ದುಬೈನಲ್ಲಿದ್ದು ಮನ್ಸೂರ್‌ನ ಮನವೊಲಿಸಿದ್ದ ಎಸ್‌ಐಟಿ!| ಕಡೆಗೂ ಐಎಂಎ ಮಾಲೀಕನ ಬಂಧಿಸಿದ ಅಧಿಕಾರಿಗಳು| ಕಾನೂನು, ಅಂತಾರಾಷ್ಟ್ರೀಯ ಒಪ್ಪಂದದಿಂದ ಇಷ್ಟುಬೇಗ ಕರೆತರಲು ಸಾಧ್ಯವಿರಲಿಲ್ಲ| ಲಂಡನ್‌ಗೆ ಹೋಗಿ ತಲೆಮರೆಸಿಕೊಳ್ಳುವ ಯತ್ನ ವಿಫಲ| 15 ದಿನಗಳ ಕಾಲ ದುಬೈನಲ್ಲೇ ಇದ್ದು ಮನವೊಲಿಸಿದ ಎಸ್‌ಐಟಿ ಅಧಿಕಾರಿಗಳ ತಂಡ

ಎನ್‌.ಲಕ್ಷ್ಮಣ್‌, ಕನ್ನಡಪ್ರಭ

ಬೆಂಗಳೂರು[ಜು.20]: ಬಹುಕೋಟಿ ‘ಐ ಮಾನಿಟರಿ ಅಡ್ವೈಸರಿ’ (ಐಎಂಎ) ವಂಚನೆ ಪ್ರಕರಣದ ಪ್ರಮುಖ ಆರೋಪಿ ಮಹಮ್ಮದ್‌ ಮನ್ಸೂರ್‌ ಖಾನ್‌ನನ್ನು ದುಬೈನಿಂದ ಭಾರತಕ್ಕೆ ಕರೆ ತರಲು ವಿಶೇಷ ತನಿಖಾ ತಂಡದ ಪೊಲೀಸ್‌ ಅಧಿಕಾರಿಗಳು ಬರೊಬ್ಬರಿ 15 ದಿನಗಳ ಕಾಲ ಅಲ್ಲಿಯೇ ಇದ್ದು ಆರೋಪಿಯ ಮನವೊಲಿಕೆ ಪ್ರಯತ್ನ ನಡೆಸಿದ್ದರು ಎಂದು ತಿಳಿದು ಬಂದಿದೆ.

ಎಸ್‌ಐಟಿ ತಂಡ ಕೊಟ್ಟಭರವಸೆ, ಪೊಲೀಸ್‌ ಭದ್ರತೆ ಮೇರೆಗೆ ಮನ್ಸೂರ್‌ನನ್ನು ಹೇಗೆ ಶೀಘ್ರ ಭಾರತಕ್ಕೆ ಕರೆ ತರಲಾಯಿತು ಎಂಬುದೇ ಒಂದು ರೋಚಕ ಕತೆಯಾಗಿದೆ. ಈ ಮಧ್ಯೆ ಮನ್ಸೂರ್‌ ಸಾರ್ವಜನಿಕರ ಅನುಕಂಪ ಗಿಟ್ಟಿಸುವ ಸಲುವಾಗಿ ಒಂದೊಂದೇ ವಿಡಿಯೋ ಬಿಡುಗಡೆ ಮಾಡಿದ್ದ ಎಂಬುದನ್ನು ಪೊಲೀಸ್‌ ಇಲಾಖೆಯ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಸುಮಾರು . 1200 ಕೋಟಿ ವಂಚನೆ ಮಾಡಿ ದೇಶ ಬಿಟ್ಟು ಹೋಗಿದ್ದ ಆರೋಪಿ ಪತ್ತೆಗೆ ಇಂಟರ್‌ಪೋಲ್‌ ಮೂಲಕ ಬ್ಲೂ ಕಾರ್ನರ್‌ ನೋಟಿಸ್‌ ಜಾರಿ ಮಾಡಲಾಗಿತ್ತು. ಮನ್ಸೂರ್‌ ಜೂನ್‌ 14ರಂದು ದುಬೈ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೋಗಿ ತಲೆಮರೆಸಿಕೊಳ್ಳಲು ಮುಂದಾಗಿದ್ದ. ಆದರೆ, ಆರೋಪಿ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್‌ ಹೊರಡಿಸಿದ್ದ ಕಾರಣ ಆತ ವಿಮಾನ ಏರಲು ಅವಕಾಶವಿರಲಿಲ್ಲ. ಮನ್ಸೂರ್‌ ಪುನಃ 19ರಂದು ಲಂಡನ್‌ಗೆ ಹೋಗಲು ಯತ್ನಿಸಿದಾಗ ಆತನನ್ನು ತಡೆದು ನಿಲ್ಲಿಸಲಾಗಿತ್ತು. ಒಂದು ವೇಳೆ ಆರೋಪಿ ಲಂಡನ್‌ಗೆ ತೆರಳಿದ್ದರೆ ವಾಪಸ್‌ ಕರೆ ತರಲು ಸಾಧ್ಯವಾಗುತ್ತಿಲಿಲ್ಲ. ನಂತರ ಆರೋಪಿ ಜೂ.23ರಂದು ವಿಡಿಯೋವೊಂದನ್ನು ಬಿಡುಗಡೆ ಮಾಡಿ ಭಾರತಕ್ಕೆ ಬರುವ ಇಚ್ಛೆ ವ್ಯಕ್ತಪಡಿಸಿ, ಪೊಲೀಸ್‌ ತನಿಖೆಗೆ ಸಹಕರಿಸುವುದಾಗಿ ಹೇಳಿದ್ದ.

ಬ್ಲೂ ಕಾರ್ನರ್‌ ನೋಟಿಸ್‌ ಹೊರಡಿಸಿದ್ದ ಕಾರಣ ಆತನನ್ನು ಶೀಘ್ರ ಭಾರತಕ್ಕೆ ಕರೆ ತರಲು ಸಾಧ್ಯವಿರಲಿಲ್ಲ. ನಿಯಮದ ಪ್ರಕಾರ ಬ್ಲೂ ಕಾರ್ನರ್‌ ನೋಟಿಸ್‌ ಹೊರಡಿಸಿದ ಮೇಲೆ ಅಂತಾರಾಷ್ಟ್ರೀಯ ಒಪ್ಪಂದ ಪೂರ್ಣಗೊಳಿಸಲು ಕೆಲ ತಿಂಗಳುಗಳೇ ಹಿಡಿಯುತ್ತದೆ. ಆದರೆ ಬಹುಕೋಟಿ ವಂಚನೆ ಪ್ರಕರಣದ ಆರೋಪಿಯನ್ನು ಭಾರತಕ್ಕೆ ಕರೆತರುವುದು ಎಸ್‌ಐಟಿಗೆ ಒಂದು ಸವಾಲಾಗಿ ಪರಿಣಮಿಸಿತ್ತು. ಇದಕ್ಕೆ ತಂತ್ರ ರೂಪಿಸಿದ ಅಪರಾಧ ವಿಭಾಗದ ಎಡಿಜಿಪಿ ಎಂ.ಎ.ಸಲೀಂ, ಡಿಐಜಿ ಬಿ.ಆರ್‌.ರವಿಕಾಂತೇಗೌಡ, ಡಿಸಿಪಿ ಎಸ್‌.ಗಿರೀಶ್‌ ಅವರು ಮನ್ಸೂರ್‌ ಇದ್ದ ಜಾಗಕ್ಕೆ ತಂಡವನ್ನು ಕಳಿಸಲು ಯೋಜಿಸಿದ್ದರು. ಅದರಂತೆ ಇನ್ಸ್‌ಪೆಕ್ಟರ್‌ ದರ್ಜೆಗೆ ಮೇಲ್ಪಟ್ಟನಾಲ್ವರು ಅಧಿಕಾರಿಗಳ ಮುಂಬೈಗೆ ತೆರಳಿತ್ತು.

ಗೌಪ್ಯವಾಗಿ ನಡೆದ ಕಾರ್ಯಾಚರಣೆಯಲ್ಲಿ ವಿಶೇಷ ತನಿಖಾ ತಂಡ ಜುಲೈ ಮೊದಲ ವಾರದಲ್ಲಿ ಆರೋಪಿ ಮನ್ಸೂರ್‌ ಖಾನ್‌ ಇದ್ದ ಸ್ಥಳಕ್ಕೆ ತೆರಳಿತ್ತು. ವಿಶೇಷ ತನಿಖಾ ತಂಡದ ನಾಲ್ವರು ಪೊಲೀಸರನ್ನು ನೋಡಿ ಮನ್ಸೂರ್‌ ಬೆಚ್ಚಿಬಿದ್ದಿದ್ದ. ನಿರಂತರವಾಗಿ ನಾಲ್ವರ ತಂಡ ಆರೋಪಿಯನ್ನು ಭಾರತಕ್ಕೆ ವಾಪಸ್‌ ಮರಳುವಂತೆ ಮನವೊಲಿಸಿತ್ತು. ಬ್ಲೂ ಕಾರ್ನರ್‌ ನೋಟಿಸ್‌ ಹೊರಡಿಸಿದ ಬಳಿಕ ಆರೋಪಿ ಇಚ್ಛೆ ವ್ಯಕ್ತಪಡಿಸಿದರೆ ತನ್ನ ತಾಯ್ನಾಡಿಗೆ ಮರಳಲು ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ಸ್ವ ಇಚ್ಛೆಯಿಂದ ದೇಶಕ್ಕೆ ಮರಳುವಂತೆ ಎಸ್‌ಐಟಿ ತಂಡ ಮನ್ಸೂರ್‌ ಮನವೊಲಿಸಿತ್ತು.

ಬಳಿಕ ಎಸ್‌ಐಟಿ ಅಧಿಕಾರಿಗಳು ಕೇಂದ್ರ ಸರ್ಕಾರ ಮುಖೇನ ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕ ಮಾಡಿ ಪರಿಸ್ಥಿತಿ ಬಗ್ಗೆ ವಿವರಣೆ ನೀಡಿ, ಭಾರತಕ್ಕೆ ಕರೆದೊಯ್ಯಲು ಮನ್ಸೂರ್‌ ಮನವೊಲಿಸಿರುವ ಬಗ್ಗೆ ಹೇಳಿದೆವು. ಕೂಡಲೇ ರಾಯಭಾರ ಕಚೇರಿಯ ನೆರವಿನೊಂದಿಗೆ ಆತನ ಪ್ರಯಾಣ ದಾಖಲೆಗಳನ್ನು ಸಿದ್ಧಪಡಿಸಲಾಯಿತು. ಒಟ್ಟಾರೆ ಈ ಗೌಪ್ಯ ಕಾರ್ಯಾಚರಣೆ ನಡೆಸಲು 15 ದಿನಗಳ ಕಾಲ ಹರಸಾಹಸ ಪಡಬೇಕಾಯಿತು. ಇಷ್ಟುದಿನ ನಾಲ್ವರ ತಂಡ ದುಬೈನಲ್ಲಿ ಸಾಮಾನ್ಯ ನಾಗರಿಕರಂತೆ ನಡೆದುಕೊಂಡಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ವಿವರಿಸಿದರು.

ಕಾನೂನು ಅಥವಾ ಅಂತಾರಾಷ್ಟ್ರೀಯ ಒಪ್ಪಂದದ ಮೂಲಕ ಇಷ್ಟುಸುಲಭವಾಗಿ ಭಾರತಕ್ಕೆ ಕರೆ ತರಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಆತನನ್ನು ಮನವೊಲಿಸಿ ಕರೆತರಲಾಯಿತು ಎಂದು ತಿಳಿಸಿದರು.

ಹೃದಯದಲ್ಲಿ ರಂಧ್ರವಾಗಿದ್ದು ಸುಳ್ಳು

ಎಸ್‌ಐಟಿ ತಂಡ ದುಬೈನಲ್ಲಿ ಆತನ ಜತೆಗಿದ್ದಾಗಲೇ ವಿಡಿಯೋವೊಂದನ್ನು ಇತ್ತೀಚೆಗೆ ಬಿಡುಗಡೆ ಮಾಡಿ 24 ಗಂಟೆಯಲ್ಲಿ ಭಾರತಕ್ಕೆ ಬರುವುದಾಗಿ ಮನ್ಸೂರ್‌ ಹೇಳಿದ್ದ. ಈ ವೇಳೆ ಪೊಲೀಸ್‌ ಭದ್ರತೆಯನ್ನು ಕೂಡ ಬಯಸಿದ್ದ ಮನ್ಸೂರ್‌, ತಾನು ಅನಾರೋಗ್ಯಕ್ಕೆ ಒಳಗಾಗಿದ್ದೇನೆ. ತನ್ನ ಹೃದಯದಲ್ಲಿ ಮೂರು ರಂಧ್ರಗಳಾಗಿವೆ ಎಂದು ಹೇಳುವ ಮೂಲಕ ಮೂಲಕ ದೇಶಕ್ಕೆ ಬರುವ ಮುನ್ನ ಸಾರ್ವಜನಿಕರಲ್ಲಿ ಅನುಕಂಪ ಗಿಟ್ಟಿಸಲು ವಿಡಿಯೋ ಹರಿಯ ಬಿಟ್ಟಿದ್ದ. ಆತನಿಗೆ ಸಕ್ಕರೆ ಕಾಯಿಲೆ ಹೊರತುಪಡಿಸಿದರೆ ಇನ್ಯಾವುದೇ ರೀತಿಯ ಕಾಯಿಲೆ ಇಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.