ಹುಬ್ಬಳ್ಳಿ : ಕುಂದಗೋಳ ಹಾಗೂ ಚಿಂಚೋಳಿ ಉಪ ಚುನಾವಣೆ ಗಳನ್ನು ಗೆದ್ದರೆ ರಾಜ್ಯದಲ್ಲಿ ನಮ್ಮದೇ ಸರ್ಕಾರ ರಚನೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಪ ಚುನಾವಣೆ ಹಿನ್ನೆಲೆಯಲ್ಲಿ ನಾಲ್ಕೈದು ದಿನಗಳಿಂದ ಕುಂದಗೋಳದಲ್ಲಿ ಪ್ರಚಾರ ನಡೆಸುತ್ತಿ ರುವ ಯಡಿಯೂರಪ್ಪ ಭಾನುವಾರ ಸಿ.ಎಸ್. ಶಿವಳ್ಳಿ ಅವರ ತವರೂರು ಯರಗುಪ್ಪಿ ಸೇರಿದಂತೆ ಹಿರೇನರ್ತಿ, ಹಿರೇಹರಕುಣಿ, ತರ್ಲಘಟ್ಟ ಹಾಗೂ ಗುಡಗೇರಿಯಲ್ಲಿ ಭರ್ಜರಿ ಪ್ರಚಾರ ನಡೆಸಿ ಮಾತನಾಡಿದರು. ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜ ಕಾರಣದಲ್ಲಿ ಅಲ್ಲೋಲ- ಕಲ್ಲೋಲವಾಗಲಿದೆ. ಉಪಚುನಾವಣೆಗಳಲ್ಲಿ ಗೆಲುವು ಬಿಜೆಪಿ ಸರ್ಕಾರ ರಚಿಸಲು ಸೋಪಾನವಾಗಲಿವೆ ಎಂದರು. 

ಬಿಜೆಪಿ ಶಾಸಕರನ್ನು ಡಿ.ಕೆ. ಶಿವಕುಮಾರ್ ಸೆಳೆಯುತ್ತಾರೆ ಎನ್ನುವ ವಿಚಾರಕ್ಕೆ ನಮ್ಮ ಯಾವೊಬ್ಬ ಶಾಸಕ ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಜತೆಗೆ ಹೋಗುವ ಪ್ರಶ್ನೆಯೇ ಇಲ್ಲ. ಅವರ ಆಮಿಷಕ್ಕೆ ನಮ್ಮವರು ಬಲಿಯಾಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಮೈತ್ರಿ ಸರ್ಕಾರ ಬೀಳದೇ ಹೋದರೆ ಯಡಿಯೂರಪ್ಪ ರಾಜಕೀಯ ನಿವೃತ್ತಿ ಪಡೆಯಲಿ ಎಂಬ ಬಂಡೆಪ್ಪ ಕಾಶೆಂಪುರ ಹೇಳಿಕೆಗೆ, ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ರಾಜ್ಯ ಸರ್ಕಾರ ಮಾತ್ರ ಬಿದ್ದು ಹೋಗಲಿದೆ. ರಾಜ್ಯ ಬರಗಾಲದಿಂದ ತತ್ತರಿಸುವಾಗ ಅಪ್ಪ-ಮಗ ರೆಸಾರ್ಟ್ ವಾಸ್ತವ್ಯ ಮಾಡುತ್ತಿದ್ದಾರೆ. ಇದು ತಮಗೂ ಬೇಸರ ಮೂಡಿಸಿದೆ ಎಂದರು.

ಜೆಡಿಎಸ್-ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ಉಲ್ಬಣಗೊಂಡಿದೆ. ಅದಕ್ಕಾಗಿ ಮುಖ್ಯಮಂತ್ರಿ ಬೇಸರ ಮಾಡಿಕೊಂಡು ರೆಸಾರ್ಟ್‌ಗೆ ಹೋಗಿದ್ದು, ಈ ಕಚ್ಚಾಟ ನಾವು ಲೋಕಸಭೆಯಲ್ಲಿ  ಹೆಚ್ಚು ಸ್ಥಾನ ಗೆದ್ದ ನಂತರ ಹತ್ತು ಪಟ್ಟು ಹೆಚ್ಚಾಗಲಿದೆ. ಎರಡೂ ಉಪಚುನಾವಣೆ ಗೆಲುವಿನ ಮೇಲೆ ರಾಜಕೀಯ ಬದಲಾವಣೆ ಆಗಲಿದೆ ಎಂದು ಹಿರೇಹರಕುಣಿಯಲ್ಲಿ ಯಡಿಯೂರಪ್ಪ ಪುನರುಚ್ಚಿಸಿದರು.