ಬೆಂಗಳೂರು[ಸೆ.23]: ವೈಯಕ್ತಿಕವಾಗಿ ಯಾರ ಮೇಲೂ ದ್ವೇಷ, ಕೋಪ, ಅಸಮಾಧಾನವಿಲ್ಲ. ಪಕ್ಷ ಇನ್ನು ಮೂರುವರೆ ವರ್ಷದ ಬಿ ಫಾರಂ ನೀಡಿದ್ದು, ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಗುಬ್ಬಿಯ ಜೆಡಿಎಸ್‌ ಶಾಸಕ ಶ್ರೀನಿವಾಸ್‌ ಹೇಳಿದ್ದಾರೆ.

ಭಾನುವಾರ ನಗರದ ಜೆಡಿಎಸ್‌ ಕಚೇರಿಯಲ್ಲಿ ಪಕ್ಷದ ತುಮಕೂರು ಜಿಲ್ಲಾ ಮುಖಂಡರ ಸಭೆಯ ಬಳಿಕ ಮಾತನಾಡಿದ ಅವರು, ಪಕ್ಷ ಸಂಘಟನೆಯ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಯಿತು. ನನಗೆ ಯಾರ ಬಗ್ಗೆಯೂ ವೈಯಕ್ತಿಕವಾಗಿ ಯಾವುದೇ ಅಸಮಾಧಾನವಿಲ್ಲ. ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿದ ಸಂದರ್ಭದಲ್ಲಿ ಸಮಾಜ ಹೋರಾಟಕ್ಕೆ ಕರೆ ನೀಡಿತ್ತು. ಸಮಾಜದ ಕರೆಗೆ ಪಕ್ಷದ ವರಿಷ್ಠ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಂದಿಲ್ಲ. ಸಮಾಜದ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂಬುದಾಗಿ ಹೇಳಿದೆ. ಅದನ್ನು ಬಿಟ್ಟು ಪಕ್ಷ ತೊರೆಯುತ್ತೇನೆಂದು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರು.

ಯಾವುದೇ ಕಾರಣಕ್ಕೂ ನಾನು ಮಾರಾಟವಾಗುವುದಿಲ್ಲ. ಬಿಜೆಪಿ ಸೇರುವುದಿಲ್ಲ. ಆದರೆ, ಇಂದಿನ ರಾಜಕೀಯ ಬೆಳವಣಿಗೆ ನೋಡಿದರೆ ಬೇಸರವಾಗುತ್ತದೆ. ಇವತ್ತಿನ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆ. ಮಾಜಿ ಸಚಿವ ಎಚ್‌. ವಿಶ್ವನಾಥ್‌ ಅವರ ಬಗ್ಗೆ ತಮಗೆ ತುಂಬಾ ವಿಶ್ವಾಸವಿತ್ತು. ಅವರನ್ನು ತಾವು ಮಾದರಿಯಾಗಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದೆವು. ಅಂತಹ ನಾಯಕರೇ ಹೀಗೆ ಮಾಡಿದರೆ ಹೇಗೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಅಡ್ಡ ದಾರಿಯಲ್ಲಿ ಅಧಿಕಾರ ಹಿಡಿಯುವ ಕೆಲಸ ಮಾಡಲಾಗುತ್ತಿದೆ. ಜನರು ಛೀ..ಥೂ.. ಎಂದು ಉಗಿಯುವ ಪರಿಸ್ಥಿತಿಗೆ ತಲುಪಿದ್ದೇವೆ. ಇದನ್ನು ನೋಡಿದರೆ ರಾಜಕೀಯದ ಬಗ್ಗೆ ಅಸಹ್ಯ ಬರುತ್ತದೆ ಎಂದು ಶ್ರೀನಿವಾಸ್‌ ತಿಳಿಸಿದರು.