ಬೆಂಗಳೂರು[ಜು.16]: ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ನಿರ್ಣಯ ಮಾಡಿರುವಾಗ ಮುಖ್ಯಮಂತ್ರಿಗಳು ಯಾಕೆ ಕುರ್ಚಿಗೆ ಅಂಟಿಕೊಂಡು ಕುಳಿತಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್‌.ಈಶ್ವರಪ್ಪ ಲೇವಡಿ ಮಾಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್‌ ಅವರಲ್ಲಿ ವಿಶ್ವಾಸ ಮತಯಾಚನೆಗೆ ಮುಖ್ಯಮಂತ್ರಿಗಳು ಅನುಮತಿ ಕೇಳಬಾರದಿತ್ತು ಎಂದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು, ನಮಗೆ ಬಹುಮತವಿಲ್ಲದ ಕಾರಣ ವಿರೋಧ ಪಕ್ಷದಲ್ಲಿ ಕುಳಿತಿಕೊಳ್ಳೋಣ ಎಂದೂ ತೀರ್ಮಾನ ಮಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಯಾಕೆ ಕುರ್ಚಿಗೆ ಅಂಟಿಕೊಂಡು ಕುಳಿತಿದ್ದಾರೆ ಎಂದು ಕಿಚಾಯಿಸಿದರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಧಿಕಾರದಲ್ಲಿ ಮುಂದುವರೆಯಲು ಯಾವುದೇ ನೈತಿಕತೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಿಗೆ ಇಲ್ಲ. ಸರ್ಕಾರದ ನಡೆ ವಿರುದ್ಧ ಅಸಮಾಧಾನಗೊಂಡು ರಾಜೀನಾಮೆ ನೀಡಿರುವ ಶಾಸಕರು ಸಹ ತಮ್ಮ ನಿಲುವು ಅಚಲ ಎಂದಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ವಿಶ್ವಾಸಮತಯಾಚಿಸುವ ಬದಲು ಗೌರವಯುತವಾಗಿ ರಾಜೀನಾಮೆ ನೀಡಬೇಕಿತ್ತು ಎಂದು ಈಶ್ವರಪ್ಪ ಹೇಳಿದರು.