‘ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಜನಾರ್ದನ ರೆಡ್ಡಿ ಮುಂತಾದವರ ಭ್ರಷ್ಟಾಚಾರದ ಪ್ರಕರಣಗಳು ಬಂದರೆ ಸಂಶಯಗಳಿಗೆ ಕಾರಣವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅವುಗಳನ್ನು ನಾನು ವಿಚಾರಣೆ ಮಾಡುವುದಿಲ್ಲ. ಬದಲಾಗಿ ಬೇರೆಯವರಿಗೆ ವಿಚಾರಣೆ ನಡೆಸಲು ಅವಕಾಶವಾಗುವಂತೆ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ’ ಎಂದು ನೂತನ ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ ಶೆಟ್ಟಿ ಹೇಳಿದರು.
ಉಡುಪಿ/ಮಂಗಳೂರು (ಫೆ.04): ‘ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಜನಾರ್ದನ ರೆಡ್ಡಿ ಮುಂತಾದವರ ಭ್ರಷ್ಟಾಚಾರದ ಪ್ರಕರಣಗಳು ಬಂದರೆ ಸಂಶಯಗಳಿಗೆ ಕಾರಣವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅವುಗಳನ್ನು ನಾನು ವಿಚಾರಣೆ ಮಾಡುವುದಿಲ್ಲ. ಬದಲಾಗಿ ಬೇರೆಯವರಿಗೆ ವಿಚಾರಣೆ ನಡೆಸಲು ಅವಕಾಶವಾಗುವಂತೆ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ’ ಎಂದು ನೂತನ ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ ಶೆಟ್ಟಿ ಹೇಳಿದರು.
ಶನಿವಾರ ಇಲ್ಲಿನ ಉಪ್ಪೂರು ದೇವಸ್ಥಾನದ ಭೇಟಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸುವಾಗ ರಾಜಕೀಯ ವ್ಯಕ್ತಿಗಳ ಅನೇಕ ಪ್ರಕರಣಗಳ ಸಂದರ್ಭದಲ್ಲಿ ಅವರ ಪರ-ವಿರುದ್ಧವಾಗಿ ವಾದಿಸಿದ್ದೇನೆ. ಈಗ ಅಂಥದ್ದೇ ರಾಜಕಾರಣಿಗಳ ಅಥವಾ ನನ್ನ ಸಂಬಂಧಿಕರ ಬಗ್ಗೆ ನಾನೇ ವಿಚಾರಣೆ ಮಾಡಿದರೆ ಸಂಶಯಗಳೇಳುವುದು ಸಹಜ. ಆದ್ದರಿಂದ ಇಂತಹ ಪ್ರಕರಣವನ್ನು ಬೇರೆಯವರಿಗೆ ವಹಿಸುವ ಅಧಿಕಾರವನ್ನು ಲೋಕಾಯುಕ್ತರಿಗೆ ನೀಡುವುದಕ್ಕೆ ಅನುಕೂಲವಾಗುಂತೆ ಕಾಯ್ದೆಗೆ ತಿದ್ದುಪಡಿಯಾಗಬೇಕು ಎಂದವರು ಹೇಳಿದರು.
ಡಿ.ಕೆ.ಶಿವಕುಮಾರ್ ಪ್ರಕರಣ ಲೋಕಾಯುಕ್ತದಲ್ಲಿಲ್ಲ, ಎಸಿಬಿಯಲ್ಲಿದೆ. ಆದರೆ ಜನಾರ್ದನ ರೆಡ್ಡಿ ಅವರ ಪ್ರಕರಣ ಲೋಕಾಯುಕ್ತದಲ್ಲಿದೆ ಎಂದು ಮಾಹಿತಿ ನೀಡಿದರು.
ಲೋಕಾಯುಕ್ತಕ್ಕೆ ಅಧಿಕಾರ ಇಲ್ಲ ಎಂದವರು ಯಾರು? ಎಫ್‌ಐಆರ್ ಅಧಿಕಾರ ಮಾತ್ರ ಎಸಿಬಿ(ಭ್ರಷ್ಟಾಚಾರ ನಿಗ್ರಹ ದಳ)ಗೆ ಇದೆ. ಲೋಕಾಯುಕ್ತ ಸೂಚಿಸಿದರೆ ಎಸಿಬಿಯೂ ಕೆಲಸ ಮಾಡಬೇಕು ಎಂದಿದ್ದಾರೆ.
ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಹುಟ್ಟೂರಾದ ಕುಂದಾಪುರಕ್ಕೆ ತೆರಳುವಾಗ ಮಾರ್ಗ ಮಧ್ಯೆ ಕುಕ್ಕೆ ಸುಬ್ರಹ್ಮಣ್ಯ ಹಾಗೂ ನಂತರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಲೋಕಾಯುಕ್ತ ಮತ್ತು ಎಸಿಬಿ ನಡುವೆ ಯಾವುದೇ ಗೊಂದಲಗಳಿಲ್ಲ. ಎಸಿಬಿ ಮತ್ತು ಲೋಕಾಯುಕ್ತ ಜಂಟಿಯಾಗಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಿದೆ. ಈಗಾಗಲೇ ಎಸಿಬಿಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಯೋಜನೆಗಳ ಕುರಿತು ರೂಪುರೇಷೆ ಸಿದ್ಧಪಡಿಸಲಾಗಿದೆ. ಮುಂದಿನ ವಾರ ಎಸಿಬಿಯ ಅಧಿಕಾರಿಗಳೊಂದಿಗೆ ಎರಡನೇ ಸುತ್ತಿನ ಮಾತುಕತೆ ನಡೆಸಲಿದ್ದೇನೆ. ಆ ಬಳಿಕ ವಿನೂತನ ಕಾರ್ಯತತಂತ್ರ ರೂಪಿಸಲಿದ್ದೇವೆ ಎಂದು ಮಾಹಿತಿ ನೀಡಿದರು.
ಲೋಕಾಯುಕ್ತದಲ್ಲಿ ಮಾಡಬೇಕಾದ ಕೆಲಸ ಸಾಕಷ್ಟಿದೆ. ಲೋಕಾಯುಕ್ತದಲ್ಲಿ ೧,೪೦೦ ಮಂದಿ ಅಧಿಕಾರಿಗಳಿದ್ದಾರೆ. ಎಲ್ಲ ಅಧಿಕಾರಿಗಳೂ ಲೋಕಾಯುಕ್ತರಾಗಬೇಕು. ಈ ಸಂಸ್ಥೆಯನ್ನು ರಾಜಕೀಯ ಸಂಚಿಗಾಗಲಿ, ಇನ್ನೊಬ್ಬರಿಗೆ ಅವಮಾನ ಮಾಡಲಾಗಲಿ ಈ ಸಂಸ್ಥೆಯನ್ನು ಬಳಸಲು ಬಿಡುವುದಿಲ್ಲ. ಸಿಎಂ ವಿರುದ್ಧದ ದೂರಿನ ಬಗ್ಗೆಯೂ ಪರಿಶೀಲಿಸುತ್ತೇನೆ. ಅದಕ್ಕೊಂದು ಶಿಸ್ತಿದೆ, ಅದರ ಪ್ರಕಾರವೇ ಮುಂದುವರಿಯಬೇಕು ಎಂದು ನೂತನ ಲೋಕಾಯುಕ್ತರು ತಿಳಿಸಿದರು.
