಿಕ ಸಂಬಂಧ ಹೊಂದಿದ್ದ ಸ್ಟೋರ್ಮಿ ಡೇನಿಯಲ್ಸ್‌ ಸೇರಿದಂತೆ ಇಬ್ಬರು ನೀಲಿ ಚಿತ್ರಗಳ ನಟಿಯರಿಗೆ ಈ ವಿಷಯವನ್ನು ಬಾಯಿಬಿಡದಂತೆ ಹಣ ನೀಡಿದ್ದ ವಿಷಯವನ್ನು ಒಪ್ಪಿಕೊಂಡಿದ್ದಾರೆ.

ಈ ವಿಷಯ ಮುಂದಿಟ್ಟುಕೊಂಡೇ ವಿಪಕ್ಷ ಡೆಮಾಕ್ರೆಟ್‌ ಸಂಸದರು ಟ್ರಂಪ್‌ ವಿರುದ್ಧ ವಾಗ್ದಂಡನೆಗೆ ಮುಂದಾಗುವ ಎಲ್ಲಾ ಸಾಧ್ಯತೆ ಇದೆ ಎಂದು ಅಧ್ಯಕ್ಷೀಯ ಚುನಾವಣೆ ವೇಳೆ ಟ್ರಂಪ್‌ರ ಸಲಹೆಗಾರರಾಗಿದ್ದ ಮೈಕೆಲ್‌ ಕ್ಯಾಪ್ಟೋ ಹೇಳಿದ್ದಾರೆ.

ಆರ್ಥಿಕತೆ ಪತನ: ಈ ನಡುವೆ ತಮಗೆ ವಾಗ್ದಂಡನೆ ವಿಧಿಸುವ ಕುರಿತ ಸುದ್ದಿಗಳ ಬಗ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ಟ್ರಂಪ್‌, ಇದೇನಾದರೂ ನಿಜವಾದಲ್ಲಿ, ಮಾರುಕಟ್ಟೆಕುಸಿದುಬೀಳಲಿದೆ. ಅಮೆರಿಕದ ಆರ್ಥಿಕತೆ ಪತನವಾಗಲಿದೆ. ಅಮೆರಿಕ ನಾಗರಿಕರು ಮತ್ತೆ ಚೇತರಿಸಿಕೊಳ್ಳಲಾಗದ ರೀತಿಯಲ್ಲಿ ಬಡವರಾಗಲಿದ್ದಾರೆ ಎಂದು ಎಚ್ಚರಿಸಿದ್ದಾರೆ.