ಖಾಸಗಿ ವೈದ್ಯರ ಮುಷ್ಕರದಿಂದಾಗಿ ಸಕಾಲದಲ್ಲಿ ಚಿಕಿತ್ಸೆ ದೊರೆಯದೇ ರಾಜ್ಯಾದ್ಯಂತ 20 ಕ್ಕೂ ಹೆಚ್ಚು ರೋಗಿಗಳು ಪ್ರಾಣಬಿಟ್ಟಿದ್ದಾರೆ. ಇತ್ತ ಉಡುಪಿ ಜಿಲ್ಲೆಯಲ್ಲೋರ್ವ ಇಬ್ರಾಹಿಂ ಎಂಬ ಆಪತ್ಬಾಂಧವ ಉಚಿತ ಆ್ಯಂಬುಲೆನ್ಸ್ ಸೇವೆ ನೀಡುವ ಮೂಲಕ ಕಳೆದ ಮೂರು ದಿನಗಳಲ್ಲಿ ಜಿಲ್ಲೆಯಲ್ಲಿ ಅನಾರೋಗ್ಯಕ್ಕೆ ತುತ್ತಾದ ಹತ್ತಾರು ಮಂದಿಗೆ ನೆರವಾಗಿದ್ದಾರೆ.
ಉಡುಪಿ(ನ.17): ಖಾಸಗಿ ವೈದ್ಯರ ಮುಷ್ಕರದಿಂದಾಗಿ ಸಕಾಲದಲ್ಲಿ ಚಿಕಿತ್ಸೆ ದೊರೆಯದೇ ರಾಜ್ಯಾದ್ಯಂತ 20 ಕ್ಕೂ ಹೆಚ್ಚು ರೋಗಿಗಳು ಪ್ರಾಣಬಿಟ್ಟಿದ್ದಾರೆ. ಇತ್ತ ಉಡುಪಿ ಜಿಲ್ಲೆಯಲ್ಲೋರ್ವ ಇಬ್ರಾಹಿಂ ಎಂಬ ಆಪತ್ಬಾಂಧವ ಉಚಿತ ಆ್ಯಂಬುಲೆನ್ಸ್ ಸೇವೆ ನೀಡುವ ಮೂಲಕ ಕಳೆದ ಮೂರು ದಿನಗಳಲ್ಲಿ ಜಿಲ್ಲೆಯಲ್ಲಿ ಅನಾರೋಗ್ಯಕ್ಕೆ ತುತ್ತಾದ ಹತ್ತಾರು ಮಂದಿಗೆ ನೆರವಾಗಿದ್ದಾರೆ.
ಕುಂದಾಪುರ ತಾಲೂಕಿನಲ್ಲಿ ತುರ್ತು ಉನ್ನತ ಚಿಕಿತ್ಸೆ ಲಭ್ಯ ಇಲ್ಲದೆ ತೊಂದರೆಗೊಳಗಾದ 15 ಮಂದಿ ರೋಗಿಗಳನ್ನು ಗಂಗೊಳ್ಳಿಯ ಇಬ್ರಾಹಿಂ ಉಡುಪಿ ಜಿಲ್ಲಾಸ್ಪತ್ರೆ ಮತ್ತು ಮಣಿಪಾಲದ ಕೆ.ಎಂ.ಸಿ.ಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಕುಂದಾಪುರ ತಾಲೂಕಿನಲ್ಲಿ ಜಾತಿ ಧರ್ಮ, ಹಗಲು ರಾತ್ರಿ ಬೇಧ ಇಲ್ಲದೆ ಅಪತ್ಬಾಂಧವ ಹೆಸರಿನಲ್ಲಿ ದಿನದ 24 ಗಂಟೆ ಕಾಲವೂ ಉಚಿತವಾಗಿ ಆ್ಯಂಬುಲೆನ್ಸ್ ಸೇವೆ ನೀಡಲು ಸಜ್ಜಾದ ಇಬ್ರಾಹಿಂ ವೈದ್ಯರ ಮುಷ್ಕರ ಆರಂಭವಾದ ಮಂಗಳವಾರ 7, ಬುಧವಾರ 5 ಮತ್ತು ಗುರುವಾರ 2 ರೋಗಿಗಳನ್ನು ಕುಂದಾಪುರದಿಂದ ಸುಮಾರು 70 ಕಿ.ಮೀ. ದೂರದಲ್ಲಿರುವ ಉಡುಪಿ ಜಿಲ್ಲಾಸತ್ರೆಗೆ ಸೂಕ್ತ ಸಮಯಕ್ಕೆ ಕರೆದುಕೊಂಡಿ ಬಂದು ದಾಖಲಿಸಿದ್ದಾರೆ.

ಅವರಲ್ಲಿ ಇಬ್ಬರು ವಿಷದ ಹಾವು ಕಡಿತದಿಂದ ವಿಷಮ ಸ್ಥಿತಿಯಲ್ಲಿದ್ದ ಇಬ್ಬರನ್ನು ಗಂಟೆಯೊಳಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ಕರೆತಂದು ಜೀವ ಉಳಿಸಿದ್ದಾರೆ. ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ಹಾವು ಕಡಿತಕ್ಕೆ ಔಷಧ ದಾಸ್ತಾನು ಇಲ್ಲ. ಖಾಸಗಿ ಆಸ್ಪತ್ರೆಯಲ್ಲಿ ದಾಸ್ತಾನಿದ್ದರೂ ವೈದ್ಯರ ಮುಷ್ಕರದಿಂದ ಅದೂ ಲಭ್ಯವಿಲ್ಲದಂತಾಗಿತ್ತು. ಆದರೇ ಇಬ್ರಾಹಿಂ ಅವರ ಮಾನವೀಯತೆಯಿಂದ ಇಬ್ಬರೂ ರೋಗಿಗಳು ಕೂಡ ಬದುಕುಳಿದಿದ್ದಾರೆ.
ಅದೇ ರೀತಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಾಯಾಳುವಿಗೆ, ಇನ್ನೋರ್ವ ಹೃದ್ರೋಗಿ ಮತ್ತು ಒಬ್ಬ ಪಾರ್ಶ್ವವಾಯು ಪೀಡಿತ ರೋಗಿಯನ್ನೂ ಕೂಡ ಅವರು ಆಸ್ಪತ್ರೆಗೆ ದಾಖಲಿಸುವಲ್ಲಿ ಆಪತ್ಬಾಂಧವ ಇಬ್ರಾಹಿಂ ನೆರವಾಗಿದ್ದಾರೆ. 15 ಮಂದಿಯಲ್ಲಿ 12 ಮಂದಿಯನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಮತ್ತು 3 ಮಂದಿಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅವರೆಲ್ಲರೂ ಸಕಾಲದ ಚಿಕಿತ್ಸೆಯಿಂದ ಲಭ್ಯವಾದ ಹಿನ್ನೆಲೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಕುಂದಾಪುರ ಭಾಗದಲ್ಲಿ ರಸ್ತೆ ಅಪಘಾತಗಳಾದಾಗ ಮೊದಲು ಸ್ಥಳಕ್ಕೆ ತಲಪುವವರೇ ಇಬ್ರಾಹಿಂ.
3 ವರ್ಷಗಳಿಂದ 400 ಅಪಘಾತಗಳಲ್ಲಿ ಗಾಯಗೊಂಡವರಿಗೆ ನೆರವು: ಕಳೆದ 3 ವರ್ಷಗಳಿಂದ ಸುಮಾರು 400 ಅಪಘಾತಗಳಾದ ಸ್ಥಳಕ್ಕೆ ಧಾವಿಸಿ ಗಾಯಾಳುಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅತ್ಯಂತ ನಾಜೂಕಿನ ಪರಿಸ್ಥಿತಿಯಲ್ಲಿದ್ದ ಅನೇಕರ ಪ್ರಾಣ ಉಳಿಸುವಲ್ಲಿ ಇಬ್ರಾಹಿಂ ನೆರವು ನೀಡಿದ್ದಾರೆ.
