ಬೆಂಗಳೂರು [ಜು.25] : ಐಎಂಎ ಬಹುಕೋಟಿ ವಂಚನೆ ಪ್ರಕರಣದ ಸಂಬಂಧ ಜು.29 ರಂದು ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವರಾದ ಜಮೀರ್‌ ಅಹಮ್ಮದ್‌ ಖಾನ್‌ ಮತ್ತು ಆರ್‌.ರೋಷನ್‌ ಬೇಗ್‌ ಅವರಿಗೆ ಎಸ್‌ಐಟಿ ನೋಟಿಸ್‌ ಜಾರಿಗೊಳಿಸಿದೆ.

ಈಗಾಗಲೇ ಮೂರು ಬಾರಿ ರೋಷನ್‌ ಬೇಗ್‌ ವಿಚಾರಣೆ ನಡೆದಿದ್ದು, ಮತ್ತೆ ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕಿದೆ. ಇನ್ನು ವಂಚನೆ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡುವಂತೆ ಒತ್ತಾಯ ಮಾಡಿದ್ದ ಮಾಜಿ ಸಚಿವ ಜಮೀರ್‌ ಅಹಮ್ಮದ್‌ ಅವರಿಗೂ ಸಹ ಈಗ ತನಿಖೆ ಬಿಸಿ ತಟ್ಟಿರುವುದು ಕುತೂಹಲ ಮೂಡಿಸಿದೆ.

ವಂಚನೆ ಪ್ರಕರಣದಲ್ಲಿ ಕೆಲವು ವಿಚಾರಗಳಿಗೆ ಮಾಜಿ ಸಚಿವರಿಂದ ಮಾಹಿತಿ ಪಡೆಯಬೇಕಿದೆ. ಹೀಗಾಗಿ ಅವರಿಗೆ ಸೋಮವಾರ ವಿಚಾರಣೆಗೆ ಬರುವಂತೆ ಸೂಚಿಸಲಾಗಿದ್ದು, ಇಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತದೆ ಎಂದು ಎಸ್‌ಎಟಿ ಮುಖ್ಯಸ್ಥ ಬಿ.ಆರ್‌.ರವಿಕಾಂತೇಗೌಡ ಕನ್ನಡಪ್ರಭಕ್ಕೆ ತಿಳಿಸಿದರು.

ಐಎಂಎ ಮಾಲೀಕ ಮಹಮ್ಮದ್‌ ಮನ್ಸೂರ್‌ಗೆ ರಿಚ್ಮಂಡ್‌ ಟೌನ್‌ ಸಮೀಪದಲ್ಲಿರುವ ತಮ್ಮ ಆಸ್ತಿ ಮಾರಾಟ ಮಾಡಿದ್ದಾಗಿ ಮಾಜಿ ಸಚಿವ ಜಮೀರ್‌ ಅಹಮದ್‌ಖಾನ್‌ ಅವರು, ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡೇವಿಟ್‌ನಲ್ಲಿ ಉಲ್ಲೇಖಿಸಿದ್ದರು. ಅದರೆ ರೋಷನ್‌ ಬೇಗ್‌ ವಿರುದ್ಧ ಮನ್ಸೂರ್‌ನಿಂದ 400 ಕೋಟಿ ರು. ಪಡೆದ ಆರೋಪವಿದೆ. ಈ ಮಹಾಮೋಸದ ಕೃತ್ಯ ಬೆಳಕಿಗೆ ಬಂದಾಗ ಅಧಿಕಾರದಲ್ಲಿದ್ದ ಜಮೀರ್‌ ಅಹಮದ್‌ ಖಾನ್‌ ಅವರು, ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಎಸ್‌ಐಟಿ ರಚನೆ ಮಾಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಆಸ್ತಿ ಪರಭಾರೆ ಹಿನ್ನೆಲೆಯಲ್ಲಿ ಅವರಿಂದ ಹೇಳಿಕೆ ಪಡೆಯಲು ಎಸ್‌ಐಟಿ ಮುಂದಾಗಿದೆ. ಇದೇ ಪ್ರಕರಣದಲ್ಲಿ ಜಮೀರ್‌ ಆಪ್ತ ಬಿಬಿಎಂಪಿ ನಾಮನಿರ್ದೇಶಿತ ಸದಸ್ಯ ಮುಜಾಹೀದ್‌ ಸಹ ಬಂಧನವಾಗಿತ್ತು.