Nitin Gadkari : ರಿಲಯನ್ಸ್ ಟೆಂಡರ್ ತಿರಸ್ಕರಿಸಿ 2 ಸಾವಿರ ಕೋಟಿ ಉಳಿಸಿದ್ದೆ!
ಮುಂಬೈ-ಪುಣೆ ಎಕ್ಸ್ ಪ್ರೆಸ್ ಹೈವೇಗೆ ರಿಲಯನ್ಸ್ ಟೆಂಡರ್ ತಿರಸ್ಕರಿಸಿದ್ದ ಗಡ್ಕರಿ
ಧೀರೂಬಾಯಿ ಅಂಬಾನಿ ಕೂಡ ನಿತಿನ್ ಗಡ್ಕರಿ ಮೇಲೆ ಸಿಟ್ಟಾಗಿದ್ದರು
ಮೂಲಸೌಕರ್ಯ ಯೋಜನೆಗಳು ನಿಂತರೆ ತಲೆಕೆಡಿಸಿಕೊಳ್ಳಬೇಡಿ ಎಂದ ಕೇಂದ್ರ ಸಚಿವ
ಮುಂಬೈ (ಡಿ.17): ದೇಶದಲ್ಲಿ ಮೂಲಸೌಕರ್ಯ ಯೋಜನೆ ಮಾಡುತ್ತಿದ್ದ ವೇಳೆ ಹಠಾತ್ ಆಗಿ ನಿಂತಲ್ಲಿ, ಹೂಡಿಕೆದಾರರು ತಮ್ಮ ಹಣ ವಾಪಸ್ ಬರಲಿದೆಯೇ ಇಲ್ಲವೇ ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಹೂಡಿಕೆ ಖಂಡಿತವಾಗಿ ವಾಪಸ್ ಬರಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಸಚಿವ ನಿತಿನ್ ಗಡ್ಕರಿ (Union Minister Nitin Gadkari ) ಹೇಳಿದ್ದಾರೆ. ಮುಂಬೈನಲ್ಲಿ "ಹೆದ್ದಾರಿ, ಸಾರಿಗೆ ಮತ್ತು ಲಾಜಿಸ್ಟಿಕ್ಸ್‌ನಲ್ಲಿ ಹೂಡಿಕೆ ಅವಕಾಶಗಳ ಕುರಿತು ರಾಷ್ಟ್ರೀಯ ಸಮ್ಮೇಳನ"ದಲ್ಲಿ ಮಾತನಾಡಿದ ಅವರು, ರಿಲಯನ್ಸ್ ಕಂಪನಿಗೆ ಟೆಂಡರ್ ನಿರಾಕರಿಸಿದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಇಂದು ಮುಂಬೈನಲ್ಲಿ ನಡೆಯುತ್ತಿರುವ ಈ ಸಮಾವೇಶದಲ್ಲಿ 1995ರಲ್ಲಿ ನಾನು ರಾಜ್ಯ ಸಚಿವನಾಗಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ. ಅಂದು ಇದೇ ಮುಂಬೈ-ಪುಣೆ ಎಕ್ಸ್ ಪ್ರೆಸ್ ಹೈವೇ (Mumbai-Pune Express Highway)ಯೋಜನೆಗಾಗಿ ರಿಲಯನ್ಸ್ ( Reliance )ಕಂಪನಿಯ ಟೆಂಡರ್ ಅನ್ನು ನಿರಾಕರಿಸಿದ್ದೆ. ಅಂದು ರಿಲಯನ್ಸ್ ಕಂಪನಿಯ ಮುಖ್ಯಸ್ಥರಾಗಿ ಧೀರೂಬಾಯಿ ಅಂಬಾನಿ (Dhirubhai Ambani) ಇದ್ದರು. ದೊಡ್ಡ ಟೆಂಡರ್ ತಿರಸ್ಕರಿಸಿದ ನನ್ನ ಬಗ್ಗೆ ಅವರು ಸಿಟ್ಟಾಗಿದ್ದರು. ಮುಖ್ಯಮಂತ್ರಿ ಹಾಗೂ ಬಾಳಾ ಸಾಹೇಬ್ ಠಾಕ್ರೆ (Balasaheb Thackeray) ಕೂಡ ನನ್ನ ನಿರ್ಧಾರವನ್ನು ಸಮರ್ಥಿಸಿರಲಿಲ್ಲ. ಈ ಟೆಂಡರ್ ಅನ್ನು ತಿರಸ್ಕರಿಸಿದ್ದೇಕೆ? ಎಂದು ಎಲ್ಲರೂ ನನಗೆ ಪ್ರಶ್ನಿಸಿದ್ದರು. ಆಗ ನಾನು ಈ ಯೋಜನೆಗೆ ನೇರವಾಗಿ ಜನರಿಂದಲೇ ಹಣ ಪಡೆಯುತ್ತೇನೆ ಎಂದು ಹೇಳಿದೆ. ಕೇವಲ ಈ ಯೋಜನೆ ಮಾತ್ರವಲ್ಲ, ಬಾಂದ್ರಾ-ವೊರ್ಲಿ ಸೀಲಿಂಕ್ (Bandra-Worli Sea link) ಯೋಜನೆಗೂ ಜನರಿಂದಲೇ ಹಣ ಪಡೆಯುತ್ತೇನೆ ಎಂದಿದ್ದೆ. ಅಂದು ನನ್ನ ಮಾತನ್ನು ಕೇಳಿ ಅವರೆಲ್ಲಾ ನಕ್ಕಿದ್ದರು ಎಂದು ಗಡ್ಕರಿ ಆ ದಿನಗಳನ್ನು ನೆನಪಿಸಿಕೊಂಡರು.
ಅಂದು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಮನೋಹರ್ ಜೋಶಿ (Manohar Joshi), ನಾನೇನು ಮಾಡಬೇಕು ಅಂದುಕೊಂಡಿದ್ದೇನೋ ಅದನ್ನು ಮಾಡುವಂತೆ ಹೇಳಿದ್ದರು. ಹಾಗಾಗಿ ಎಂಎಸ್ಆರ್ ಡಿಸಿ (MSRDC) (ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ) ಸ್ಥಾಪನೆ ಮಾಡಿದೆ. ಆ ಸಮಯದಲ್ಲಿ ನಾನು ಸಂಸ್ಥಾಪಕ ಅಧ್ಯಕ್ಷನಾಗಿದ್ದೆ. ಹೂಡಿಕೆದಾರರನ್ನು ಹುಡುಕೊಂಡು ಚೇಂಬರ್ಸ್ ಆಫ್ ಕಾಮರ್ಸ್ ಗೆ ಲ್ಯಾಪ್ ಟ್ಯಾಪ್ ಜೊತೆ ತೆರಳಿ ಪ್ರೆಸೆಂಟೇಷನ್ ಗಳನ್ನು ನೀಡುತ್ತಿದ್ದೆ. ಅಂದೆಲ್ಲಾ ಲ್ಯಾಪ್ ಟ್ಯಾಪ್ ಗಳು ಬಹಳ ಹೊಸದು. ಅಂದು ನಾವು ಹೂಡಿಕೆದಾರರನ್ನು ಹುಡುಕಿಕೊಂಡು ಹೋಗುತ್ತಿದ್ದೆವು. ಈಗ ಹೂಡಿಕೆದಾರರೇ ನಮ್ಮ ಬಳಿ ಬರುತ್ತಿದ್ದಾರೆ ಎಂದು ಹೇಳಿದರು.
Good News: ಶೀಘ್ರವೇ ಪೆಟ್ರೋಲ್, ಡಿಸೇಲ್ ವಾಹನಗಳ ಬೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಲಭ್ಯ
ಮೂಲಸೌಕರ್ಯ ಯೋಜನೆಗಳಿಂದ ಆದಾಯ ಗಳಿಸುವ ಕುರಿತಾಗಿ ಮಾತನಾಡಿದ ಕೇಂದ್ರ ಸಚಿವ, "ಹೂಡಿಕೆದಾರರ ವಿಶ್ವಾಸದ ಕುರಿತಾಗಿ ನಾನು ಈ ವೇಳೆ ಒಂದು ಅನುಭವವನ್ನು ಹಂಚಿಕೊಳ್ಳುತ್ತೇನೆ. ಮುಂಬೈ-ಪುಣೆ ಎಕ್ಸ್ ಪ್ರೆಸ್ ಹೈವೇಗೆ ರಿಲಯನ್ಸ್ 3600 ಕೋಟಿ ರೂಪಾಯಿಯ ಟೆಂಡರ್ ಸಲ್ಲಿಸಿತ್ತು. ಆದರೆ, ನಾನು ಈ ಟೆಂಡರ್ ಅನ್ನು ತಿರಸ್ಕರಿಸಿ, ಎಂಎಸ್ಆರ್ ಡಿಸಿ ಮೂಲಕ ಈ ಯೋಜನೆಯನ್ನು ಪೂರ್ಣ ಮಾಡಿದೆ.
Karwar| ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಕೇಂದ್ರ ಸಚಿವರಿಗೆ ರೂಪಾಲಿ ಮನವಿ
ಇದರ ಒಟ್ಟಾರೆ ವೆಚ್ಚ 1600 ಕೋಟಿ ರೂಪಾಯಿ ಆಗಿತ್ತು. ಮಹಾರಾಷ್ಟ್ರ ಸರ್ಕಾರಕ್ಕೆ ಅಂದು 2 ಸಾವಿರ ಕೋಟಿ ರೂ. ಉಳಿಸಿದ್ದೆ. ಅಂದು ಈ ರಸ್ತೆಯನ್ನು ಮಾನೆಟೈಸ್ ಮಾಡುವ ಮೂಲಕ ಸರ್ಕಾರ 3 ಸಾವಿರ ಕೋಟಿ ಸಂಪಾದಿಸಿತ್ತು. ಒಂದೂವರೆ ವರ್ಷದ ಹಿಂದೆ ಮತ್ತೆ ಮಾನಟೈಸ್ ಮಾಡಿ 8 ಸಾವಿರ ಕೋಟಿ ರೂ. ಗಳಿಸಿದೆ. ಮೂಲಸೌಕರ್ಯ ಯೋಜನೆಗಳಲ್ಲಿ ಆಂತರಿಕ ಆದಾಯಗಳ ಲೆಕ್ಕಾಚಾರವನ್ನು ಬಿಟ್ಟುಬಿಡಬೇಕು ಎಂದು ಹೇಳಿದರು. 2014ಕ್ಕಿಂತ ಮುಂಚೆ, ಹೆದ್ದಾರಿ ಯೋಜನೆಗಳಿಗೆ ಭೂಮಿ ಪಡೆಯುವ ಸಮಸ್ಯೆಯಿಂದಾಗಿ ಸಾಕಷ್ಟು ಸಮಸ್ಯೆ ಎದುರಾಗುತ್ತಿತ್ತು. ಆದರೆ, ಪ್ರಸ್ತುತ ಇರುವ ನಿಯಮದ ಪ್ರಕಾರ, ಯಾವುದೇ ಯೋಜನೆಗೆ ಶೇ.90ರಷ್ಟು ಭೂಮಿ ಇಲ್ಲದೇ ಇದ್ದಾಗ ಹಾಗೂ ಪರಿಸರ ಇಲಾಖೆಯ ನಿರಾಕ್ಷೇಪಣಾ ಪತ್ರ ಇಲ್ಲದೇ ಇದಲ್ಲಿ ಅದಕ್ಕೆ ಅನುಮತಿ ಸಿಗುವುದೇ ಇಲ್ಲ ಎಂದು ಹೇಳಿದರು.