ನವದೆಹಲಿ (ಡಿ. 24): ಚುನಾವಣಾ ನೀತಿಯನ್ನು ಮತ್ತಷ್ಟುಕಠಿಣಗೊಳಿಸಲು ಮುಂದಾಗಿರುವ ಕೇಂದ್ರ ಚುನಾವಣಾ ಆಯೋಗ, ಅಭ್ಯರ್ಥಿಯೋರ್ವ ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿದ್ದು ಖಚಿತಗೊಂಡರೆ ಆತನನ್ನು ಅನರ್ಹಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ.

ಅಲ್ಲದೆ, ಮೇಲ್ಮನೆ ಅಭ್ಯರ್ಥಿಗಳಿಗೂ ಚುನಾವಣೆಯಲ್ಲಿ ವೆಚ್ಚದ ಮಿತಿ ಹಾಕುವ ಮತ್ತು ಚುನಾವಣೆ ವೇಳೆ ಲಂಚ ನೀಡಿದ್ದು ಕಂಡುಬಂದರೆ, ಅವರನ್ನು ತಕ್ಷಣವೇ ಬಂಧಿಸುವ ಅಧಿಕಾರವನ್ನು ಪೊಲೀಸರಿಗೆ ನೀಡುವ ಕಾನೂನು ಜಾರಿ ಕುರಿತು ಕೇಂದ್ರ ಕಾನೂನು ಸಚಿವಾಲಯಕ್ಕೆ ಶಿಫಾರಸು ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.

ಜ.8ಕ್ಕೆ ಸಂಸತ್ತಿನ ಚಳಿಗಾಲದ ಅಧಿವೇಶನ ಮುಗಿಯಲಿದ್ದು, ಬಳಿಕ ಈ ಪ್ರಸ್ತಾವಗಳನ್ನು ಅದು ಕಾನೂನು ಸಚಿವಾಲಯದ ಮುಂದೆ ಇಡಲು ನಿರ್ಧರಿಸಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.