ವಿಜಯಪುರ : ‘ಆಪರೇಷನ್ ಕಮಲ’ಕ್ಕೆ ಸೆಡ್ಡು ಹೊಡೆಯಲು ಕಾಂಗ್ರೆಸ್ಸಿಗರು ‘ಆಪರೇಷನ್ ಹಸ್ತ’ ನಡೆಸಿದರೆ ದೇವರಹಿಪ್ಪರಗಿಯ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರೇ ಮೊದಲು ಬಲಿಯಾಗುತ್ತಾರೆ. 

ಹೀಗೊಂದು ಆಡಿಯೋ ರಾಜ್ಯದಲ್ಲಿ ವೈರಲ್ ಆಗಿದ್ದು, ಇದಕ್ಕೆ ಸ್ವತಃ ಶಾಸಕ ಸೋಮನಗೌಡ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,  ಪಕ್ಷ ತೊರೆಯುವುದಾಗಿ ಮಾತನಾಡಿದ ಆಡಿಯೋ ಪ್ರೂವ್ ಆದಲ್ಲಿ ರಾಜಕೀಯವನ್ನೇ ತೊರೆಯುವುದಾಗಿ ಹೇಳಿದ್ದಾರೆ. 

ನಾಗಠಾಣ ಶಾಸಕ ದೇವಾನಂದ ಚವ್ಹಾಣ ಹಾಗೂ ಶಿವಾಜಿ‌ ಮೆಟಗಾರ ಎಂಬುವವರು ಮಾತನಾಡಿದ ಆಡಿಯೋ ವೈರಲ್ ಆಗಿದೆ. ಅವರು ಯಾವ ಉದ್ದೇಶ ಇಟ್ಟುಕೊಂಡು ಹೀಗೆ ಮಾತನಾಡಿದ್ದಾರೆ ಗೊತ್ತಿಲ್ಲ. ತಾವು ಬಿಜೆಪಿ  ಬಿಟ್ಟು ಹೋಗುವುದಿಲ್ಲ. ಈ ಮಾತನ್ನು ಅವರು ಪ್ರೂವ್ ಮಾಡಲಿ ಎಂದು ಸವಾಲು ಹಾಕಿದ್ದಾರೆ. 

ನಾನು ಬಿಜೆಪಿ ಕಾರ್ಯಕರ್ತ, ನಾನು ಬಿಜೆಪಿ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಬಿಜೆಪಿಗೆ ಅನ್ಯಾಯ ಮಾಡಿದರೆ ಹೆತ್ತ ತಾಯಿಗೆ ಅನ್ಯಾಯ ಮಾಡಿದಂತೆ.  ದೇವಾನಂದ ಚವ್ಹಾಣ ಅವರು ನನ್ನ ಬಗ್ಗೆ ಯಾಕೆ ಹೀಗೆ ಮಾತಾಡಿದ್ದಾರೆ ಎಂಬುದು ಗೊತ್ತಿಲ್ಲ. ಈ ಕುರಿತು ದೇವಾನಂದ ಅವರು ಸ್ಪಷ್ಟಪಡಿಸಬೇಕು. ನನ್ನ ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸಿ ಮಾತನಾಡಬೇಕು. ಈ ಬಗ್ಗೆ ಬಿಜೆಪಿ ನಾಯಕರೊಂದಿಗೆ ಚರ್ಚಿಸಲಾಗುವುದು ಎಂದಿದ್ದಾರೆ.