ಬೆಂಗಳೂರು (ಜು. 10): ಒಂದೂವರೆ ತಿಂಗಳಲ್ಲಿ ಜಾದೂ ಮಾಡಿ ಎಲ್ಲ ಸಮಸ್ಯೆಗಳನ್ನು ಸರಿಪಡಿಸಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ನನಗೆ ಸ್ವಲ್ಪ ಸಮಯ ಕೊಡಿ ಎಂದೂ ಅವರು ಮನವಿ ಮಾಡಿದ್ದಾರೆ.

ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣ ಪ್ರಸ್ತಾವದ ಮೇಲೆ ನಡೆದ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರ ನೀಡಿದ ಅವರು, ರಾಜ್ಯಪಾಲರ ಭಾಷಣದ ಮೂಲಕ ನಮ್ಮ ಸಮ್ಮಿಶ್ರ ಸರ್ಕಾರದ ಉದ್ದೇಶಗಳನ್ನು ಹೇಳಿಸಿದ್ದೇವೆ. ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂಬ ಕಳಕಳಿ ವ್ಯಕ್ತಪಡಿಸಿದ್ದೇವೆ ಎಂದರು.

ರಾಜ್ಯಪಾಲರ ಭಾಷಣದಲ್ಲಿ ಸಾಲಮನ್ನಾ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದಿದ್ದರು. ಬಜೆಟ್‌ನಲ್ಲಿ ಎಲ್ಲವನ್ನೂ ಘೋಷಿಸಿದ್ದೇನೆ. ಆದರೆ, ಎಷ್ಟುಸಮುದಾಯದ ರೈತರಿಗೆ ಅನುಕೂಲವಾಗಲಿದೆ ಎಂಬುದರ ಶೇಕಡಾವಾರು ವರದಿಗಳು ಪ್ರಕಟಗೊಂಡಿವೆ. ಅದಕ್ಕೆ ಏನು ಆಧಾರವಿದೆ? ನೀವು ತಿನ್ನುವ ಅನ್ನದ ಮೇಲೆ ಒಕ್ಕಲಿಗರು, ಲಿಂಗಾಯತರು ಎಂಬುದು ಬರೆದಿರುತ್ತದೆಯೇ? ಇದೆಲ್ಲದಕ್ಕೂ ಬಜೆಟ್‌ ಮೇಲಿನ ಚರ್ಚೆಯ ನಂತರ ಉತ್ತರ ನೀಡುತ್ತೇನೆ ಎಂದು ತುಸು ಆಕ್ರೋಶದಿಂದಲೇ ಹೇಳಿದರು.