ಇಸ್ಲಾಮಾಬಾದ್ (ಅ.07): ಉಗ್ರ ಸಂಘಟನೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಪಾಕಿಸ್ತಾನ ಪ್ರಧಾನಮಂತ್ರಿ ನವಾಝ್ ಶರೀಫ್ ಅಧಿಕಾರಿಗಳಿಗೆ ಸೂಚಿಸಿರುವ ಬೆನ್ನಲ್ಲೇ, ಪಾಕಿಸ್ತಾನದ ಸಾಮಾಜಿಕ ಜಾಲತಾಣಗಳಲ್ಲಿ ನಿನ್ನೆ ರಾತ್ರಿ #IamHafizSaeed ಹ್ಯಾಶ್’ಟ್ಯಾಗ್ ಮೊದಲನೇ ಸ್ಥಾನದಲ್ಲಿ ಟ್ರೆಂಡ್ ಆಗಿದೆ.

ಪಾಕಿಸ್ತಾನದಲ್ಲಿ ಹಫೀಝ್ ಸಯೀದ್ ನಡೆಸುತ್ತಿರುವ ಸಮಾಜಸೇವಾ  ಕೆಲಸಗಳನ್ನು ಹಾಡಿ ಹೊಗಳಿರುವ ಟ್ವೀಟರಟ್ಟಿಗಳು ಪ್ರಶಂಸೆಗಳ ಸುರಿಮಳೆಗೈದಿದ್ದಾರೆ.

ಆತ್ಮಹತ್ಯಾ ದಾಳಿಯನ್ನು ನಿಷಿದ್ಧವೆಂದು ಸಾರಿರುವ, ಅಲ್ಪಸಂಖ್ಯಾತರನ್ನು ರಕ್ಷಣೆಗೆ ಪಣ ತೊಟ್ಟಿರುವ #IamHafizSaeed ಎಂದು ಒಬ್ಬ ಟ್ವೀಟ್ ಮಾಡಿದ್ದರೆ, ಇನ್ನೊಬ್ಬ ‘#HafizSaeed ದಾನಧರ್ಮದ ಹೆಸರು, ಭಯೋತ್ಪಾದನೆಯದಲ್ಲ’ ಎಂದು ಹೇಳಿದ್ದಾನೆ.

ತರ್ಪಾಕರ್’ನಲ್ಲಿ ಹಿಂದೂಗಳಿಗೆ ಕುಡಿಯುವ ನೀರಿಗಾಗಿ ಬಾವಿಗಳನ್ನು ತೊಡಿಸಿದ #IamHafizSaeed, ಎಂದು ಇನ್ನೊಂದು ಟ್ವೀಟ್ ಹೇಳುತ್ತದೆ.

ಇನ್ನೊಬ್ಬ ಬೆಂಬಲಿಗನ ಪ್ರಕಾರ, ಹಫೀಝ ಸಯೀದ್ ಹಾಗೂ ಪಾಕಿಸ್ತಾನ ನಸೇನೆ ಒಂದೇ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿವೆ. ಹಫೀಝ ಸಯೀದ್ ಸಮವಸ್ತ್ರ ಧರಿಸದೇ ಕೆಲಸ ಮಾಡುತ್ತಾರೆ ಅಷ್ಟೇ, ಎಂದಿದ್ದಾನೆ.

ಭಾರತದಲ್ಲಿ #IamModi ಟ್ರೆಂಡ್ ಆಗಬಹುದಾದರೆ ಪಾಕಿಸ್ತಾನದಲ್ಲಿ #IamHafizSaeed ಯಾಕಾಗಬಾರದು ಎಂದು ಟ್ವೀಟ್’ಗಳನ್ನು ಮಾಡಲಾಗಿದೆ.

#IamHafizSaeed ಓರ್ವ ಮಹಾನ್ ವ್ಯಕ್ತಿ, ಧೀರ್ಘಾಯುಷ್ಯ ಸಿಗಲಿ ಎಂದೆಲ್ಲಾ ಟ್ವೀಟ್’ಗಳು ಹರಿದಾಡಿವೆ.