ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ  ಬ್ಲಾಗ್'ನಲ್ಲಿ  ಬರೆದುಕೊಂಡಿದ್ದಾರೆ ಎನ್ನುವ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಸುವರ್ಣ ನ್ಯೂಸ್'ಗೆ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು (ಡಿ.28): ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಬ್ಲಾಗ್'ನಲ್ಲಿ ಬರೆದುಕೊಂಡಿದ್ದಾರೆ ಎನ್ನುವ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಸುವರ್ಣ ನ್ಯೂಸ್'ಗೆ ಸ್ಪಷ್ಟನೆ ನೀಡಿದ್ದಾರೆ.

ಐದಾರು ಬಾರಿ ಗೆದ್ದರೂ ಐದು ಪೈಸೆ ಉಪಯೋಗವಿಲ್ಲ ಎಂದು ನಾನು ಹೇಳಿದ್ದು ಬರೀ ಉತ್ತರ ಕನ್ನಡಕ್ಕಲ್ಲ. ಉತ್ತರ ಕನ್ನಡದಲ್ಲಿ ಐದಾರು ಬಾರಿ ಗೆದ್ದಿರೋರು ಬಹಳಷ್ಟು ಜನರಿದ್ದಾರೆ. ದೇಶಪಾಂಡೆಯವರಿದ್ದಾರೆ, ಕಾಗೇರಿಯವರಿದ್ದಾರೆ. ನಾನು ನಿರ್ದಿಷ್ಟವಾಗಿ ಯಾರಿಗೂ ಹೇಳಿಲ್ಲ. ಪದೇ ಪದೇ ಗೆದ್ದ ನಂತರ ಅಭಿವೃದ್ಧಿ ಮಾತುಗಳನ್ನು ಬಿಟ್ಟು ಹಳೆ ರಾಗಗಳನ್ನು ಹಾಡುತ್ತಾ ಇದ್ದರೆ ನಿಮ್ಮ ಕ್ಷೇತ್ರಕ್ಕೆ ಅಭಿವೃದ್ದಿ ಮಾಡೋದು ಯಾವಾಗ ಎಂದು ಎಲ್ಲಾ ಸಚಿವರಿಗೆ ನಾನು ಕೇಳಿರೋ ಪ್ರಶ್ನೆ ಇದು ಎಂದು ಚಕ್ರವರ್ತಿ ಸೂಲಿಬೆಲೆ ಸುವರ್ಣ ನ್ಯೂಸ್'ಗೆ ಹೇಳಿದ್ದಾರೆ.

ಕರ್ನಾಟಕ ಅಭಿವೃದ್ಧಿಯನ್ನು ಬಯಸುತ್ತದೆ. ನಾವು ಎಷ್ಟು ದಿನ ಅಂತ ಜಾತಿ ರಾಜಕಾರಣ ಮಾಡ್ತೀರಿ? ನಮಗೆ ಜಾತಿ ರಾಜಕಾರಣ ಸಾಕಾಗಿದೆ. ನಮಗದು ಬೇಡ. ನಮಗೆ ವಿಕಾಸ ವಾದದ ರಾಜಕಾರಣ ಬೇಕಾಗಿದೆ. ನೀವು ಬೆಂಕಿಯ ಕಿಡಿ ಹತ್ತಿಸಿದರೆ ಜನ ಓಟು ಹಾಕಿ ಬಿಡ್ತಾರೆ ಅಂತ ತಿಳ್ಕೋಳೋದು ನಿಮ್ಮ ಮೂರ್ಖತನವಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.

ನಾನು ಪ್ರಧಾನಿ ನರೇಂದ್ರ ಮೋದಿ, ಹಾಗೂ ಅಮಿತ್ ಶಾರವರನ್ನು ಕೇಳಿಕೊಳ್ಳುತ್ತೇನೆ. ನಿಮಗೆ ಗುಜರಾತ್ ಬಗ್ಗೆ ಮಾತನಾಡುವಾಗ ಗುಜರಾತ್ ವಿಕಾಸವಾದ ಅನ್ನೋದಕ್ಕೆ ಆಗುತ್ತೆ, ಕರ್ನಾಟಕದ ಬಗ್ಗೆ ಮಾತನಾಡುವಾಗಲೂ ವಿಕಾಸವಾದದ ಕಲ್ಪನೆ ಇಟ್ಟುಕೊಂಡು ಮಾತನಾಡಿ. ಇಲ್ಲಿಗೆ ಬಂದಾಗಲೂ ವಿಕಾಸದ ಬಗ್ಗೆ ಹೇಳಿ ಎಂದು ಕೇಳಿಕೊಳ್ಳುತ್ತೇನೆ. ಮಾನ್ಯ ಮುಖ್ಯಮಂತ್ರಿಗಳೇ ಇನ್ಮುಂದೆ ವಿಕಾಸವಾದದ ಬಗ್ಗೆ ಮಾತನಾಡಿ. ನೀವು ಮಾಡಿದ್ದೇನು, ಮಾಡದೇ ಇರುವುದೇನು ಎಂಬುದನ್ನು ಜನರ ಮುಂದಿಡಿ ಎಂದಿದ್ದಾರೆ.

ನಾನು ರಾಜಕೀಯಕ್ಕೆ ಬರುವುದಿಲ್ಲ ಎನ್ನುವುದನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ನಾನು ಜೀವನ ಪರ್ಯಂತ ವಿರೋಧ ಪಕ್ಷವಾಗಿ ಇರಲು ಇಚ್ಛೆಪಡುವ ವ್ಯಕ್ತಿ ಎಂದು ಚಕ್ರವರ್ತಿ ಸೂಲಿಬೆಲೆ ಸುವರ್ಣ ನ್ಯೂಸ್'ಗೆ ಹೇಳಿದ್ದಾರೆ.