ಸಿನಿಮಾ ರಂಗ, ಪತ್ರಿಕೋದ್ಯಮ ರಂಗ ಸೇರಿದಂತೆ ವಿವಿಧೆಡೆ ಸಂಚಲನವನ್ನೇ ಸೃಷ್ಟಿಸಿದ್ದ ಮೀ ಟೂ ಇದೀಗ ವಿಜ್ಞಾನಿಯೋರ್ವರಿಗೂ ಕೂಡ ತಟ್ಟಿದ್ದು ಈ ನಿಟ್ಟಿನಲ್ಲಿ ಅವರಿಗೆ ಕಡ್ಡಾಯ ನಿವೃತ್ತಿ ನೀಡಲಾಗಿದೆ. 

ಬೆಂಗಳೂರು: ಸ್ಯಾಂಡಲ್‌ವುಡ್‌, ಬಾಲಿವುಡ್‌ ಸೇರಿದಂತೆ ಭಾರತೀಯ ಪತ್ರಿಕೋದ್ಯಮದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದ ಮೀ ಟೂ ಇದೀಗ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಗೂ ವ್ಯಾಪಿಸಿದೆ. 

ಕಳೆದ ತಿಂಗಳಷ್ಟೇ ಡಾಕ್ಟರೇಟ್‌ ವಿದ್ಯಾರ್ಥಿಯೊಬ್ಬರಿಂದ ಮೀ ಟೂ ಆರೋಪಕ್ಕೆ ಗುರಿಯಾಗಿದ್ದ ಹಲವು ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ವಿಜ್ಞಾನಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯ ಪ್ರೊಫೆಸರ್‌ ಗಿರಿಧರ್‌ ಮದ್ರಾಸ್‌ ಅವರಿಗೆ ಕಡ್ಡಾಯ ನಿವೃತ್ತಿ ಮೇಲೆ ಕಳುಹಿಸಲಾಗಿದೆ. ಈ ಸಂಬಂಧ ಐಐಎಸ್‌ಸಿಯ ಕೌನ್ಸಿಲ್‌ ತನಿಖೆ ಬಳಿಕ ಪ್ರೊ.ಮದ್ರಾಸ್‌ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಈ ಬಗ್ಗೆ ಮಂಗಳವಾರ ಮಾತನಾಡಿದ ಐಐಎಸ್‌ಸಿ ನಿರ್ದೇಶಕ ಪ್ರೊ. ಅನುರಾಗ್‌ ಕುಮಾರ್‌, ‘ಪ್ರೊ. ಮದ್ರಾಸ್‌ ಅವರು ಕಡ್ಡಾಯ ನಿವೃತ್ತಿ ಪಡೆಯಬೇಕು ಎಂಬ ನಿರ್ಧಾರವನ್ನು ಕೌನ್ಸಿಲ್‌ ಕೈಗೊಂಡಿದೆ,’ ಎಂದು ಹೇಳಿದ್ದಾರೆ. ಆದರೆ, ಆದರೆ, ನಿವೃತ್ತಿಯ ಲಾಭಗಳನ್ನು ಮದ್ರಾಸ್‌ ಅವರು ಪಡೆಯಲಿದ್ದಾರೆಯೇ ಅಥವಾ ಇಲ್ಲ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಪ್ರೊ. ಗಿರಿಧರ್‌ ಮದ್ರಾಸ್‌ ಅವರು ಶಾಂತಿ ಸ್ವರೂಪ ಭಟ್ನಾಗರ ಸೇರಿದಂತೆ ಇತರ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.