Asianet Suvarna News Asianet Suvarna News

ಐಎಂಎ ಕೇಸ್‌: ಜಮೀರ್‌ಗೆ ಆಪ್ತನೇ ಕಂಟಕ!

ಐಎಂಎ ಕೇಸ್‌: ಜಮೀರ್‌ಗೆ ಆಪ್ತನೇ ಕಂಟಕ! ಐಎಂಎ ಮಾಲಿಕ ಮನ್ಸೂರ್‌ಗೆ ಆಸ್ತಿ ಮಾರಿದ್ದ ಸಚಿವ ಜಮೀರ್‌ | ಈ ವ್ಯವಹಾರದಲ್ಲಿ ಮಾರುಕಟ್ಟೆದರಕ್ಕಿಂತ ಹೆಚ್ಚುವರಿ ಹಣ ಪಾವತಿ ಆಗಿರುವ ಶಂಕೆ | ಇದನ್ನೇ ಪುಷ್ಠಿಕರಿಸುವಂತೆ ಜಮೀರ್‌ ಆಪ್ತ ಮುಜಾಹಿದ್‌ ಹೇಳಿಕೆ

IMA ponzi scam accused Mansoor Khan reveals big names
Author
Bengaluru, First Published Jul 26, 2019, 8:22 AM IST

ಬೆಂಗಳೂರು (ಜು. 26):  ಐಎಂಎ ಬಹುಕೋಟಿ ವಂಚನೆ ಪ್ರಕರಣದ ಸುಳಿಯಲ್ಲಿ ಸಿಲುಕಿರುವ ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಜಮೀರ್‌ ಅಹಮ್ಮದ್‌ ಖಾನ್‌ ಅವರಿಗೆ ಎಸ್‌ಐಟಿ ಮುಂದೆ ತಮ್ಮ ಆಪ್ತ ನೀಡಿರುವ ಹೇಳಿಕೆಯೇ ಕಂಟಕವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಈ ವಂಚನೆ ಪ್ರಕರಣದಲ್ಲಿ ಬಿಬಿಎಂಪಿ ನಾಮನಿರ್ದೇಶಿತ ಸದಸ್ಯ ಸೈಯದ್‌ ಮುಜಾಹಿದ್‌ನನ್ನು ಎಸ್‌ಐಟಿ ಬಂಧಿಸಿತ್ತು. ವಿಚಾರಣೆ ವೇಳೆ ಐಎಂಎ ಮುಖ್ಯಸ್ಥ ಮಹಮ್ಮದ್‌ ಮನ್ಸೂರ್‌ ಮತ್ತು ಮಾಜಿ ಸಚಿವ ಜಮೀರ್‌ ಅಹಮ್ಮದ್‌ ನಡುವಿನ ಹಣಕಾಸು ವ್ಯವಹಾರಕ್ಕೆ ಮುಜಾಹಿದ್‌ ಮಧ್ಯವರ್ತಿಯಾಗಿದ್ದ ಎಂಬ ಸಂಗತಿ ಬಯಲಾಯಿತು ಎಂದು ತಿಳಿದು ಬಂದಿದೆ.

ಹಲವು ವರ್ಷಗಳಿಂದ ಮನ್ಸೂರ್‌ ಜೊತೆ ಸ್ನೇಹ ಹೊಂದಿದ್ದ ಮುಜಾಹಿದ್‌, ಇದೇ ಗೆಳೆತನದಲ್ಲಿ ಮನ್ಸೂರ್‌ನ ವ್ಯವಹಾರದಲ್ಲಿ ಸಹ ಪಾಲುದಾರಿಕೆ ಹೊಂದಿದ್ದ. ಶಿವಾಜಿನಗರದಲ್ಲಿ ತನಗೆ ಸೇರಿದ ಆಸ್ತಿ ಮತ್ತು ರಿಚ್ಮಂಡ್‌ ಟೌನ್‌ನಲ್ಲಿ ಜಮೀರ್‌ ಒಡೆತನದ ಕಟ್ಟಡವನ್ನು ಮನ್ಸೂರ್‌ಗೆ ಮುಜಾಹಿದ್‌ ಮಾರಾಟ ಮಾಡಿಸಿದ್ದ ಎಂದು ಎಸ್‌ಐಟಿ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಮುಜಾಹಿದ್‌ ಮೂಲಕ ಮನ್ಸೂರ್‌ ಖರೀದಿಸಿರುವ ಎರಡು ಆಸ್ತಿಗಳ ಬಗ್ಗೆ ದಾಖಲೆಗಳು ಸಿಕ್ಕಿವೆ. ಇವುಗಳ ಪರಿಶೀಲನೆ ನಡೆಸಿದಾಗ ನಿಗದಿತ ಮಾರುಕಟ್ಟೆಮೌಲ್ಯಕ್ಕೂ ಅಧಿಕವಾಗಿ ಹಣ ಕೈ ಬದಲಾವಣೆಯಾಗಿರುವ ಅನುಮಾನವಿದ್ದು, ಇದರಲ್ಲಿ ಕಪ್ಪು ಹಣ ಸೇರಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

.9 ಕೋಟಿ ಆಸ್ತಿ ಮಾರಾಟ ಒಪ್ಪಿದ ಜಮೀರ್‌:

ಜಮೀರ್‌ ಅವರಿಗೆ ಸೇರಿದ ರಿಚ್ಮಂಡ್‌ ಟೌನ್‌ನ ಸರ್ಪೆಂಟೈನ್‌ ಸ್ಟ್ರೀಟ್‌ನಲ್ಲಿರುವ ನಂ.38 ಹಾಗೂ 39ನೇ ಕಟ್ಟಡದ ಮಾರಾಟ ಸಂಬಂಧ 2017ರಲ್ಲಿ ಐಎಂಎ ಮಾಲಿಕ ಮನ್ಸೂರ್‌ ಜೊತೆ .9 ಕೋಟಿ ಖರೀದಿಗೆ ಒಡಂಬಡಿಕೆಯಾಗಿತ್ತು.

ಇದಕ್ಕೆ 2017ರ ಮೊದಲ ಹಂತದಲ್ಲಿ ಮುಂಗಡವಾಗಿ ಮಾಜಿ ಸಚಿವರಿಗೆ .5 ಕೋಟಿ ಮನ್ಸೂರ್‌ ನೀಡಿದ್ದು, ಇನ್ನುಳಿದ ನಾಲ್ಕು ಕೋಟಿ ಹಣವು 2018ರ ಮೇನಲ್ಲಿ ಸಂದಾಯವಾಗಿತ್ತು. ಬಹುಕೋಟಿ ವಂಚನೆ ಕೃತ್ಯ ಬೆಳಕಿಗೆ ಬಂದ ನಂತರ ಜಮೀರ್‌ ವ್ಯವಹಾರವು ಚರ್ಚೆಗೆ ಗ್ರಾಸವಾಯಿತು.

ಈ ವಿವಾದದ ಬಗ್ಗೆ ಮಾಜಿ ಸಚಿವರು ಸಹ, ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದರು. ‘ತಾವು ರಿಚ್ಮಂಡ್‌ ಟೌನ್‌ ಬಳಿ ಹೊಂದಿದ್ದ 14,800 ಚದರಡಿ ನಿವೇಶನವನ್ನು 2017ರ ಡಿಸೆಂಬರ್‌ನಲ್ಲಿ ಐಎಂಎ ಕಂಪೆನಿಗೆ .9.36 ಕೋಟಿಗೆ ಮಾರಾಟ ಮಾಡಿದ್ದೆ. ಮುಂಗಡವಾಗಿ .5 ಕೋಟಿ ಪಡೆದಿದ್ದೆ.

2018ರ ವಿಧಾನಸಭಾ ಚುನಾವಣಾ ಪ್ರಮಾಣಪತ್ರದಲ್ಲಿ ಈ ಆಸ್ತಿ ಮಾರಾಟದ ಬಗ್ಗೆ ದಾಖಲಿಸಿದ್ದೇನೆ. 2018ರ ಮೇನಲ್ಲಿ .9.36 ಕೋಟಿ ಸಂಪೂರ್ಣ ಹಣ ಸಂದಾಯದ ಬಳಿಕ ಶುದ್ಧ ಕ್ರಯ ಮಾಡಿಕೊಟ್ಟಿದ್ದೇನೆ. ಈ ಬಗ್ಗೆ ಸೇಲ್‌ಡೀಡ್‌ ಸೇರಿದಂತೆ ಎಲ್ಲಾ ದಾಖಲೆಗಳಿವೆ. ನಾನು ಹೆಚ್ಚುವರಿ ಹಣ ಪಡೆದಿಲ್ಲ’ ಎಂದಿದ್ದರು. ಆದರೆ ಈ ವ್ಯವಹಾರದ ದಾಖಲೆಗಳು ಮತ್ತು ಮುಜಾಹಿದ್‌ ಹೇಳಿಕೆ ಪರಿಶೀಲಿಸಿದಾಗ ವ್ಯವಹಾರದ ಬಗ್ಗೆ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ.

ಜಮೀರ್‌ ಅವರಿಗೆ ಸೇರಿದ ಆಸ್ತಿ ಮಾತ್ರವಲ್ಲದೆ ಮುಜಾಹಿದ್‌, ತನ್ನ ಸ್ವಂತದ ಆಸ್ತಿಯನ್ನು ಸಹ ಮನ್ಸೂರ್‌ಗೆ ಮಾರಾಟ ಮಾಡಿದ್ದ. ಈ ಬಗ್ಗೆ ಸಹ ದಾಖಲೆಗಳು ಸಿಕ್ಕಿವೆ. ಮುಜಾಹಿದ್‌ ಹೇಳಿಕೆ ಮೇರೆಗೆ ಜಮೀರ್‌ ಅವರಿಗೆ ನೋಟಿಸ್‌ ಜಾರಿಯಾಗಿದೆ ಎಂದು ಮೂಲಗಳು ಹೇಳಿವೆ.

ಮನ್ಸೂರ್‌ಗೆ ಮಾಹಿತಿ ನೀಡುತ್ತಿದ್ದ!

ಶಿವಾಜಿನಗರದ ಸೈಯದ್‌ ಮುಜಾಹಿದ್‌ ಅಪರಾಧ ಹಿನ್ನೆಲೆಯುಳ್ಳವನಾಗಿದ್ದು, ಆತನ ವಿರುದ್ಧ ಪುಲಿಕೇಶಿ ನಗರ ಹಾಗೂ ಶಿವಾಜಿನಗರ ಸೇರಿದಂತೆ ಇತರೆ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಪುಲಿಕೇಶಿ ನಗರದ ಠಾಣೆಯಲ್ಲಿ ರೌಡಿಪಟ್ಟಿಯಲ್ಲಿ ಆತನ ಹೆಸರಿತ್ತು. ಮಾಜಿ ಸಚಿವ ಜಮೀರ್‌ ಅಹಮ್ಮದ್‌ ಬೆಂಬಲಿಗನಾಗಿ ಗುರುತಿಸಿಕೊಂಡಿದ್ದ ಆತ, ಶಿವಾಜಿನಗರದ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಯಲ್ಲಿ ತೊಡಗಿದ್ದ. ಇದೇ ವಿಶ್ವಾಸದಲ್ಲೇ ಜಮೀರ್‌, ಮುಜಾಹಿದ್‌ನನ್ನು ಸರ್ಕಾರದಿಂದ ಬಿಬಿಎಂಪಿಗೆ ನಾಮನಿರ್ದೇಶನ ಮಾಡಿಸಿದ್ದರು ಎಂದು ತಿಳಿದು ಬಂದಿದೆ.

ಸ್ಥಳೀಯ ಪ್ರಭಾವ ಬೆಳೆಸಿಕೊಂಡಿದ್ದ ಮುಜಾಹಿದ್‌ಗೆ ಸಹಜವಾಗಿ ಅದೇ ಏರಿಯಾದಲ್ಲಿ ಉದ್ಯಮ ಹೊಂದಿದ್ದ ಮನ್ಸೂರ್‌ಗೆ ಪರಿಚಯವಾಗಿದೆ. ಬಳಿಕ ಮನ್ಸೂರ್‌ನ ಹಣಕಾಸು ವ್ಯವಹಾರಗಳಿಗೆ ಮುಜಾಹಿದ್‌ ರಕ್ಷಣೆ ಕೊಟ್ಟಿದ್ದು, ಹಣಕಾಸು ವ್ಯವಹಾರದಲ್ಲಿ ಸಹ ಪಾಲುದಾರಿಕೆ ಹೊಂದಿದ್ದ. ವಂಚನೆ ಕೃತ್ಯ ಬೆಳಕಿಗೆ ಬಂದು ವಿದೇಶಕ್ಕೆ ಮನ್ಸೂರ್‌ ತಪ್ಪಿಸಿಕೊಳ್ಳಲು ನೆರವು ನೀಡಿದ್ದ ಮುಜಾಹಿದ್‌, ಆನಂತರವು ಮನ್ಸೂರ್‌ ಜೊತೆ ಸಂಪರ್ಕದಲ್ಲಿದ್ದು, ಸ್ಥಳೀಯ ಬೆಳವಣಿಗೆಗಳನ್ನು ಮಾಹಿತಿ ನೀಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

- ಗಿರೀಶ್ ಮಾದೇನಹಳ್ಳಿ

 

Follow Us:
Download App:
  • android
  • ios