ಒಂದೊಮ್ಮೆ ನನ್ನನ್ನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಿಸಿದರೆ 18 ವರ್ಷ ಮೇಲ್ಪಟ್ಟವರಿಗೆ ನಾನು ಅಧಿಕಾರದಲ್ಲಿರುವ ಐದೂ ವರ್ಷ ಬಿಟ್ಟಿಯಾಗಿ ಮದ್ಯ ನೀಡುತ್ತೇನೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಸ್ಪರ್ಧಿಸುತ್ತಿರುವ ವೈ.ಎನ್‌.ಸುರೇಶ್‌ ಎಂಬುವರು ಆಮಿಷ ಒಡ್ಡಿದ್ದಾರೆ.

ಚಿಕ್ಕಬಳ್ಳಾಪುರ: ಒಂದೊಮ್ಮೆ ನನ್ನನ್ನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಿಸಿದರೆ 18 ವರ್ಷ ಮೇಲ್ಪಟ್ಟವರಿಗೆ ನಾನು ಅಧಿಕಾರದಲ್ಲಿರುವ ಐದೂ ವರ್ಷ ಬಿಟ್ಟಿಯಾಗಿ ಮದ್ಯ ನೀಡುತ್ತೇನೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಸ್ಪರ್ಧಿಸುತ್ತಿರುವ ವೈ.ಎನ್‌.ಸುರೇಶ್‌ ಎಂಬುವರು ಆಮಿಷ ಒಡ್ಡಿದ್ದಾರೆ. ಈ ಕುರಿತು ಪ್ರಣಾಳಿಕೆ ಬಿಡುಗಡೆ ಮಾಡಿರುವ ಸುರೇಶ್‌ ಅನೇಕ ಉಚಿತ ಯೋಜನೆಗಳನ್ನು ಪ್ರಕಟಿಸಿದ್ದಾರೆ. 

ಪ್ರಣಾಳಿಕೆಯಲ್ಲಿ ಏನೇನಿದೆ?

ನಾನು ಯಾಕೆ ಎಂಎಲ್ಎ ಆಗಬಾರದು... ಎಂಬ ಘೋಷವಾಕ್ಯದೊಂದಿಗೆ ಆರಂಭವಾಗುವ ಪ್ರಣಾಳಿಕೆಯಲ್ಲಿ ತಾನು ಗೆದ್ದರೆ 18 ವರ್ಷ ಮೇಲ್ಪಟ್ಟವರಿಗೆ ತಿಂಗಳ ಲೆಕ್ಕದಲ್ಲಿ ಉಚಿತವಾಗಿ ಮದ್ಯ ವಿತರಿಸಲಾಗುವುದು. ಮಹಿಳೆಯರಿಗೆ ಮಸಾಲೆ ಪದಾರ್ಥದಿಂದ ಉಪ್ಪಿನಕಾಯಿವರೆಗೂ ಉಚಿತವಾಗಿ ವಿತರಿಸುವ ಭರವಸೆ ನೀಡಲಾಗಿದೆ.

ಕ್ಷೇತ್ರವನ್ನು ಹಸಿವು ಮುಕ್ತ ಮಾಡಲು ಪ್ರತಿನಿತ್ಯ ಕ್ಷೇತ್ರದ ಎಲ್ಲ ಜನತೆಗೆ 3 ಬಾರಿ ಊಟ, 2 ಬಾರಿ ಕಾಫಿ, ಟೀ ನೀಡಲಾಗುವುದು. ಜೊತೆಗೆ ವಾರಕ್ಕೆ ಎರಡು ಬಾರಿ ಪ್ರತಿಯೊಬ್ಬರಿಗೆ ತಲಾ 300 ಗ್ರಾಂ ಮಟನ್‌ ಮತ್ತು ಚಿಕನ್‌ ಉಚಿತವಾಗಿ ನೀಡಲಾಗುವುದು. ಹಬ್ಬಗಳ ಸಂದರ್ಭದಲ್ಲಿ ಹೊಸ ಬಟ್ಟೆ, ಉಚಿತ ಬಸ್‌ ಸೇವೆ, ಆರೋಗ್ಯ, ಶಿಕ್ಷಣ ಎಲ್ಲವೂ ಉಚಿತ.

ಮದುವೆ ಆಗುವವರಿಗೆ ಮಾಂಗಲ್ಯ, ಬಟ್ಟೆ, ವಿಶೇಷವಾಗಿ ಮೊಬೈಲ್‌ ಡೇಟಾ ಸೇರಿದಂತೆ ಕರೆನ್ಸಿ ಕೂಡ ಉಚಿತ. ಸಾಲದೆಂಬಂತೆ ಟಿವಿ ಕೇಬಲ್‌ ಉಚಿತವಾಗಿ ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ. ಶಾಶ್ವತ ನೀರಾವರಿ ಯೋಜನೆ ಕೇವಲ 3 ವರ್ಷಗಳಲ್ಲಿ ಪೂರ್ಣಗೊಳಿಸುವ ಭರವಸೆಯನ್ನು ಸುರೇಶ್‌ ನೀಡಿದ್ದಾರೆ.