ಲಕ್ಷ್ಮೇಶ್ವರ :  ‘ಇದೇ ನನ್ನ ಕೊನೇ ಚುನಾವಣೆ, ಮುಂದಿನ ಚುನಾವಣೆಗೆ ಸ್ಪರ್ಧಿಸಲ್ಲ’ ಎಂದು ಹೇಳುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ‘‘ಮುಖ್ಯಮಂತ್ರಿ ಅಭ್ಯರ್ಥಿ ನಾನೇ’’ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ.

ಪಟ್ಟಣದಲ್ಲಿ ಗುರುವಾರ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಬಿಜೆಪಿ ಮುಖಂಡ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರಿಗೆ ಸವಾಲು ಹಾಕುವ ಭರದಲ್ಲಿ ಸಿದ್ದರಾಮಯ್ಯ ಈ ಘೋಷಣೆ ಮಾಡಿದರು.

ಈಶ್ವರಪ್ಪ ಯಾವುದಾದರೂ ಒಬ್ಬ ಕುರುಬ ನಾಯಕನಿಗೆ ಬಿಜೆಪಿ ಟಿಕೆಟ್‌ ಕೊಡಿಸಿದ್ದಾರಾ? ಅವರೊಬ್ಬ ಆರೆಸ್ಸೆಸ್‌ ಗುಲಾಮ. ಅವರಿಗೆ ಧಮ್‌ ಇದ್ದರೆ ತಾವೇ ಬಿಜೆಪಿಯಲ್ಲಿ ಮುಂದಿನ ಮುಖ್ಯಮಂತ್ರಿ ಎಂದು ಹೇಳಲಿ ನೋಡೋಣ? ಆದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ನಾನೇ ಎಂದು ಹೇಳುತ್ತೇನೆ. ಧಮ್‌ ಇಲ್ಲದ ಇಂಥವರು ಬಿಜೆಪಿಯಲ್ಲಿ ಇರಬೇಕಾ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ರೈತರ ಸಾಲಮನ್ನಾ, ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರಭಾಗ್ಯ ರೈತರಿಗೆ ಪ್ರೋತ್ಸಾಹಧನ, ಮನಸ್ವಿನಿ ಹೀಗೆ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸುಭದ್ರ ಕರ್ನಾಟಕ ಮಾಡಿದ ಕೀರ್ತಿ ನಮ್ಮದು ಎಂದರು.