ಬೆಂಗಳೂರು[ಮೇ.14]: ಮಿತ್ರ ಪಕ್ಷ ಕಾಂಗ್ರೆಸ್‌ ಜೊತೆಗಿನ ದೋಸ್ತಿಯಲ್ಲಿ ಬಿರುಕು ಕಾಣಲಾರಂಭಿಸಿದ ಬೆನ್ನಲ್ಲೇ ಜೆಡಿಎಸ್‌ ವರಿಷ್ಠರು ಮೇ 23ರ ನಂತರ ಪರಿಸ್ಥಿತಿ ಬಿಗಡಾಯಿಸಿದರೆ ಮುಂದೇನು ಮಾಡಬೇಕು ಎಂಬ ಗಂಭೀರ ಚಿಂತನೆಯಲ್ಲಿ ತೊಡಗಿದ್ದಾರೆ.

ಸಾಧ್ಯವಾದಷ್ಟುಈಗ ಕಾಂಗ್ರೆಸ್‌ ಜೊತೆಗೆ ಉದ್ಭವಿಸಿರುವ ಭಿನ್ನಾಭಿಪ್ರಾಯಗಳನ್ನು ಸರಿದೂಗಿಸಿಕೊಂಡು ಮುಂದೆ ನಡೆಯುವುದು ಮೊದಲ ಆದ್ಯತೆ. ಒಂದೊಮ್ಮೆ ಕಾಂಗ್ರೆಸ್‌ ಜೊತೆಗೆ ಮುಂದೆ ಸಾಗುವುದು ತೀರಾ ಕಷ್ಟಎನಿಸಿದಲ್ಲಿ ಒಂದೆರಡು ಪ್ರಮುಖ ಷರತ್ತುಗಳನ್ನು ವಿಧಿಸುವ ಮೂಲಕ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯಾಸಾಧ್ಯತೆಗಳ ಬಗ್ಗೆ ಜೆಡಿಎಸ್‌ ನಾಯಕರು ಚಿಂತನ ಮಂಥನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಹಾಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ಎಸ್‌.ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಬೇರೆ ಯಾರನ್ನಾದರೂ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಮತ್ತು ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡಬೇಕು ಎಂಬ ಷರತ್ತುಗಳನ್ನು ವಿಧಿಸುವ ಹಂತದವರೆಗೂ ಜೆಡಿಎಸ್‌ನ ಆಂತರಿಕ ವಲಯದಲ್ಲಿ ಚರ್ಚೆ ನಡೆದಿದೆ. ಈ ಮಾಹಿತಿ ಇದೀಗ ಬಿಜೆಪಿ ಪಾಳೆಯಕ್ಕೂ ತಲುಪಿದೆ ಎನ್ನಲಾಗಿದೆ. ಇದೇ ಧಾಟಿಯ ಚರ್ಚೆ ಕಳೆದ ವಿಧಾನಸಭಾ ಚುನಾವಣೆಗೆ ಮೊದಲೂ ರಾಜ್ಯ ರಾಜಕಾರಣದಲ್ಲಿ ಪ್ರಸ್ತಾಪವಾಗಿತ್ತು.

ಒಂದಂತೂ ಸ್ಪಷ್ಟ. ಇದೆಲ್ಲವೂ ಈ ತಿಂಗಳ 23ರಂದು ಹೊರಬೀಳಲಿರುವ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಆಧರಿಸಿರಲಿದೆ. ಅಲ್ಲಿನ ಬೆಳವಣಿಗೆಗಳನ್ನು ಗಮನಿಸಿದ ನಂತರವೇ ಜೆಡಿಎಸ್‌ ನಾಯಕರು ಪರ್ಯಾಯ ಮಾರ್ಗದತ್ತ ಗಮನ ಹರಿಸಲಿದ್ದಾರೆ. ಸದ್ಯಕ್ಕೆ ಎಲ್ಲವೂ ಅಸ್ಪಷ್ಟವಾಗಿದೆ. ಹೀಗೆಯೇ ಮಾಡುತ್ತೇವೆ ಎಂಬುದನ್ನು ನಿರ್ದಿಷ್ಟವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಯಾವುದನ್ನೂ ಅಲ್ಲಗಳೆಯಲು ಆಗುವುದಿಲ್ಲ ಎಂದು ಆ ಪಕ್ಷದ ಹಿರಿಯ ನಾಯಕರೊಬ್ಬರು ಮಾರ್ಮಿಕವಾಗಿ ತಿಳಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಅವರನ್ನು ಕೈಬಿಟ್ಟು ಬೇರೊಬ್ಬರನ್ನು ಮುಖ್ಯಮಂತ್ರಿ ಮಾಡುವ ಯೋಚನೆ ಇಲ್ಲ. ಪಕ್ಷದ ಹಿರಿಯ ನಾಯಕರು ಹಾಗೂ ಆ ಹುದ್ದೆಗೆ ಅರ್ಹರು ಎಂಬುದು ಒಂದು ಕಾರಣವಾದರೆ, ಅವರ ಹಿಂದೆ ಇರುವ ಪ್ರಬಲ ವೀರಶೈವ ಲಿಂಗಾಯತ ಸಮುದಾಯದ ಬೆಂಬಲವನ್ನು ಕಳೆದುಕೊಳ್ಳಬೇಕಾದೀತು ಎಂಬ ಆತಂಕವೂ ಬಿಜೆಪಿ ವರಿಷ್ಠರಲ್ಲಿದೆ.

ಆದರೆ, ಶತಾಯಗತಾಯ ಕಾಂಗ್ರೆಸ್‌ ಪಕ್ಷವನ್ನು ದೂರವಿಡಬೇಕು ಎಂಬ ಏಕೈಕ ಉದ್ದೇಶದೊಂದಿಗೆ ಬಿಜೆಪಿ ಹೈಕಮಾಂಡ್‌ ಲಿಂಗಾಯತ ಸಮುದಾಯದ ಬೇರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ನಿರ್ಧಾರ ಕೈಗೊಂಡಲ್ಲಿ ಮಾತ್ರ ಜೆಡಿಎಸ್‌ ಜೊತೆಗೆ ಮೈತ್ರಿ ಸಾಧ್ಯವಾಗಬಹುದು. ಅದಕ್ಕಿನ್ನೂ ಸಾಕಷ್ಟುಸಮಯವಿದೆ. ಮುಖ್ಯವಾಗಿ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ವರಿಷ್ಠರು ಕರ್ನಾಟಕದಲ್ಲಿ ಪರ್ಯಾಯ ಸರ್ಕಾರ ರಚಿಸುವ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿಲ್ಲ. ಕೇಂದ್ರದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸುವತ್ತ ಮಾತ್ರ ಗಮನಹರಿಸಿದ್ದಾರೆ. ಆ ಪ್ರಕ್ರಿಯೆ ಮುಗಿದ ನಂತರ ಕರ್ನಾಟಕ ರಾಜಕಾರಣದ ಬಗ್ಗೆ ತಲೆ ಕೆಡಿಸಿಕೊಳ್ಳಬಹುದು ಎನ್ನಲಾಗಿದೆ.

ಇದೀಗ ಒಂದು ವರ್ಷ ಅಧಿಕಾರ ಅನುಭವಿಸಿರುವ ಜೆಡಿಎಸ್‌ ಪಕ್ಷ ಅಷ್ಟುಸುಲಭವಾಗಿ ಅಧಿಕಾರವನ್ನು ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಒಂದು ವೇಳೆ ಅಧಿಕಾರದಿಂದ ದೂರ ಉಳಿದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಬರುವ ಹೊತ್ತಿಗೆ ಪಕ್ಷದ ಮುಖಂಡರು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿಗೆ ವಲಸೆ ಹೋಗಬಹುದು ಎಂಬ ಭೀತಿ ತೀವ್ರವಾಗಿದೆ. ಹೀಗಾಗಿ, ಅಧಿಕಾರ ಮುಂದುವರೆದಲ್ಲಿ ಪಕ್ಷದ ಅಸ್ತಿತ್ವವೂ ಗಟ್ಟಿಯಾಗಿ ಉಳಿಯುತ್ತದೆ ಎಂಬುದು ಪಕ್ಷದ ವರಿಷ್ಠ ನಾಯಕ ಎಚ್‌.ಡಿ.ದೇವೇಗೌಡರ ಬಲವಾದ ನಂಬಿಕೆ.