ಸಚಿವ ಸಂಪುಟದಿಂದ ಕೈಬಿಟ್ಟ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದು ಹೊರಬಂದ ಶ್ರೀನಿವಾಸ ಪ್ರಸಾದ್, ಇವತ್ತು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಬೆಂಗಳೂರು (ಜ.02): ಸಚಿವ ಸಂಪುಟದಿಂದ ಕೈಬಿಟ್ಟ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದು ಹೊರಬಂದ ಶ್ರೀನಿವಾಸ ಪ್ರಸಾದ್, ಇವತ್ತು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿಯ ಮುಂಭಾಗದಲ್ಲಿಂದು ನಂಜನಗುಡು ಉಪಚುನಾವಣೆಯ ರಣಕಹಳೆಯೇ ಮೊಳಗಿದಂತಿತ್ತು. ಸಚಿವ ಸಂಪುಟ ಪುನರ್ರಚನೆ ವೇಳೆ ಗೌರವದಿಂದ ನಡೆಸಿಕೊಳ್ಳದೇ ಕೈಬಿಟ್ಟರು ಅಂತ ಸಿಡಿದೆದ್ದು ಕಾಂಗ್ರೆಸ್ ಪಕ್ಷಕ್ಕೇ ರಾಜೀನಾಮೆ ನೀಡಿದ ಶ್ರೀನಿವಾಸ ಪ್ರಸಾದ್ ಇವತ್ತು ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು. ಶ್ರೀನಿವಾಸ ಪ್ರಸಾದರನ್ನ ಸ್ವಾಗತಿಸಲು ಇಡೀ ಬಿಜೆಪಿ ಪಾಳೆಯವೇ ಇವತ್ತು ಪ್ರಧಾನ ಕಚೇರಿಗೆ ಬಂದಿತ್ತು. ಇದರ ಬೆನ್ನಲ್ಲೇ ತಮ್ಮ ಬೆಂಬಲಿಗರ ಪಡೆಯೊಂದಿಗೆ ಬಂದವರು ಶ್ರೀನಿವಾಸ ಪ್ರಸಾದ್.
ಕಮಲ ಪಾಳೆಯಕ್ಕೆ ಬೆಂಬಲಿಗರ ಜತೆ ಬಂದ ಶ್ರೀನಿವಾಸ ಪ್ರಸಾದರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು. ಕಮಲದ ಚಿಹ್ನೆಯ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡ ಯಡಿಯೂರಪ್ಪ ಮಾತನಾಡಿ, ಶ್ರೀನಿವಾಸ ಪ್ರಸಾದ್ ಅವರ ಆಗಮನದಿಂದ ಪಕ್ಷಕ್ಕೆ ಭೀಮಬಲ ಬಂದಿದೆ ಅಂತ ಹೇಳಿದರು.
ಬಿಜೆಪಿ ಸೇರಿದ ನಂತರ ಮಾತನಾಡಿದ ಶ್ರೀನಿವಾಸ ಪ್ರಸಾದ್, ದುರಂಹಕಾರಿ ಸಿದ್ದರಾಮಯ್ಯ ನನ್ನನ್ನು ಅಗೌರವದಿಂದ ನಡೆಸಿಕೊಂಡು ಸಂಪುಟದಿಂದ ಕೈಬಿಟ್ಟಿದ್ದನ್ನ ಸವಾಲಾಗಿ ಸ್ವೀಕರಿಸಿದ್ದೇನೆ. ನಂಜನಗೂಡು ಚುನಾವಣೆಯಲ್ಲಿ ತಕ್ಕ ಪ್ರತ್ಯುತ್ತರ ನೀಡುತ್ತೇನೆ, ಜನರೇ ಸಿದ್ದರಾಮಯ್ಯಗೆ ಪಾಠ ಕಲಿಸಲಿದ್ದಾರೆ ಅಂದ್ರು. ನನಗ್ಯಾವ ಅಧಿಕಾರ, ಸ್ಥಾನಮಾನವೂ ಬೇಡ. ಇದು ನನ್ನ ರಾಜಕೀಯದ ಕೊನೆ ದಿನಗಳು. ಗೌರವಯುತ ರಾಜಕಾರಣವಷ್ಟೇ ನನ್ನ ಆದ್ಯತೆ ಎಂದರು.
ಇದೇ ಸಂಭ್ರಮದ ಸಮಾರಂಭದ ನಡುವೆಯೇ, ಮುನಿಸಿಕೊಂಡಿದ್ದ ಯಡಿಯೂರಪ್ಪ ಹಾಗೂ ಈಶ್ವರಪ್ಪ ಕೂಡ ಮುನಿಸು ಮರೆತು ಕೈಕುಲುಕಿ ಹಸ್ತಲಾಘವ ನೀಡಿ ಜೊತೆಯಾದರು.
