ಯಾದಗಿರಿ: ಕಾಂಗ್ರೆಸ್‌ ಹೈಕಮಾಂಡ್‌ ಸೂಚಿಸಿದರೆ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ ಎಂದು ಸಚಿವ ರಾಜಶೇಖರ ಪಾಟೀಲ್‌ ತಿಳಿಸಿದ್ದಾರೆ. ಯಾದಗಿರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನ ಬಗ್ಗೆ ಕಾಂಗ್ರೆಸ್‌ ಆತ್ಮಾವಲೋಕನ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಅವರನ್ನು, ಇವರನ್ನು ದೂರುವುದಿಲ್ಲ ಎಂದರು. ಪಕ್ಷ ಚುನಾವಣೆಯಲ್ಲಿ ಸೋತಿದೆ, ಇದಕ್ಕೆ ಕಾರಣಗಳೇನು, ಮುಂದೇನಾಗಬೇಕು ಎನ್ನುವುದನ್ನು ಪಕ್ಷದ ವಲಯದಲ್ಲಿ ಚರ್ಚೆ ನಡೆಸುತ್ತೇವೆ ಎಂದರು.

ವಿಪ್ರೋಗೆ ಭೂಮಿ ನೀಡಿರಲಿಲ್ಲವೆ:

ಜಿಂದಾಲ್‌ ಕಂಪನಿಗೆ ಬಳ್ಳಾರಿಯಲ್ಲಿ 3660 ಎಕರೆ ಭೂಮಿ ಪರಭಾರೆ ಕುರಿತು ಸರ್ಕಾರದಲ್ಲೇ ಅಪಸ್ವರಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ರಾಜಶೇಖರ ಪಾಟೀಲ್‌, ಅಭಿವೃದ್ಧಿ ದೃಷ್ಟಿಕೋನದಲ್ಲಿ ಭೂಮಿ ನೀಡುವ ನಿರ್ಧಾರಕ್ಕೆ ಬರಲಾಗಿದೆ. ಅಷ್ಟಕ್ಕೂ, ಈ ಹಿಂದೆ ವಿಪ್ರೋಗೆ ಭೂಮಿ ನೀಡಿರಲಿಲ್ಲವೇ? ಅಭಿವೃದ್ಧಿ ಮುಂದುವರೆಯುತ್ತಿರಬೇಕು ಎಂದು ತಿಳಿಸಿದರು.

ಅತೃಪ್ತರಿಗೆ ಸಚಿವ ಸ್ಥಾನ ನೀಡಿ ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿನ ಬಂಡಾಯ ಶಮನಕ್ಕೆ ಅತೃಪ್ತರಿಗೆ ಸಚಿವ ಸ್ಥಾನ ನೀಡುವ ಸಮಾಧಾನ ಪಡಿಸುವ ಬಗ್ಗೆ ಮಾತುಗಳು ತೇಲಿಬರುತ್ತಿರುವ ಹಿನ್ನೆಲೆಯಲ್ಲಿ, ತಮ್ಮ ಸಚಿವ ಸ್ಥಾನ ತಲೆದಂಡ ಬಯಸಿದರೆ ಹೇಗೆ ಅನ್ನೋ ಪ್ರಶ್ನೆಗೆ ಸಚಿವ ರಾಜಶೇಖರ ಪಾಟೀಲ್‌ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.