ವಾಷಿಂಗ್ಟನ್‌ [ಅ.04]: ಕಾಶ್ಮೀರ ವಿಷಯವಾಗಿ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಈಗಾಗಲೇ ನಾಲ್ಕು ಬಾರಿ ಯುದ್ಧ ಸಂಭವಿಸಿದೆ. ವಿಶೇಷ ಸ್ಥಾನಮಾನ ರದ್ದು ಸಂಬಂಧ ತಿಕ್ಕಾಟಕ್ಕಿಳಿದಿರುವ ಎರಡೂ ದೇಶಗಳ ನಡುವೆ ಈ ಬಾರಿ ಅಣ್ವಸ್ತ್ರ ಯುದ್ಧವೇನಾದರೂ ನಡೆದರೆ ಸಮರ ಆರಂಭವಾದ ಒಂದೇ ವಾರದೊಳಗೆ 5ರಿಂದ 12.5 ಕೋಟಿ ಮಂದಿ ಬಲಿಯಾಗಲಿದ್ದಾರೆ. ಇದು 2ನೇ ಮಹಾಯುದ್ಧದಲ್ಲಿ ಬಲಿಯಾದ ಜನರಿಗಿಂತಲೂ ಅಧಿಕ. ಅಲ್ಲದೇ ಇದು ಜಾಗತಿಕ ಹವಾಮಾನ ದುರಂತಕ್ಕೂ ಕಾರಣವಾಗಲಿದೆ ಎಂದು ಅಮೆರಿಕದ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ- ರಷ್ಯಾ ನಡುವೆ ಅಣ್ವಸ್ತ್ರ ಯುದ್ಧ ಉಂಟಾದರೆ ಐದೇ ತಾಸಿನಲ್ಲಿ 3.4 ಕೋಟಿ ಮಂದಿ ಸಾವಿಗೀಡಾಗಲಿದ್ದಾರೆ ಎಂದು ಕಳೆದ ತಿಂಗಳಷ್ಟೇ ಸ್ಟಾಕ್‌ಹೋಮ್‌ನ ಸಂಶೋಧನಾ ವರದಿಯೊಂದು ಹೇಳಿತ್ತು. ಕಳವಳಕಾರಿ ಸಂಗತಿ ಎಂದರೆ, ಜಗತ್ತಿನ ಶೇ.91ರಷ್ಟುಅಣ್ವಸ್ತ್ರ ಹೊಂದಿರುವ ಆ ದೇಶಗಳು ಕಾದಾಡಿದರೆ ಉಂಟಾಗುವುದಕ್ಕಿಂತಲೂ ಹೆಚ್ಚಿನ ಸಾವು- ನೋವು ಭಾರತ- ಪಾಕಿಸ್ತಾನ ನಡುವಣ ಕದನದಲ್ಲಿ ಆಗಲಿದೆ ಎಂದು ಅಮೆರಿಕ ಸಂಶೋಧಕರು ಎಚ್ಚರಿಸಿದ್ದಾರೆ. 6 ವರ್ಷಗಳ ಕಾಲ ನಡೆದಿದ್ದ ಎರಡನೇ ಮಹಾಯುದ್ಧ 8.5 ಕೋಟಿ ಮಂದಿಯನ್ನು ಬಲಿ ಪಡೆದಿತ್ತು. ಆದರೆ ಭಾರತ- ಪಾಕ್‌ ಅಣ್ವಸ್ತ್ರ ಸಮರ ಅದೆಲ್ಲದಕ್ಕಿಂತಲೂ ಭೀಕರವಾಗಿರಲಿದೆ ಎಂಬುದು ಸಂಶೋಧಕರ ವರದಿಯ ಸಾರ.

ಕೊಲರಾಡೋ ಬೌಲ್ಡರ್‌ ಮತ್ತು ರಟ್ಗರ್ಸ್‌ ವಿಶ್ವವಿದ್ಯಾಲಯಗಳ ಸಂಶೋಧಕರು ನಡೆಸಿರುವ ಈ ಅಧ್ಯಯನ, ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಅಣ್ವಸ್ತ್ರ ಯುದ್ಧ ನಡೆದರೆ ಅದು ಎಷ್ಟುಭೀಕರವಾಗಿರಲಿದೆ ಎಂಬ ಚಿತ್ರಣವನ್ನು ವಿಶ್ವದ ಮುಂದೆ ತೆರೆದಿಟ್ಟಿದೆ. ಸೈನ್ಸ್‌ ಅಡ್ವಾನ್ಸಸ್‌ ಎಂಬ ಜರ್ನಲ್‌ನಲ್ಲಿ ಈ ಅಧ್ಯಯನ ವರದಿಯನ್ನು ಪ್ರಕಟಿಸಲಾಗಿದೆ.

150 ಅಣ್ವಸ್ತ್ರ ಸಿಡಿತಲೆ:

ಭಾರತ ಮತ್ತು ಪಾಕಿಸ್ತಾನಗಳು ತಲಾ 150 ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದಿವೆ. ಇವುಗಳ ಸಂಖ್ಯೆ 2025ರ ವೇಳೆಗೆ 200 ದಾಟುವ ನಿರೀಕ್ಷೆ ಇದೆ. ಒಂದು ವೇಳೆ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ನಡೆದರೆ ಅದರ ನೇರ ಪರಿಣಾಮ ವಿಶ್ವದ ಮೇಲೆ ಆಗಲಿದೆ. ಯುದ್ಧದ ಪರಿಣಾಮವಾಗಿ ಸಹಜ ಸಾವಿನ ಪ್ರಮಾಣವೂ ದುಪ್ಪಟ್ಟಾಗಲಿದೆ. ಅಲ್ಲದೇ ಮಾನವ ಇತಿಹಾಸದಲ್ಲಿ ಹಿಂದೆಂದೂ ಆಗಿರದರಷ್ಟುಭೀಕರತೆಗೆ ಇದು ಸಾಕ್ಷಿಯಾಗಲಿದೆ ಎಂದು ಕೊಲರಾಡೋ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಬ್ರಿಯಾನ್‌ ಟೂನ್‌ ಹೇಳಿದ್ದಾರೆ.

ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ ವಿಷಯವಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ನಿರ್ಮಾಣವಾಗಿರುವ ಉದ್ವಿಗ್ನ ಪರಿಸ್ಥಿತಿ ಹಾಗೂ ಇದೇ ರೀತಿಯ ಪರಿಸ್ಥಿತಿ ಮುಂದುವರಿದರೆ ಭಾರತ ಮತ್ತು ಪಾಕಿಸ್ತಾನದ ಮಧ್ಯೆ 2025ರಲ್ಲಿ ಯುದ್ಧ ನಡೆದರೂ ಅಚ್ಚರಿಯಿಲ್ಲ ಎಂದು ವರದಿ ತಿಳಿಸಿದೆ.

ಹವಾಮಾನ ದುರಂತ:

ಅಣ್ವಸ್ತ್ರ ಶಸ್ತ್ರಾಸ್ತ್ರಗಳ ಸ್ಫೋಟದಿಂದ 1.6 ಕೋಟಿಯಿಂದ 3.6 ಕೋಟಿ ಟನ್‌ಗಳಷ್ಟುಚಿಕ್ಕ ಕಪ್ಪು ಇಂಗಾಲದ ಕಣಗಳು (ಹಾರುಬೂದಿ) ವಾತಾವರಣಕ್ಕೆ ಬಿಡುಗಡೆಯಾಗುತ್ತವೆ. ಇದು ವಾಯು ಮಂಡಲದ ಮೇಲ್ಪದರವನ್ನು ಸೇರಿಕೊಳ್ಳುತ್ತದೆ ಮತ್ತು ಒಂದು ವಾರದ ಅಂತರದಲ್ಲೇ ಇಡೀ ವಿಶ್ವವನ್ನು ವ್ಯಾಪಿಸಿಕೊಳ್ಳುತ್ತದೆ. ಕಾರ್ಬನ್‌ ಪದರ ಸೂರ್ಯನ ವಿಕಿರಣಗಳನ್ನು ಹೀರಿಕೊಂಡು ಗಾಳಿಯನ್ನು ಬಿಸಿ ಮಾಡುತ್ತದೆ ಮತ್ತು ಹೊಗೆಯ ತ್ವರಿತ ಏರಿಕೆಗೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಭೂಮಿಯನ್ನು ತಲುಪುವ ಸೂರ್ಯನ ಕಿರಣ ಶೇ.20ರಿಂದ ಶೇ.35ರಷ್ಟುಕುಂಠಿತಗೊಳ್ಳುತ್ತದೆ. ಅಲ್ಲದೇ ಭೂಮಿಯ ಮೇಲ್ಮೈ ತಾಪಮಾನವನ್ನು 2 ರಿಂದ 5 ಡಿಗ್ರಿ ಸೆಲ್ಸಿಯಸ್‌ ಇಳಿಸುತ್ತದೆ.

ಇವಿಷ್ಟೇ ಅಲ್ಲ ಸಸ್ಯಗಳ ಬೆಳವಣಿಗೆ ಜಾಗತಿಕವಾಗಿ ಶೇ.15ರಿಂದ 30ರಷ್ಟುಕುಂಠಿತಗೊಳ್ಳುತ್ತದೆ. ಅಲ್ಲದೇ ಸಮುದ್ರದ ಉತ್ಪಾದಕತೆಯ ಪ್ರಮಾಣ ಶೇ.5ರಿಂದ ಶೇ.15ರಷ್ಟುಇಳಿಕೆಯಾಗಲಿದೆ. ಇವೆಲ್ಲಾ ಅನಾಹುತಗಳಿಂದ ಜಗತ್ತು ಚೇತರಿಸಿಕೊಳ್ಳಲು ಕನಿಷ್ಠ 10 ವರ್ಷಗಳಾದರೂ ಬೇಕಾದೀತು ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ವಿಶ್ವದ 9 ದೇಶಗಳು ಅಣ್ವಸ್ತ್ರ ಶಸ್ತ್ರಾಸ್ತ್ರಗಳನ್ನು ಹೊಂದಿವೆ. ಆದರೆ, ಪಾಕಿಸ್ತಾನ ಮತ್ತು ಭಾರತ ಮಾತ್ರ ತ್ವರಿತವಾಗಿ ತಮ್ಮ ಶಸ್ತ್ರಾಸ್ತ್ರಗಳ ಪ್ರಮಾಣವನ್ನು ಏರಿಸುತ್ತಲೇ ಇವೆ. 2025ರ ವೇಳೆಗೆ ಅಣ್ವಸ್ತ್ರ ಶಸ್ತ್ರಾಸ್ತ್ರಗಳ ವ್ಯಾಪ್ತಿ, 1945ರಲ್ಲಿ ಅಮೆರಿಕ ಜಪಾನಿನ ಹಿರೋಶಿಮಾ ಮತ್ತು ನಾಗಾಸಾಕಿಯ ಮೇಲೆ ಬಾಂಬ್‌ ಹಾಕಿದ 15 ಕಿ.ಮೀ.ಯಿಂದ ಹಿಡಿದು ನೂರಾರು ಕಿ.ಮೀ.ವರೆಗೂ ವ್ಯಾಪಿಸಿಕೊಳ್ಳಬಹುದು. ಒಂದು ವೇಳೆ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಅಣ್ವಸ್ತ್ರ ಯುದ್ಧವೇನಾದರೂ ಸಂಭವಿಸಿದರೆ 5ರಿಂದ 12.5 ಕೋಟಿ ಜನ ಸಾವನಪ್ಪಲಿದ್ದಾರೆ. ಅಲ್ಲದೇ ವಿಶ್ವದೆಲ್ಲೆಡೆ ಜನ ಸಮುದಾಯ ಹಸಿವಿನಿಂದ ಸಾವನ್ನಪ್ಪಲಿದ್ದಾರೆ. ಆಕಸ್ಮಿಕವಾಗಿ ಅಣ್ವಸ್ತ್ರ ಶಸ್ತ್ರಾಸ್ತ್ರಗಳನ್ನು ಬಳಕೆಯನ್ನು ತಡೆಗಟ್ಟುವುದು ಮಾತ್ರವೇ ಅನಾಹುತವನ್ನು ತಡೆಯಲು ಇರುವ ಏಕೈಕ ಮಾರ್ಗ ಎಂದು ಸಂಶೋಧಕರಲ್ಲಿ ಒಬ್ಬರಾದ ಪ್ರೊಫೆಸರ್‌ ರೋಬಾಕ್‌ ಹೇಳಿದ್ದಾರೆ.

ಏನಿದೆ ಅದರಲ್ಲಿ?

1. ಭಾರತ ಹಾಗೂ ಪಾಕಿಸ್ತಾನ ದೇಶಗಳು ಒಟ್ಟಾರೆಯಾಗಿ 150 ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದಿವೆ

2. 2025ರ ವೇಳೆಗೆ ಉಭಯ ದೇಶಗಳಲ್ಲಿ ಅಣ್ವಸ್ತ್ರ ಸಿಡಿತಲೆ ಸಂಗ್ರಹ 200ರ ಗಡಿ ದಾಟುವ ನಿರೀಕ್ಷೆ

3. ಯುದ್ಧ ನಡೆದರೆ ಕೇವಲ 1 ವಾರದಲ್ಲಿ 5 ಕೋಟಿಯಿಂದ 12.5 ಕೋಟಿ ಜೀವ ಹಾನಿ ಸಾಧ್ಯತೆ

4. ಅಲ್ಲದೆ, ಅಣ್ವಸ್ತ್ರದಿಂದಾಗಿ 3.6 ಕೋಟಿ ಟನ್‌ಗಳಷ್ಟುಹಾರುಬೂದಿ ವಾತಾವರಣಕ್ಕೆ ಬಿಡುಗಡೆ

5. ಇದರಿಂದಾಗಿ ಭೂಮಿ ತಲುಪುವ ಸೂರ್ಯನ ಕಿರಣ ಪ್ರಮಾಣ ಶೇ.35ರಷ್ಟುಕುಂಠಿತ ಸಂಭವ

6. ಇದು ಭೂಮಿಯ ಮೇಲ್ಮೈ ತಾಪಮಾನವನ್ನು 2 ರಿಂದ 5 ಡಿಗ್ರಿ ಸೆಲ್ಸಿಯಸ್‌ ಇಳಿಸುವ ಅಪಾಯ

7. ಜಾಗತಿಕವಾಗಿ ಸಸ್ಯಗಳ ಬೆಳವಣಿಗೆ ಶೇ.30ರಷ್ಟು, ಸಮುದ್ರದ ಉತ್ಪಾದಕತೆ ಶೇ.15ರಷ್ಟುಇಳಿಕೆ

8. ಇವೆಲ್ಲಾ ಅನಾಹುತಗಳಿಂದ ಜಗತ್ತು ಚೇತರಿಸಿಕೊಳ್ಳಲು ಕನಿಷ್ಠ 10 ವರ್ಷಗಳಾದರೂ ಬೇಕಾದೀತು