ನವದೆಹಲಿ[ಮೇ.25]: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಕಾಂಗ್ರೆಸ್ಸಿನ ನೂತನ ಅಧ್ಯಕ್ಷರಾಗಬಹುದು ಎಂಬ ವದಂತಿಯೊಂದು ದೆಹಲಿಯಲ್ಲಿ ಹರಡಿದೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ರಾಹುಲ್‌ ಗಾಂಧಿ ಮುಂದಾಗಿದ್ದಾರೆ ಎನ್ನಲಾಗಿದೆ. ಶನಿವಾರ ಬೆಳಗ್ಗೆ ನಡೆಯಲಿರುವ ಪಕ್ಷದ ಪರಮೋಚ್ಚ ನೀತಿ ನಿರೂಪಣಾ ಸಂಸ್ಥೆ ‘ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ’ (ಸಿಡಬ್ಲ್ಯುಸಿ)ಯಲ್ಲಿ ಅವರು ಈ ಕುರಿತು ಇಂಗಿತ ವ್ಯಕ್ತಪಡಿಸಲಿದ್ದಾರೆ ಎಂದೂ ಹೇಳಲಾಗಿದೆ. ಒಂದು ವೇಳೆ ಸಿಡಬ್ಲ್ಯುಸಿ ಏನಾದರೂ ರಾಹುಲ್‌ ಕೋರಿಕೆಯನ್ನು ಮನ್ನಿಸಿದರೆ, ಹೊಸ ನಾಯಕನನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕಾಗುತ್ತದೆ.

ಹಿರಿಯ ನಾಯಕರಾಗಿರುವ ಅಶೋಕ್‌ ಗೆಹ್ಲೋಟ್‌ ಅವರು ರಾಹುಲ್‌ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅತ್ಯುತ್ತಮ ಪ್ರದರ್ಶನ ತೋರಿದ್ದರ ಹಿಂದೆ ಅವರ ಶ್ರಮವೂ ಸಾಕಷ್ಟಿದೆ. ಗೆಹ್ಲೋಟ್‌ ಅವರನ್ನು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ತಂದರೆ ರಾಜಸ್ಥಾನ ಕಾಂಗ್ರೆಸ್ಸಿನಲ್ಲಿರುವ ಗೆಹ್ಲೋಟ್‌- ಸಚಿನ್‌ ಪೈಲಟ್‌ ಸಂಘರ್ಷಕ್ಕೂ ತೆರೆ ಬೀಳಲಿದೆ ಎಂಬ ಲೆಕ್ಕಾಚಾರವಿದೆ. ಆದರೆ ಗೆಹ್ಲೋಟ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಳ್ಳುವುದು ಎಷ್ಟರ ಮಟ್ಟಿಗೆ ನಿಜ? ನೆಹರು- ಗಾಂಧಿ ಕುಟುಂಬ ಸಕ್ರಿಯ ರಾಜಕಾರಣದಲ್ಲಿರುವಾಗಲೇ ತಮ್ಮ ಕುಟುಂಬದ ಹೊರತಾಗಿ ಬೇರೊಬ್ಬರಿಗೆ ಪಕ್ಷದ ಹುದ್ದೆಯನ್ನು ವಹಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.