ನವದೆಹಲಿ[ಮಾ.15]: ಪಾಕಿಸ್ತಾನದಿಂದ ಬಿಡುಗಡೆಯಾಗಿ ಬಂದಿರುವ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್‌, ಪಾಕಿಸ್ತಾನಕ್ಕೆ ಸೇನಾ ಮಾಹಿತಿಯನ್ನು ಬಿಟ್ಟು ಕೊಟ್ಟಿದ್ದಾರೆಯೇ? ಪಾಕಿಸ್ತಾನ ಅಭಿನಂದನ್‌ ಅವರನ್ನು ಗೂಢಚಾರಿಕೆಗೆ ಬಳಿಸಿಕೊಳ್ಳುತ್ತಿದ್ದೆಯೇ? ಎಂಬ ಅನುಮಾನಗಳ ಪರಿಹಾರಕ್ಕೆ ಕಳೆದ ಕೆಲವು ದಿನಗಳಿಂದ ನಡೆಸುತ್ತಿರುವ ವಿಚಾರಣೆಯನ್ನು ಭಾರತೀಯ ವಾಯು ಪಡೆ ಹಾಗೂ ತನಿಖಾ ಸಂಸ್ಥೆಗಳು ಪೂರ್ಣಗೊಳಿಸಿವೆ. ಅದರ ಬೆನ್ನಲ್ಲೇ ಸೇನಾ ಆಸ್ಪತ್ರೆಯ ವೈದ್ಯರು ಸಲಹೆಯಂತೆ ಅಭಿನಂದನ್‌ ಕೆಲವು ವಾರಗಳ ಕಾಲ ಅನಾರೋಗ್ಯದ ರಜೆ ಪಡೆದುಕೊಂಡಿದ್ದಾರೆ.

ಶತ್ರುಪಡೆಯನ್ನು ಹಿಮ್ಮೆಟ್ಟಿಸುವ ವೇಳೆ ಫೆ.27ರಂದು ಮಿಗ್‌ ವಿಮಾನ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಪತನಗೊಂಡು ಅಭಬಿನಂದನ್‌ ಅವರನ್ನು ಪಾಕಿಸ್ತಾನ ಸೆರೆ ಹಿಡಿದಿತ್ತು. ಎರಡು ದಿನದ ಬಳಿಕ ಅಭಿನಂದನ್‌ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಿತ್ತು.

ಬೆಂಗಳೂರಲ್ಲಿ ಪರೀಕ್ಷೆ: ರಜೆಯ ಬಳಿಕ ಅಭಿನಂದನ್‌ ಬೆಂಗಳೂರಿಗೆ ಆಗಮಿಸಿ ಇಲ್ಲಿನ ಸೇನಾ ಕೇಂದ್ರವೊಂದರಲ್ಲಿ ದೈಹಿಕ ಪರೀಕ್ಷೆ ಒಳಪಡಲಿದ್ದಾರೆ. ಆ ಪರೀಕ್ಷೆಯ ವರದಿಯ ಬಳಿಕ ಅವರು ಮತ್ತೆ ಯುದ್ಧ ವಿಮಾನ ಹಾರಿಸಬಹುದೇ? ಇಲ್ಲವೇ ಎಂಬುದು ನಿರ್ಧಾರವಾಗಲಿದೆ.