‘ಮೇ 25 ರ ಮಧ್ಯರಾತ್ರಿ 3 ಪುಟದ ಅನಾಮಧೇಯ ಪತ್ರವೊಂದು ತಮ್ಮ ಇ-ಮೇಲ್‌ಗೆ ಬಂದಿದ್ದು, ಅದರಲ್ಲಿ ಐಎಎಸ್ ಅಧಿಕಾರಿ ದಿವಂಗತ ಅನುರಾಗ್ ತಿವಾರಿ ನಿರ್ವಹಿಸುತ್ತಿದ್ದ ಇ-ಸ್ಕ್ಯಾಮ್ ಹಾಗೂ ಇತರೆ ಹಗರಣಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳಿವೆ. ಆದರೆ, ಸದ್ಯ ಅವುಗಳನ್ನು ಬಹಿರಂಗಪಡಿಸುವುದಿಲ್ಲ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಂ.ಎನ್. ವಿಜಯಕುಮಾರ್ ತಿಳಿಸಿದ್ದಾರೆ.
ಬೆಂಗಳೂರು (ಮೇ.29): ‘ಮೇ 25 ರ ಮಧ್ಯರಾತ್ರಿ 3 ಪುಟದ ಅನಾಮಧೇಯ ಪತ್ರವೊಂದು ತಮ್ಮ ಇ-ಮೇಲ್ಗೆ ಬಂದಿದ್ದು, ಅದರಲ್ಲಿ ಐಎಎಸ್ ಅಧಿಕಾರಿ ದಿವಂಗತ ಅನುರಾಗ್ ತಿವಾರಿ ನಿರ್ವಹಿಸುತ್ತಿದ್ದ ಇ-ಸ್ಕ್ಯಾಮ್ ಹಾಗೂ ಇತರೆ ಹಗರಣಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳಿವೆ. ಆದರೆ, ಸದ್ಯ ಅವುಗಳನ್ನು ಬಹಿರಂಗಪಡಿಸುವುದಿಲ್ಲ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಂ.ಎನ್. ವಿಜಯಕುಮಾರ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ರದಲ್ಲಿ ತಿವಾರಿ ತನಿಖೆ ನಡೆಸುತ್ತಿದ್ದ ಹಗರಣಗಳು, ನಷ್ಟದ ಮಾಹಿತಿ, ಅದಕ್ಕೆ ಯಾರು ಕಾರಣ ಎಂಬ ಮಹತ್ವದ ದಾಖಲೆಗಳಿವೆ. ತಿವಾರಿ ಅವರು ವಿವಿಧ ಹಗರಣಗಳ ಬೆನ್ನುಬಿದ್ದಿದ್ದರು. ತನಿಖೆಯಲ್ಲಿ ಐವರು ಸರ್ಕಾರಿ ಹಾಗೂ ಒಬ್ಬ ಐಎಎಸ್ ಅಧಿಕಾರಿಯಿಂದ ₹450 ಕೋಟಿ ನಷ್ಟ ಉಂಟಾಗಲು ಕಾರಣವಾಗಿತ್ತು ಎಂಬ ಮಾಹಿತಿ ಇದೆ. ಈ ಸಂಬಂಧ ಉತ್ತರ ಪ್ರದೇಶದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ರಾಜ್ಯಕ್ಕೆ ಸಿಬಿಐ ತನಿಖಾಧಿಕಾರಿಗಳು ಬಂದಲ್ಲಿ ಸಂಗ್ರಹಿತ ದಾಖಲೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಆ ಪತ್ರ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಾಕಷ್ಟು ಪುಷ್ಟಿ ನೀಡುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ತಿವಾರಿ ಅವರ ಕೊಲೆ ಪ್ರಕರಣ ದಿಕ್ಕು ತಪ್ಪುತ್ತಿದ್ದು ಇದಕ್ಕೆ ಬೆಂಗಳೂರು ಹಾಗೂ ಉತ್ತರ ಪ್ರದೇಶ ಪೊಲೀಸರು ಕಾರಣರಾಗಿದ್ದಾರೆ. ತಿವಾರಿ ಅವರ ಬಳಿ ಇದ್ದ ಎರಡು ಮೊಬೈಲ್ಗಳಲ್ಲಿ ಮಾಹಿತಿಗಳಿಂದ ತನಿಖೆಗೆ ಸಾಕಷ್ಟು ಸಾಕ್ಷಿ ಹಾಗೂ ಪುರಾವೆ ಸಿಗುವ ಸಾಧ್ಯತೆ ಇತ್ತು. ಆದರೆ, ಪೊಲೀಸರು ಒಂದು ಮೊಬೈಲ್ನ ಡಾಟಾವನ್ನು ನಾಶಪಡಿಸಿದ್ದಾರೆ. ಮತ್ತೊಂದು ಮೊಬೈಲ್ನ್ನು ಲಾಕ್ ಮಾಡಿ ಅವರ ಕುಟುಂಬದ ಸದಸ್ಯರಿಗೆ ನೀಡಲಾಗಿದೆ. ಈ ಬಗ್ಗೆ ಅವರ ಕುಟುಂಬ ಸದಸ್ಯರಿಂದಲೇ ಮಾಹಿತಿ ಲಭ್ಯವಾಗಿದೆ.
ಈ ನಡುವೆ ಜೀವ ಬೆದರಿಕೆ ವಿಚಾರವಾಗಿ ಬೀದರ್ನಲ್ಲಿರುವ ತಿವಾರಿ ಅವರ ಕಾರು ಚಾಲಕನ ವಿಚಾರಣೆ ನಡೆಸಲಾಗಿದ್ದು, ಆತನಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ, ಅದೇ ಜಿಲ್ಲೆಯ ಮಹಿಳಾ ಅಧಿಕಾರಿಯೊಬ್ಬರು ತಿವಾರಿಗೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದರೂ ಅವರನ್ನು ಈವರೆಗೆ ಯಾರೂ ಸಂಪರ್ಕಿಸದೇ ಇರುವುದು ಸಂಶಯಕ್ಕೆ ಕಾರಣವಾಗಿವೆ. ಆಹಾರ ಇಲಾಖೆಯಲ್ಲಿ ಒಂದು ವರ್ಷದಲ್ಲಿ ನಾಲ್ಕು ಜನ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಉದ್ದೇಶವೇನು? ಈ ರೀತಿ ವರ್ಗಾವಣೆಗೆ ಒಳಗಾದ ಅಧಿಕಾರಿಗಳು ಯಾಕೆ ದನಿ ಎತ್ತಲಿಲ್ಲ? ಎಂಬ ಬಗ್ಗೆಯೂ ಕುತೂಹಲವಿದೆ ಎಂದರು.
