ಬೆಂಗಳೂರು [ಜು.27]: ರಾಜಕೀಯದ ಕ್ಷಿಪ್ರ ಬೆಳವಣಿಗೆಯಲ್ಲಿ ದೋಸ್ತಿ ಸರ್ಕಾರವನ್ನು ಪತನಗೊಳಿಸಿ ಬಿಜೆಪಿ ಆಡಳಿತ ತರುವಲ್ಲಿ ಯಶಸ್ವಿಯಾಗಿರುವ ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಹುಮತ ಸಾಬೀತುಪಡಿಸಬೇಕಾದಲ್ಲಿ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ಸದನಕ್ಕೆ ಗೈರು ಹಾಜರಾಗಬೇಕಾಗುತ್ತದೆ.

ಈ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾದರೆ ಮುಂದಿನ ಆರು ತಿಂಗಳು ಬಿಜೆಪಿ ಸರ್ಕಾರಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ. ರಾಜ್ಯ ವಿಧಾನಸಭೆಯಲ್ಲಿ 224 ಶಾಸಕರು ಮತ್ತು  ಒಬ್ಬರು ನಾಮನಿರ್ದೇಶಿತ ಶಾಸಕರಿದ್ದಾರೆ. ಒಟ್ಟು 225 ಶಾಸಕರ ಬಲ ಇದ್ದು, ಅತೃಪ್ತರ ಶಾಸಕರ ಪೈಕಿ ಮೂವರು ಶಾಸಕರನ್ನು ಸಭಾಧ್ಯಕ್ಷ ರಮೇಶ್ ಕುಮಾರ್ ಅನರ್ಹಗೊಳಿಸಿದ್ದಾರೆ. ಹೀಗಾಗಿ ಶಾಸಕರ ಸಂಖ್ಯೆಯು 224 ರಿಂದ 221 ಕ್ಕೆ ಕುಸಿದಿದೆ.

ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಬಹುಮತ ಸಾಬೀತು ಪಡಿಸಲು 111 ಶಾಸಕರ ಬೆಂಬಲ ಅಗತ್ಯ ಇದೆ. ಬಿಜೆಪಿಯು 105 ಶಾಸಕರನ್ನು ಹೊಂದಿದ್ದು, ಪಕ್ಷೇತರ ಶಾಸಕ ನಾಗೇಶ್ ಬೆಂಬಲ ನೀಡುವುದರಿಂದ 106 ಸಂಖ್ಯಾಬಲವಾಗಲಿದೆ. 13 ಶಾಸಕರು ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ ಅವರಿಗೆ ನೊಟೀಸ್ ಜಾರಿ ಮಾಡಲಾಗಿದೆ. ಒಟ್ಟು 14 ಶಾಸಕರ ವಿಚಾರಣೆ ಬಾಕಿ ಇದೆ. ದೋಸ್ತಿ ಪಕ್ಷದ ಸಂಖ್ಯಾಬಲವು 99 ಇದ್ದು, ಆಸ್ಪತ್ರೆಗೆ ದಾಖಲಾಗಿದ್ದ ನಾಗೇಂದ್ರ ಆಗಮಿಸಿದಲ್ಲಿ 100 ಕ್ಕೆ ತಲುಪಬಹುದು. ಒಬ್ಬರು ಬಿಎಸ್‌ಪಿ ಹಾಗೂ ಸಭಾಧ್ಯಕ್ಷರ ಒಂದು ಸಂಖ್ಯೆ ಇದೆ. 

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಶಾಸಕರು ಸದನಕ್ಕೆ ಗೈರಾದರೆ ಬಹುಮತ ಸಾಬೀತಿಗೆ ೧೦೪ ಸಂಖ್ಯಾಬಲದ ಅಗತ್ಯ ಇರಲಿದೆ. ಅಲ್ಲದೇ, ಮುಂಬೈನಲ್ಲಿನ ಅತೃಪ್ತರು ಯಡಿಯೂರಪ್ಪ ವಿಶ್ವಾಸ ಮತಯಾಚನೆ ಮಾಡುವವರೆಗೆ ಸದನಕ್ಕೆ ಬರುವುದಿಲ್ಲ ಎಂಬ ಆತ್ಮವಿಶ್ವಾಸ ಬಿಜೆಪಿಯಲ್ಲಿದೆ. ಹೀಗಾಗಿ ಬಹುಮತ ಸಾಬೀತುಪಡಿಸಲು ಸಂಖ್ಯಾಬಲದ ಸಮಸ್ಯೆಯಾಗುವುದಿಲ್ಲ ಎಂಬ ಲೆಕ್ಕಾಚಾರ ಹಾಕಲಾಗಿದೆ. ಇದೇ ವಿಶ್ವಾಸದ ಮೇಲೆ ಯಡಿಯೂರಪ್ಪ ಸರ್ಕಾರ ರಚನೆ ಮಾಡಿದ್ದಾರೆ ಎಂದು ಹೇಳಲಾಗಿದೆ.