ಸ್ವಂತ ದುಡ್ಡಲ್ಲಿ ಅಂಗನವಾಡಿ ಅಭಿವೃದ್ಧಿಗೊಳಿಸಿದ ಐಎಎಸ್ ಅಧಿಕಾರಿಣಿ

First Published 1, Feb 2018, 4:52 PM IST
IAS Officer Garima Singh Developed Anganavadi
Highlights

ಅಧಿಕಾರದ ಸ್ಥಾನದಲ್ಲಿರುವವರು ಸಮಾಜದ ಬಗ್ಗೆ ಕಾಳಜಿ ಹೊಂದಿದ್ದರೆ ಗುಣಾತ್ಮಕ ಫಲಿತಾಂಶ ಸಿಗುತ್ತದೆ ಎನ್ನುವುದು ಜಾರ್ಖಂಡ್‌'ನ ಹಜರೀಭಾಗ್‌ಗೆ ಭೇಟಿ ನೀಡಿದರೆ ಗೊತ್ತಾಗುತ್ತದೆ.

ಬೆಂಗಳೂರು (ಫೆ.01): ಅಧಿಕಾರದ ಸ್ಥಾನದಲ್ಲಿರುವವರು ಸಮಾಜದ ಬಗ್ಗೆ ಕಾಳಜಿ ಹೊಂದಿದ್ದರೆ ಗುಣಾತ್ಮಕ ಫಲಿತಾಂಶ ಸಿಗುತ್ತದೆ ಎನ್ನುವುದು ಜಾರ್ಖಂಡ್‌'ನ ಹಜರೀಭಾಗ್‌ಗೆ ಭೇಟಿ ನೀಡಿದರೆ ಗೊತ್ತಾಗುತ್ತದೆ.

ಅಲ್ಲಿನ ಐಎಎಸ್ ಆಫೀಸರ್ ಗರಿಮಾ ಸಿಂಗ್ ಅಧಿಕಾರದ ಆಚೆಗೆ ಅಂಗನವಾಡಿಗಳ ಸಬಲೀಕರಣ ಮಾಡುವ ಪ್ರಯತ್ನ ಮಾಡಿ ಹೊಸ ಬದಲಾವಣೆಯ ಪರ್ವಕ್ಕೆ ಮುನ್ನುಡಿ ಬರೆದಿದ್ದಾರೆ. 2015 ನೇ ಬ್ಯಾಚ್‌'ನಲ್ಲಿ ಐಎಎಸ್ ಪರೀಕ್ಷೆ ಪಾಸ್ ಮಾಡಿದ ಗರಿಮಾ ಅವರು ಪ್ರೋಬೆಷನರಿ ಅವಧಿಯಲ್ಲಿ ಹಜರೀಭಾಗ್‌'ಗೆ ಬಂದರು. ಇಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ವೇಳೆ ಅಂಗನವಾಡಿ ಮಕ್ಕಳಿಗೆ ಸರಿಯಾದ ಸವಲತ್ತುಗಳು ಸಿಕ್ಕದೇ ಮೊದಲ ಕಲಿಕಾ ಹಂತದಲ್ಲೇ ತೊಂದರೆ ಎದುರಿಸುತ್ತಿರುವುದನ್ನು ಕಂಡು ಏನಾದರೂ ಮಾಡಬೇಕು ಎಂದು  ಕಾರ್ಯರಂಗಕ್ಕೆ ಇಳಿಯುತ್ತಾರೆ.

ಸರಕಾರದ ವತಿಯಿಂದ ಅಂಗನವಾಡಿಗಳ ಅಭಿವೃದ್ಧಿಪಡಿಸುವುದು ಕಷ್ಟ ಎಂದು ತಿಳಿದಾಗ ತಾವೇ ತಮ್ಮ ಸ್ವಂತದ ಐವತ್ತು ಸಾವಿರ ರುಪಾಯಿ ಹಣವನ್ನು ತೊಡಗಿಸಿ ಹಜರೀಬಾಗ್‌'ನ ಅಂಗನವಾಡಿಯನ್ನು ಮೇಲ್ದರ್ಜೆಗೇರಿಸುತ್ತಾರೆ. ನಂತರ ಉದ್ಯಮಿಗಳು, ಸೇವಾ ಸಂಸ್ಥೆಗಳು ಇದರಿಂದ ಪ್ರಭಾವಿತರಾಗಿ ಒಂದೊಂದು ಅಂಗನವಾಡಿಗಳನ್ನು ದತ್ತು ಪಡೆದುಕೊಂಡು ಅಭಿವೃದ್ಧಿಪಡಿಸುವ  ಕಾರ್ಯಕ್ಕೆ ಮುಂದಾಗಿವೆ. ಇದರಿಂದ ಜಾರ್ಖಂಡ್‌ನ ಹೆಚ್ಚಿನ ಅಂಗನವಾಡಿ ಮಕ್ಕಳಿಗೆ ಅನುಕೂಲವಾದಂತಾಗಿದೆ.

‘ನಾನು ಸರಕಾರಿ ಅಧಿಕಾರಿಯಾಗಿ ಒಂದು ಅಂಗನವಾಡಿ ಕೇಂದ್ರಕ್ಕೆ ಸೂಕ್ತ ಸೌಲಭ್ಯಗಳನ್ನು ಒದಗಿಸಬಹುದಾಗಿತ್ತು. ಹಾಗೆ ಮಾಡಿದ್ದರೆ ಹೆಚ್ಚಿನ ಪ್ರಯೋಜನವಿರುತ್ತಿರಲಿಲ್ಲ. ಅದಕ್ಕೆ ಬದಲಾಗಿ  ನನ್ನದೇ ಸ್ವಂತ ಹಣದಿಂದ ಮಕ್ಕಳ ಮೊಲದ ಕಲಿಕಾ ಸ್ಥಳದಲ್ಲಿ ಒಂದಷ್ಟು ಚೈತನ್ಯ ಇರುವಂತೆ ಮಾಡಿದೆ. ಇದರಿಂದ ಇನ್ನೊಂದಷ್ಟು ಮಂದಿ ಪ್ರಭಾವಿತರಾಗಿ ಅವರೂ ಕೂಡ ಈ ರೀತಿಯ ಸಮಾಜದ  ಬದಲಾವಣೆಗೆ ಮುಂದಾದರು. ಇದೇ ನನ್ನ ಸೇವೆಗೆ ಸಿಕ್ಕ ಅತಿ ದೊಡ್ಡ ಫಲ’ ಎಂದು ಹೇಳಿಕೊಳ್ಳುವ ಗರಿಮಾ ಸಿಂಗ್ ಮಾಡಿದ ಕಾರ್ಯ ಅಧಿಕಾರಿ ವರ್ಗಕ್ಕೆಲ್ಲಾ ದೊಡ್ಡ ಮಾದರಿ.

 

loader