ಬೆಂಗಳೂರು[ಜು.08]: ರಾಜೀನಾಮೆ ನೀಡಿರುವ ಶಾಸಕರ ಮನವೊಲಿಸುವ ಪ್ರಯತ್ನ ಮುಂದುವರಿದಿದೆ. ಸರ್ಕಾರಕ್ಕೆ ಏನೂ ಆಗಲ್ಲ. ಶಾಸಕರ ಮನವೊಲಿಸಲು ನಾವು ಕೂಡ ತಂತ್ರ ಮಾಡಿದ್ದೇವೆ. ಆದರೆ, ಆ ತಂತ್ರವೇನು ಎಂಬುದನ್ನು ಹೇಳುವುದಿಲ್ಲ. ಹೇಳಿದರೆ ಬಿಜೆಪಿಯವರು ಆ ತಂತ್ರಕ್ಕೂ ಪತಿತಂತ್ರ ಹೂಡಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್‌ನಿಂದ ಒಂದಷ್ಟು ಜನ ರಾಜೀನಾಮೆ ನೀಡಿದ್ದಾರೆ. ಅವರ ಮನವೊಲಿಸಲಾಗುವುದು ಎಂದ ಅವರು, ಕೆಲ ಶಾಸಕರು ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ರಾಜೀನಾಮೆ ಹಿಂಪಡೆಯುವ ಬಗ್ಗೆ ಮಾತನಾಡುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಯಾವ ಶಾಸಕರೂ ನನ್ನ ಬಳಿ ಹೇಳಿಲ್ಲ ಎಂದರು. ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗುವ ಬಗ್ಗೆ ಎದುರಾದ ಪ್ರಶ್ನೆಗೆ ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ ಎಂದರು.

ರಾಮಲಿಂಗಾರೆಡ್ಡಿಗೆ ಎರಡನೇ ಬಾರಿಗೆ ಸಚಿವ ಸಂಪುಟ ವಿಸ್ತರಣೆ ವೇಳೆ ಮಂತ್ರಿ ಮಾಡೋದಾಗಿ ಹೇಳಿದ್ದೆ. ಆದರೆ ಆಮೇಲೆ ಏನಾಯಿತೋ ಗೊತ್ತಿಲ್ಲ. ಅವರು ಯಾಕೆ ಮುನಿಸಿಕೊಂಡಿದ್ದಾರೆ ಎಂದು ಅವರೇ ತಿಳಿಸಬೇಕು ಎಂದು ಹೇಳಿದರು