ಧಾರವಾಡ (ಜ. 07): ‘ನಾನು ಎಡವೋ ಅಥವಾ ಬಲವೋ ಎಂದು ಈಗಲೂ ನನಗೆ ಗೊತ್ತಾಗಿಲ್ಲ. ನನಗೆ ಎರಡು ಕೈಗಳು ಇವೆಯಾದ್ದರಿಂದ ಎಡವೂ ಹೌದು. ಬಲನೂ ಹೌದು!’ ಸಾಹಿತ್ಯ ವಲಯದ ಎಡ-ಬಲಗಳ ಬಹು ಚರ್ಚೆಗಳ ಪ್ರಸ್ತುತ ದಿನಗಳಲ್ಲಿ ತಮ್ಮ ನಿಲುವಿನ ಪ್ರಶ್ನೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ ಕಂಬಾರರು ಉತ್ತರಿಸಿದ್ದು ಹೀಗೆ.

ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದದಲ್ಲಿ ‘ನೀವು ಎಡವೋ ಅಥವಾ ಬಲವೋ? ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್‌ ಹತ್ಯೆಯಾದಾಗ ಪ್ರಖರವಾಗಿ ಏಕೆ ನೀವು ಪ್ರತಿಭಟಿಸಲಿಲ್ಲ?’ ಎಂಬ ಮಲ್ಲಿಕಾರ್ಜುನ ಕಡಗೋಳ ಅವರ ಪ್ರಶ್ನೆಗೆ, ‘ಸಾಹಿತ್ಯ ನಿರ್ದಿಷ್ಟವಾದಕ್ಕೆ ಸೀಮಿತಗೊಂಡಿದ್ದಲ್ಲ. ಅದು ಎಲ್ಲವನ್ನೂ, ಎಲ್ಲರನ್ನೂ ಒಳಗೊಂಡದ್ದು’ ಎಂಬುದನ್ನು ಪರೋಕ್ಷವಾಗಿ ಹೇಳಿದರು.

ನನ್ನ ಗೆಳೆಯ ಕಲಬುರ್ಗಿ ಹಾಗೂ ಗೌರಿ ಲಂಕೇಶ್‌ ಹತ್ಯೆ ನನಗೆ ತೀವ್ರ ಘಾಸಿಗೊಳಿಸಿದೆ. ಅವರ ಹತ್ಯೆಗೆ ನಾನು ಪ್ರತಿಭಟಿಸಲಿಲ್ಲ ಅಂತಲ್ಲ. ಪ್ರತಿಭಟನಾರ್ಥವಾಗಿ ಏನು ಮಾಡಬೇಕೋ ಅದನ್ನೆಲ್ಲ ಮಾಡಿದ್ದೇನೆ. ಎಲ್ಲವೂ ಬಹಿರಂಗವಾಗಿ ಹೇಳಿಕೊಂಡು ಪ್ರಚಾರ ಮಾಡಿಕೊಳ್ಳಬೇಕಾಗಿಲ್ಲ ಎಂದರು.

ಹೆಣ್ಣು ಲೈಂಗಿಕತೆಯ ಸಾಧನವಲ್ಲ:

ಹೆಣ್ಣನ್ನು ಲೈಂಗಿಕತೆಯ ಸಾಧನವಾಗಿ ನನ್ನ ಸಾಹಿತ್ಯದಲ್ಲಿ ಎಂದೂ ಬಳಸಿಕೊಂಡಿಲ್ಲ. ನನಗೆ ಸ್ತ್ರೀ ಬಗ್ಗೆ ಕೆಟ್ಟಭಾವನೆ ಬರಲು ಸಾಧ್ಯವಿಲ್ಲ. ರೂಪಕವಾಗಿ ತೆಗೆದುಕೊಂಡಿರುವೆನಷ್ಟೇ. ಹೆಣ್ಣನ್ನು ಅಸಹಾಯಕತೆಯಲ್ಲಿ ಕಂಡದ್ದು ‘ಸಿಂಗಾರವ್ವ’ನ ಪಾತ್ರದಲ್ಲಿ. ನಾನು ಈ ಹಿಂದೆ ಹೇಳಿದಂತೆ ನಮಗೆಲ್ಲ ಪಾಶ್ಚಿಮಾತ್ಯ ಸಾಹಿತ್ಯದ ಪ್ರಭಾವವಿತ್ತು. ಹೆಣ್ಣೆಂಬುದು ಸಮೃದ್ಧಿಯ ಶಕ್ತಿ ಎಂಬುದು ಲಾರೆನ್ಸ್‌ನ ಥೀಮ್‌ ಆಗಿತ್ತು. ಅದನ್ನು ನಾನು ‘ಜೋಕುಮಾರಸ್ವಾಮಿ’ ನಾಟಕದಲ್ಲಿ ಬಳಸಿಕೊಂಡಿದ್ದೇನೆ ಎಂದು ವಿವರಿಸಿದರು.

ಕಂಬಾರರ ಕಾವ್ಯ ಹಾಗೂ ನಾಟಕಗಳಲ್ಲಿ ಹೆಣ್ಣಿನ ಲೈಂಗಿಕತೆಯ ಪಾತ್ರಗಳ ಚಿತ್ರಣಗಳಿಂದ ಹೆಣ್ಣಿನ ಘನತೆಗೆ ಧಕ್ಕೆ ಬರೋದಿಲ್ವೇ? ಹೆಣ್ಣು ಭೋಗದ ವಸ್ತುವೇ? ಎಂಬ ವನಮಾಲ ಸಂಪನ್ನ ಕುಮಾರ್‌ ಅವರ ಪ್ರಶ್ನೆಗೆ ಉತ್ತರಿಸಿ, ಯಾವ ರೂಪಕವಾಗಿ ಹೆಣ್ಣನ್ನು ಬಳಸಿಕೊಳ್ಳಲಾಗಿದೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸ್ತ್ರೀ ಬದುಕು ಕಟ್ಟುವ ಶಕ್ತಿ....

ಪುರುಷ ಅಹಂಕಾರಿ. ಮಹಿಳೆ ಸೃಜನ ಶಕ್ತಿ. ಪುರುಷ ಸೂರ್ಯ ಪಂಥವಾದರೆ, ಸ್ತ್ರೀ ಚಂದ್ರ ಪಂಥ. ಕುಟುಂಬ, ಹಳ್ಳಿ, ಪಟ್ಟಣ ಎಲ್ಲವನ್ನು ಕಟ್ಟಿದ್ದು ಮಹಿಳೆಯೇ ಹೊರತು ಪುರುಷನಲ್ಲ. ಈತನೇನಿದ್ದರೂ ಯುದ್ಧ ಗೆಲ್ಲಬೇಕು. ನಾನು ಆಳಲು ಬಂದಿದ್ದೇನೆ ಎಂದುಕೊಂಡವನು. ಈ ಎಲ್ಲ ಸ್ತ್ರೀ ಬದುಕಿನ ಮಹತ್ವದ ಗುಣಗಳು ನನಗೆ ಕಾವ್ಯ, ಕಥೆಗಳನ್ನು ಕಟ್ಟಲು ಪ್ರೇರಕ ಎನಿಸಿತು ಎಂದು ಭಾರತಿ ಹೆಗಡೆ ಅವರ ಪ್ರಶ್ನೆಗೆ ಉತ್ತರಿಸಿದರು ಕಂಬಾರರು, ‘ಮಹಿಳೆ ಮರ ಇದ್ದಂತೆ. ಮರದಿಂದ ಲಕ್ಷಾಂತರ ಬೀಜ ಬಿದ್ದು ಅವು ಮತ್ತೆ ವೃಕ್ಷಗಳಾಗಿ ಬೆಳೆದುಕೊಳ್ಳುವಂತೆ ಸ್ತ್ರೀ ಕೂಡ ನಾನಾ ನೆಲೆಗಳಲ್ಲಿ ಆಸರೆಯಾದವಳು. ಈ ಕಾರಣಕ್ಕಾಗಿಯೇ ನಾನು ಹೆಚ್ಚಾಗಿ ಮಹಿಳೆಯ ಅಥವಾ ಸ್ತ್ರೀಯನ್ನು ಕಾವ್ಯದಲ್ಲಿ ಬಳಸಿಕೊಂಡಿರುವೆ’ ಎಂದರು.

ಕನ್ನಡ ಮಾತನಾಡಿ:

‘ನಿಮಗೆ ಇಂಗ್ಲಿಷ್‌ ಗೊತ್ತಿದ್ದರೂ ಕನ್ನಡ ಮಾತನಾಡಿ. ಹೊರ ದೇಶಕ್ಕೆ ಹೋದಾಗ ನಿಮ್ಮ ಗೆಳೆಯರು ಅಥವಾ ವಿದೇಶಿಯರ ಜೊತೆ ಸಂವಹನ ನಡೆಸುವಾಗ ಮೊದಲು ಕನ್ನಡ ಮಾತನಾಡಿ ನೋಡಿ. ಒಂದು ವೇಳೆ ಅವರಿಗೆ ಕನ್ನಡ ಗೊತ್ತಿಲ್ಲ ಎಂದಾದರೆ ಅವರಿಗೆ ಕಲಿಸಲು ಪ್ರಯತ್ನಿಸಿ. ನಿಮ್ಮ ಯೋಚನೆಗಳು, ಚಿಂತನೆಗಳು ಕನ್ನಡದಲ್ಲಿರಲಿ. ಆಗ ಹೇಗೆ ತಾನೇ ಕನ್ನಡ ಸತ್ತೀತು ಹೇಳುತ್ತೀರಿ ಎಂದು ಡಾ.ಕಂಬಾರ ಅವರು ಉಷಾಲ ಅವರಿಗೆ ಮರು ಪ್ರಶ್ನೆ ಹಾಕಿದರು.

ಜಾತಿ-ದೇವರುಗಳಿಂದ ಯುದ್ಧ ಆಗ್ಯಾವೇನ್ರೀ

ಬೇರೆ ದೇಶಗಳಲ್ಲಿ ಎರಡು ಜಾತಿಗಳು ಕೂಡಿರುವುದಿಲ್ಲ. ಸಾಕಷ್ಟುಗಲಭೆ, ಗಲಾಟೆಗಳಾಗುತ್ತವೆ. ಆದರೆ, ನಮ್ಮ ದೇಶದಲ್ಲಿ 66 ಸಾವಿರ ಜಾತಿಗಳಿವೆ. ಆದ್ರೂ ಎಲ್ರೂ ಕೂಡಿ ಬದುಕುತ್ತಿಲ್ಲವೇ? ನಾವೇನು ಯುದ್ಧಗಳನ್ನು ಮಾಡಿದ್ದೀವಾ ಎಂದು ಕವಿ ಚಂದ್ರಶೇಖರ ಕಂಬಾರ ಪ್ರಶ್ನಿಸಿದರು.

ಪದ್ಮಿನಿ ನಾಗರಾಜ್‌ ಅವರ ‘ಹೆಚ್ಚುತ್ತಿರುವ ಮತೀಯತೆಯ ಬಗ್ಗೆ ನೀವೆಷ್ಟುಆಲೋಚಿಸಿದ್ದೀರಿ?’ ಎಂಬ ಪ್ರಶ್ನೆಗೆ ಉತ್ತರಿಸಿ, ಸಾವಿರಾರು ಜಾತಿಗಳ ನಡುವೆಯೂ ನಾವು ಸೌಹಾರ್ದತೆಯಿಂದ ಬದುಕುತ್ತಿದ್ದೇವಲ್ಲಾ? ರಾಮಾಯಣದಲ್ಲಿ ಬರುವ ಹನುಮಂತ ಹಂಪಿಯವನು. ಆದರೆ ಮಹಾರಾಷ್ಟ್ರದವರು ಇವ ನಮ್ಮವ ಎನ್ನುತ್ತಿದ್ದಾರೆ ನೋಡಿ. ಇವ ನಮ್ಮವ ಎಂಬುದು ದೊಡ್ಡ ಗುಣವಲ್ಲವೇ ಎಂದು ಕೇಳಿದರು.

ಹಂಪಿ ಕನ್ನಡ ವಿವಿ ಕಟ್ಟಲು ಪ್ರೇರಣೆ ಏನು ಎಂದು ಡಾ.ಎಸ್‌.ಎಸ್‌.ಅಂಗಡಿ ಅವರ ಪ್ರಶ್ನೆಗೆ ಉತ್ತರಿಸಿದ ಕಮ್ಮಾರರು, ‘ಕನ್ನಡ ವಿವಿ ವಿದ್ಯೆ ಸೃಷ್ಟಿಯಾಗಬೇಕು ಎಂಬ ಉದ್ದೇಶವಿತ್ತು. ನಮ್ಮ ಪುಣ್ಯಕ್ಕೆ ಉತ್ತಮ ರಾಜಕಾರಣಿಗಳು ಸಿಕ್ಕರು. ಸರ್ಕಾರ ಸಹಾಯ ಮಾಡಿತು. ಎಲ್ಲರೂ ಸೇರಿ ವಿವಿ ಕಟ್ಟಿದೆವು’ ಎಂದರು.

ಸಂಗ್ಯಾ-ಬಾಳ್ಯ ನಾನು ಬರದದ್ದಲ್ರೀ

ಸಂಗ್ಯಾ-ಬಾಳ್ಯ ನಾಟಕ ನಾನು ಬರದದ್ದಲ್ಲ. ಅದು ಜಾನಪದ. ನಾನು ಹಾಗೂ ಕುರ್ತುಕೋಟಿ ಅವರು ಸೇರಿ ಸಂಭಾಷಣೆಯಷ್ಟೇ ಬರೆದಿದ್ದೇವೆ. ಸಂಗ್ಯಾ-ಬಾಳ್ಯ ಬಯಲಾಟವದು. ಅದರಲ್ಲಿ ಬ್ರಿಟಿಷರ ವಿರುದ್ಧದ ಮಾತುಗಳಿವೆ ಎಂಬ ಕಾರಣಕ್ಕೆ ಬ್ರಿಟಿಷರು ಬ್ಯಾನ್‌ ಮಾಡಿದ್ದರು. ಬಯಲಾಟ ನಡೆಯುವಾಗ ಪೊಲೀಸರು ಬರುತ್ತಿದ್ದರು. ಅವರು ಹೋದ ಬಳಿಕ ಬ್ರಿಟಿಷರ ವಿರುದ್ಧ ಧ್ವನಿ ಅಲ್ಲಿ ಕೇಳಿ ಬರುತ್ತಿತ್ತು ಎಂದು ಕಂಬಾರರು ತಿಳಿಸಿದರು.

-ಕೆ. ಎಂ ಮಂಜುನಾಥ್ ಡಿ ಕಗ್ಗಲ್