ಮೈಸೂರು: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಪರಾಭವಗೊಂಡ ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಸಂಸದ ಧ್ರುವನಾರಾಯಣ್‌ ಅವರಿಗೆ ಶಾಸಕ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಿರುವುದಾಗಿ ವಿಧಾನ ಪರಿಷತ್‌ ಸದಸ್ಯ ಆರ್‌. ಧರ್ಮಸೇನ ತಿಳಿಸಿದ್ದಾರೆ. 

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಂಸದರೆಂದು ಹೆಸರು ಮಾಡಿ, ಸಾಕಷ್ಟುಅಭಿವೃದ್ಧಿ ಕಾರ್ಯ ಕೈಗೊಂಡವರು ಅಧಿಕಾರದಲ್ಲಿರಬೇಕೆ ಹೊರತು ಐದು ವರ್ಷ ಸುಮ್ಮನೆ ಕೂರುವುದು ಇಷ್ಟವಿಲ್ಲ. ಈ ಹಿನ್ನೆಲೆಯಲ್ಲಿ ನನ್ನ ಸ್ಥಾನವನ್ನು ಅವರಿಗೆ ಬಿಟ್ಟುಕೊಡಲು ಸಿದ್ಧ ಎಂದು ತಿಳಿಸಿದರು. 

ರಾಜ್ಯದಲ್ಲಿ ಐದು ವರ್ಷದವರೆಗೆ ಯಾವುದೇ ಚುನಾವಣೆ ನಡೆಯುವ ಸಾಧ್ಯತೆ ಇಲ್ಲ. ಈಗ ರಾಷ್ಟ್ರ ಮತ್ತು ರಾಜ್ಯದಲ್ಲಿ ಹೆಸರು ಮಾಡಿದ ಸಜ್ಜನ ರಾಜಕಾರಣಿಯು ಅಲ್ಲಿಯವರೆಗೆ ಸುಮ್ಮನೆ ಇರಬೇಕಾಗಿದೆ. ಈ ರೀತಿ ಆಗಬಾರದೆಂಬ ದೃಷ್ಟಿಯಿಂದ ತಾವು ಈ ನಿರ್ಧಾರಕ್ಕೆ ಬಂದಿದ್ದು, ಅದನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು ಎಂದರು.