ಶ್ರೀನಗರ(ಜ.09): 2010ರ ಯುಪಿಎಸ್ ಸಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಕಾಶ್ಮೀರದ ಐಎಎಸ್ ಅಧಿಕಾರಿ ಶಾ ಫೈಜಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕಣಿವೆ ರಾಜ್ಯದ ಕುರಿತು ಕೇಂದ್ರ ಸರ್ಕಾರದ ಧೋರಣೆ ಮತ್ತು ಸರ್ಕಾರಿ ಪೋಷಿತ ಕಗ್ಗೊಲೆಗಳ ವಿರುದ್ಧ ಪ್ರತಿಭಟನೆ ರೂಪದಲ್ಲಿ ರಾಜೀನಾಮೆ ನೀಡುತ್ತಿರುವುದಾಗಿ ಶಾ ಫೈಜಲ್ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಸ್ತೃತವಾಗಿ ಬರೆದಿರುವ ಶಾ ಫೈಜಲ್, ಕಣಿವೆ ರಾಜ್ಯದ ಕುರಿತಂತೆ ಕೇಂದ್ರ ಸರ್ಕಾರದ ಧೋರಣೆಯಿಂದ ರೋಸಿ ಹೋಗಿರುವುದಾಗಿ ತಿಳಿಸಿದ್ದಾರೆ.

ಅಲ್ಲದೇ ರಾಜ್ಯದಲ್ಲಿ ನಿತ್ಯವೂ ನಾಗರಿಕರ ಕಗ್ಗೊಲೆ ನಡೆಯುತ್ತಿದ್ದು, ಇದಕ್ಕೆ ಕೇಂದ್ರ ಸರ್ಕಾರದ ವಿಫಲ ನೀತಿಗಳೇ ಕಾರಣ ಎಂದು ಫೈಜಲ್ ದೂರಿದ್ದಾರೆ. ದೇಶದ 20 ಕೋಟಿ ಮುಸ್ಲಿಮರನ್ನು ಹಿಂದುತ್ವ ಶಕ್ತಿಗಳ ಕೈಯಲ್ಲಿ ಅಡವಿಟ್ಟಿರುವ ಕೇಂದ್ರ ಸರ್ಕಾರ ಮುಸ್ಲಿಮರೊಂದಿಗೆ ತಾರತಮ್ಯದ ನೀತಿ ಅನುಸರಿಸುತ್ತಿದೆ ಎಂದು ಫೈಜಲ್ ಗಂಭೀರ ಆರೋಪ ಮಾಡಿದ್ದಾರೆ.

ಇನ್ನು ಜಿಲ್ಲಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾ ಫೈಜಲ್, ಓಮರ್ ಅಬ್ದುಲ್ಲಾ ನೇತೃತ್ವದ ನ್ಯಾಶನಲ್ ಕಾನ್ಫರೆನ್ಸ್ ಪಕ್ಷ ಸೇರುವ ಸಾಧ್ಯತೆ ಇದ್ದು, ರಾಜಕೀಯದ ಮೂಲಕ ರಾಜ್ಯದ ಮತ್ತು ದೇಶದ ಜನರ ಸೇವೆ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ರಾಜ್ಯದ ಬಡ ಮಕ್ಕಳಿಗೆ ಯುಪಿಎಸ್ ಸಿ ಪರೀಕ್ಷೆಗೆ ತರಬೇತಿ ನೀಡುವ ತಮ್ಮ ಈ ಹಿಂದಿನ ಕಾಯಕವನ್ನು ಮುಂದುವರೆಸುವುದಾಗಿ ಶಾ ಫೈಜಲ್ ತಿಳಿಸಿದ್ದಾರೆ.