ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಧಾರ್ಮಿಕ ಪಂಥದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡುತ್ತಲೇ, ಗುರ್ಮೀತ್‌ನಷ್ಟೇ ಸುದ್ದಿಯಾಗಿರುವುದು ಸದಾ ಆತನ ಜೊತೆಗೇ ಇರುವ ಮಹಿಳೆ. ಹನಿಪ್ರೀತ್ ಎಂಬ ಈ ಮಹಿಳೆ ತನ್ನ ‘ದತ್ತುಪುತ್ರಿ’ ಎಂದು ಗುರ್ಮೀತ್ ಹೇಳಿಕೊಂಡೇ ಬಂದಿದ್ದನಾದರೂ, ಅವರಿಬ್ಬರ ನಡವಳಿಕೆಗಳು ಮಾತ್ರ ಬೇರೆಯದ್ದೇ ಕಥೆ ಹೇಳುತ್ತಿವೆ.

ಸಿರ್ಸಾ/ನವದೆಹಲಿ(ಆ.29): ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಧಾರ್ಮಿಕ ಪಂಥದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡುತ್ತಲೇ, ಗುರ್ಮೀತ್‌ನಷ್ಟೇ ಸುದ್ದಿಯಾಗಿರುವುದು ಸದಾ ಆತನ ಜೊತೆಗೇ ಇರುವ ಮಹಿಳೆ. ಹನಿಪ್ರೀತ್ ಎಂಬ ಈ ಮಹಿಳೆ ತನ್ನ ‘ದತ್ತುಪುತ್ರಿ’ ಎಂದು ಗುರ್ಮೀತ್ ಹೇಳಿಕೊಂಡೇ ಬಂದಿದ್ದನಾದರೂ, ಅವರಿಬ್ಬರ ನಡವಳಿಕೆಗಳು ಮಾತ್ರ ಬೇರೆಯದ್ದೇ ಕಥೆ ಹೇಳುತ್ತಿವೆ.

ಮೇಲ್ನೋಟಕ್ಕಷ್ಟೇ ಅವರಿಬ್ಬರು ಅಪ್ಪ- ಮಗಳು. ಆದರೆ ಅವರಿಬ್ಬರ ನಡುವೆ ಅಕ್ರಮ ಸಂಪರ್ಕ ಇದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಆರೋಪ ಮಾಡಿರುವುದು ಬೇರಾರೂ ಅಲ್ಲ. ಸ್ವತಃ ಹನಿಪ್ರೀತ್‌'ಳ ಪತಿಯೇ ಇಂಥದ್ದೊಂದು ಆರೋಪ ಮಾಡಿದ್ದಲ್ಲದೆ ಕೋರ್ಟ್ ಮೆಟ್ಟಿಲೇರಿದ್ದ. ಹೀಗಾಗಿ ಈ ನಕಲಿ ಬಾಬಾ ಮತ್ತು ಆತನ ದತ್ತುಪುತ್ರಿಯ ಸಂಬಂಧಗಳ ಬಗ್ಗೆ ಹಲವು ಅನುಮಾನಗಳು ಮೂಡಿವೆ.

ತಾನೇ ಮದುವೆ ಮಾಡಿಸಿದ್ದ:

ಹನಿಪ್ರೀತ್‌'ಳ ಮೂಲ ಹೆಸರು ಪ್ರಿಯಾಂಕಾ ತನೇಜ. ಈಕೆ ಹರ್ಯಾಣದ ಹಿಸಾರ್ ಜಿಲ್ಲೆಯ ತೇಹಾಬಾದ್‌'ನವರು. ತಮ್ಮ ಆಶ್ರಮದ ಜತೆ ಸಂಪರ್ಕ ಹೊಂದಿದ್ದ ವಿಶ್ವಾಸ್ ಗುಪ್ತಾ ಜತೆ 1999ರ ಫೆ.14ರಂದು ಪ್ರಿಯಾಂಕಾಳ ವಿವಾಹವನ್ನು ರಾಮ್ ರಹೀಂನೇ ಮುಂದೆ ನಿಂತು ಮಾಡಿಸಿದ್ದ. ಈ ಮಧ್ಯೆ ತನಗೆ ಅತ್ತೆ- ಮಾವ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು 2009ರಲ್ಲಿ ಪ್ರಿಯಾಂಕಾ ದೂರು ಹೊತ್ತು ತಂದಳು. ಆಗ ಆಕೆಯನ್ನು ದತ್ತು ಪುತ್ರಿಯಾಗಿ ಸ್ವೀಕರಿಸುವುದಾಗಿ ಘೋಷಿಸಿದ ರಾಮ್ ರಹೀಂ ಸಿಂಗ್, ಆಕೆಯ ಹೆಸರನ್ನು ಹನಿಪ್ರೀತ್ ಇನ್ಸಾನ್ ಎಂದು ಬದಲಿಸಿದ. ದೊಡ್ಡ ಪಾರ್ಟಿಯೊಂದನ್ನು ಆಯೋಜಿಸಿ ವಿಶ್ವಾಸ್ ಗುಪ್ತಾನನ್ನು ಅಳಿಯನನ್ನಾಗಿ ಸ್ವೀಕರಿಸಿದ. ಇದರಿಂದ ವಿಶ್ವಾಸ್ ಗುಪ್ತಾ ಉಬ್ಬಿ ಹೋದ.

ಆಶ್ರಮದಲ್ಲಿ ಭಾರಿ ಮರ್ಯಾದೆ ಸಿಗುತ್ತಿತ್ತು. ಉದ್ಯಮ ವ್ಯವಹಾರದಲ್ಲೂ ತುಂಬಾ ಅನುಕೂಲವಾಯಿತು. ಆದರೆ 2011ರ ಮೇನಲ್ಲಿ ರಾಮ್ ರಹೀಂ ತಂಗುವ ಕೋಣೆಗೆ ಗುಪ್ತಾ ಅಚಾನಕ್ ಆಗಿ ಹೋದಾಗ ಅಲ್ಲಿ ರಾಮ್ ರಹೀಂ ಆಕ್ಷೇಪಾರ್ಹ ಭಂಗಿಯಲ್ಲಿ ಹನಿಪ್ರೀತ್ ಜತೆಗಿದ್ದುದ್ದು ಕಂಡುಬಂದಿತ್ತು. ತನ್ನ ಅವಾಂತರವನ್ನು ಗುಪ್ತಾ ನೋಡಿದ್ದನ್ನು ತಿಳಿದ ರಾಮ್ ರಹೀಂ ಸಿಂಗ್, ವಿಷಯ ಬಾಯಿಬಿಟ್ಟರೆ ಸರಿ ಹೋಗುವುದಿಲ್ಲ ಎಂದು ಧಮಕಿ ಹಾಕತೊಡಗಿದ.

ರಾಮ್ ರಹೀಂ ಎಲ್ಲಿಗೇ ಹೋದರೂ ಹನಿಪ್ರೀತ್ ಹಾಗೂ ವಿಶ್ವಾಸ್ ಹೋಗುತ್ತಿದ್ದರು. ವಿಶ್ವಾಸ್ ಅವರನ್ನು ಬೇರೊಂದು ಕೊಠಡಿಯಲ್ಲಿ ತಂಗಲು ಹೇಳಿ ಹನಿಪ್ರೀತ್‌'ರನ್ನು ಬಾಬಾ ತನ್ನ ರೂಂನಲ್ಲೇ ಇರಿಸಿಕೊಳ್ಳುತ್ತಿದ್ದ. ಅದು ಯಾಕೆ ಎಂಬುದು ಅಷ್ಟರಲ್ಲಿ ವಿಶ್ವಾಸ್‌'ಗೆ ಅರಿವಾಯಿತು.

ಈ ಹಿನ್ನೆಲೆಯಲ್ಲಿ 2011ರಲ್ಲಿ ಹೈಕೋರ್ಟ್ ಮೊರೆ ಹೋದ ವಿಶ್ವಾಸ ಗುಪ್ತಾ, ತಮ್ಮ ಪತ್ನಿಯನ್ನು ವಾಪಸ್ ಕೊಡಿಸುವಂತೆ ಕೇಳಿಕೊಂಡರು. ಆದರೆ ಬಾಬಾ ಭಕ್ತರ ಬೆದರಿಕೆ ಹೆಚ್ಚಿತು. ಬಳಿಕ ಬಹಿರಂಗವಾಗಿ ಅವರು ಕ್ಷಮೆ ಕೇಳುವಂತಾಯಿತು ಎಂದು ವರದಿಗಳು ತಿಳಿಸಿವೆ.

ರಾಮ್ ರಹೀಂಗೆ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರ ಇದ್ದಾನೆ. ಅವರೆಲ್ಲರಿಗಿಂತ ಹನಿಪ್ರೀತ್ ಜತೆಗೇ ಬಾಬಾ ಒಡನಾಟ ಹೊಂದಿದ್ದಾನೆ. ಸಿನಿಮಾ, ಆಶ್ರಮ ಸೇರಿ ಎಲ್ಲ ವ್ಯವಹಾರಗಳಲ್ಲೂ ಪ್ರಭಾವ ಹೊಂದಿರುವ ಹನಿಪ್ರೀತ್, ಡೇರಾ ಸಚ್ಚಾ ಸೌದಾ ಪಂಥದಲ್ಲಿ ಬಾಬಾನ ಉತ್ತರಾಧಿಕಾರಿ ಎನ್ನುವ ಹಂತಕ್ಕೆ ಬೆಳೆದು ನಿಂತಿದ್ದಾಳೆ. ಇವೆಲ್ಲಾ ಗುಪ್ತಾ ಆರೋಪಕ್ಕೆ ಇಂಬು ನೀಡುವಂತಿವೆ ಎಂಬ ವಿಶ್ಲೇಷಣೆಗಳಿವೆ.