ಜಗತ್ತಿನ ಕಠಿಣ ವಾಯುನೆಲೆ ಲೇಹ್‌ನಲ್ಲಿ 1000 ಬಾರಿ ವಿಮಾನ ಇಳಿಸಿದ ಪೈಲಟ್‌| ದಾಖಲೆ ಬರೆದ ಗ್ರೂಪ್‌ ಕ್ಯಾಪ್ಟನ್‌ ಸಂದೀಪ್‌ ಸಿಂಗ್‌

ನವದೆಹಲಿ[ಮೇ.03]: ಸಮುದ್ರ ಮಟ್ಟದಿಂದ 10,000 ಅಡಿ ಎತ್ತರದಲ್ಲಿರುವ ಲೇಹ್‌ ಮತ್ತು ಥೋಯ್ಸೆಯಲ್ಲಿ ವಿಮಾನ ಇಳಿಸುವುದೆಂದರೆ ಹರಸಾಹಸ ಪಡಬೇಕು. ಇಂಥದ್ದೊಂದು ದುರ್ಗಮ ರನ್‌ವೇಯಲ್ಲಿ ದೈತ್ಯ ಯುದ್ಧ ವಿಮಾನವನ್ನು 1000 ಬಾರಿ ಸುರಕ್ಷಿತವಾಗಿ ಇಳಿಸಿದ ಹೆಗ್ಗಳಿಗೆ ಭಾರತೀಯ ವಾಯುಪಡೆಯ ಗ್ರೂಪ್‌ ಕ್ಯಾಪ್ಟನ್‌ ಸಂದೀಪ್‌ ಸಿಂಗ್‌ ಛಾಬ್ರಾ ಪಾತ್ರರಾಗಿದ್ದಾರೆ.

ರಷ್ಯಾ ನಿರ್ಮಿತ ಐಎಲ್‌- 76 ಯುದ್ಧ ವಿಮಾನವನ್ನು ಕ್ಯಾಪ್ಟನ್‌ ಸಂದೀಪ್‌ ಸಿಂಗ್‌ ಲೆಹ್‌ ಮತ್ತು ಥೋಯ್ಸೆ ವಾಯು ನೆಲೆಯಲ್ಲಿ ಗುರುವಾರ ಯಶಸ್ವಿಯಾಗಿ 1000ನೇ ಬಾರಿ ಇಳಿಸಿ ದಾಖಲೆ ನಿರ್ಮಿಸಿದ್ದಾರೆ. ಈ ಎರಡೂ ವಾಯು ನೆಲೆಗಳು ಅತ್ಯಂತ ಸವಾಲಿನ ಭೂ ಪ್ರದೇಶಗಳನ್ನು ಹೊಂದಿದ್ದು, ಇಲ್ಲಿ ವಿಮಾನ ಇಳಿಸಲು ಅತ್ಯುನ್ನತ ಕೌಶಲ್ಯದ ಅಗತ್ಯವಿದೆ. ಅದರಲ್ಲೂ ಐಎಲ್‌- 76 ಭಾರೀ ದೈತ್ಯ ವಿಮಾನ ಎನಿಸಿಕೊಂಡಿದ್ದು, 45 ಟನ್‌ ತೂಕದ ಸರಕುಗಳನ್ನು ಹೊತ್ತೊಯ್ಯಬಲ್ಲದು. ಲೇಹ್‌ಗೆ ಟ್ಯಾಂಕುಗಳು, ಪಿರಂಗಿಗಳು, ನಿರ್ಮಾಣ ಸಾಮರ್ಗಿಗಳನ್ನು ಹಾಗೂ ಸೇನಾ ಸಿಬ್ಬಂದಿಗಳನ್ನು ಸಾಗಿಸುವಲ್ಲಿ ಐಎಲ್‌ 76 ವಿಮಾನ ಪ್ರಮುಖ ಪಾತ್ರ ವಹಿಸುತ್ತಿದೆ.

Scroll to load tweet…

1992 ಜೂ.13ರಂದು ಭಾರತೀಯ ವಾಯು ಪಡೆಯ ಸರಕುಸಾಗಣೆ ವಿಮಾನದ ಪೈಲಟ್‌ ಆಗಿ ವೃತ್ತಿ ಆರಂಭಿಸಿದ ಸಂದೀಪ್‌ ಸಿಂಗ್‌, ಆರಂಭದಲ್ಲಿ ಈಶಾನ್ಯ ಮತ್ತು ಉತ್ತರಾಖಂಡ ರಾಜ್ಯಗಳ ದುರ್ಗಮ ಪ್ರದೇಶಗಳಲ್ಲಿ ಎಎನ್‌ 32 ವಿಮಾನವನ್ನು ಹಾರಿಸುತ್ತಿದ್ದರು. ಒಟ್ಟಾರೆ 8500 ತಾಸುಗಳ ಕಾಲ ವಿಮಾನ ಹಾರಿಸಿದ ಅನುಭವ ಹೊಂದಿರುವ ಕ್ಯಾಪ್ಟನ್‌ ಸಂದೀಪ್‌ ಸಿಂಗ್‌, 5000 ತಾಸುಗಳ ಕಾಲ ಐಎಲ್‌ 76/78 ವಿಮಾನವನ್ನು ಹಾರಿಸಿದ್ದಾರೆ.