ಶ್ರೀನಗರ[ಏ.01]: ಬಾಲಾಕೋಟ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಪಾಕಿಸ್ತಾನ ಯುದ್ಧ ವಿಮಾನಗಳು ಭಾರತದ ಮೇಲೆ ದಂಡೆತ್ತಿ ಬಂದ ಸಂದರ್ಭದಲ್ಲೇ ಶ್ರೀನಗರದ ಬಳಿ ಭಾರತೀಯ ವಾಯುಪಡೆಯ ಎಂಐ-17 ಹೆಲಿಕಾಪ್ಟರ್ ಪತನಗೊಂಡಿದ್ದ ಘಟನೆಗೆ ಹೊಸ ತಿರುವು ಲಭಿಸಿದೆ. ಶತ್ರುದೇಶದ ಕಾಪ್ಟರ್ ಅದಾಗಿರಬಹುದು ಎಂದು ಭಾವಿಸಿ ಭಾರತೀಯ ವಾಯುರಕ್ಷಣಾ ವ್ಯವಸ್ಥೆಯೇ ಅದನ್ನು ಹೊಡೆದುರುಳಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಆಯಾಮದಲ್ಲಿ ತನಿಖೆ ಕೂಡ ನಡೆಯುತ್ತಿದೆ.

ಬುದ್ಗಾಮ್ನಲ್ಲಿ ಪತವಾಗಿದ್ದು ಮಿಗ್-21 ವಿಮಾನ ಅಲ್ಲ, Mi-17 ಹೆಲಿಕಾಪ್ಟರ್

ವಿಮಾನ ಹಾಗೂ ಹೆಲಿಕಾಪ್ಟರ್‌ಗಳಲ್ಲಿ ‘ಐಡೆಂಟಿಫಿಕೇಷನ್ ಫ್ರೆಂಡ್ ಆರ್ ಫೋ’ ಎಂಬ ಸ್ವಿಚ್ ಇರುತ್ತದೆ. ಈ ಸ್ವಿಚ್ ಆನ್ ಆಗಿದ್ದರೆ, ಹಾರಾಡುತ್ತಿರುವ ವಿಮಾನ/ಕಾಪ್ಟರ್ ತನ್ನ ದೇಶದ್ದೋ ಅಥವಾ ಶತ್ರುದೇಶದ್ದೋ ಎಂಬುದು ರಾಡಾರ್‌ಗೆ ಗೊತ್ತಾಗುತ್ತದೆ. ಆದರೆ ಅಂದು ಎಂಐ-17 ಹೆಲಿಕಾಪ್ಟರ್ ಪೈಲಟ್ ಆ ಸ್ವಿಚ್ ಆನ್ ಮಾಡಲು ಮರೆತಿದ್ದರಿಂದ, ಪಾಕಿಸ್ತಾನದ ಕಾಪ್ಟರ್ ಇರಬಹುದು ಎಂದು ಭಾವಿಸಿ ಭಾರತೀಯ ವಾಯು ರಕ್ಷಣಾ ವ್ಯವಸ್ಥೆ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೆ.17ರಂದು ಈ ವಿಮಾನ ಪತನಗೊಂಡು ಅದರಲ್ಲಿದ್ದ ಎಲ್ಲ ಆರೂ ಮಂದಿ ಸಾವನ್ನಪ್ಪಿದ್ದರು.

ಈ ಬಗ್ಗೆ ತನಿಖೆ ನಡೆಯುತ್ತಿದೆ. ಅದರ ವರದಿ ಬರುವ ಮುನ್ನವೇ ಪ್ರತಿಕ್ರಿಯೆ ನೀಡುವುದು ಅಪಕ್ವವಾಗುತ್ತದೆ ಎಂದು ವಾಯುಪಡೆಯ ವಕ್ತಾರರು ತಿಳಿಸಿದ್ದಾರೆ.