ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೇರಿದಂತೆ ಯಾವುದೇ ನಾಯಕರು ಬಂದು ಚುನಾವಣೆ ಪ್ರಚಾರ ಮಾಡಲಿ. ನಾವು ಹೆದರಲ್ಲ. ಬಿಜೆಪಿಯ​ವರು ಅವಧಿಗೂ ಮೊದಲೇ ಚುನಾವಣೆ ನಡೆಯಲಿದೆ ಎಂದು ಬೇಕೆಂದೇ ಗೊಂ​ದಲ ಸೃಷ್ಟಿಸುತ್ತಿದ್ದಾರೆ ಎಂದು ಮುಖ್ಯ​ಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು(ಜೂ.26): ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೇರಿದಂತೆ ಯಾವುದೇ ನಾಯಕರು ಬಂದು ಚುನಾವಣೆ ಪ್ರಚಾರ ಮಾಡಲಿ. ನಾವು ಹೆದರಲ್ಲ. ಬಿಜೆಪಿಯ​ವರು ಅವಧಿಗೂ ಮೊದಲೇ ಚುನಾವಣೆ ನಡೆಯಲಿದೆ ಎಂದು ಬೇಕೆಂದೇ ಗೊಂ​ದಲ ಸೃಷ್ಟಿಸುತ್ತಿದ್ದಾರೆ ಎಂದು ಮುಖ್ಯ​ಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ, ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ನಿಗದಿಯಂತೆ 2018 ಏಪ್ರಿಲ್‌ ಅಥವಾ ಮೇನಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಆ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.

ಅಮಿತ್‌ ಶಾ ರಾಜ್ಯದಲ್ಲಿ ಉಳಿದು​ಕೊಂಡು ಏನೇ ಚುನಾವಣೆ ತಂತ್ರಗಾರಿಕೆ ಮಾಡಿಕೊಳ್ಳಲಿ. ಅದಕ್ಕೂ ನಮಗೂ ಸಂಬಂಧವಿಲ್ಲ. ಮುಂದಿನ ಚುನಾವಣೆಗೆ ಎಲ್ಲಾ ರೀತಿಯಿಂದಲೂ ನಾವು ಸಿದ್ಧತೆ ಮಾಡಿಕೊಳ್ಳುತ್ತೇವೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿಯನ್ನು ‘ಚತುರ ಬನಿಯಾ' ಎಂದು ಕರೆದವರು ದೇಶ ಆಳಲು ಯೋಗ್ಯರಲ್ಲ ಎಂದರು.

ನಾಟಕ: ಬಿಜೆಪಿ ಮುಖಂಡರು ದಲಿತರ ಕಾಲೋನಿಗಳಿಗೆ ಭೇಟಿ ನೀಡಿ ಉಪಾಹಾರ ಮಾಡುವ ನಾಟಕ ಮಾಡುತ್ತಿದ್ದಾರೆ. ದಲಿತ ವಿರೋಧಿಗಳು ಮಾತ್ರ ಈ ರೀತಿ ಮಾಡುತ್ತಾರೆ. ಹೋಟೆಲ್‌ ತಿಂಡಿ ದಲಿತರ ಮನೆಯಲ್ಲಿ ತಿಂದರೆ ದಲಿತರು ಉದ್ಧಾರ ಆಗಲ್ಲ. ತಮ್ಮ ಮಕ್ಕಳನ್ನು ದಲಿತರಿಗೆ ಮದುವೆ ಮಾಡಿಕೊಡಿ ಆಗ ತಾನಾಗಿಯೇ ಜಾತೀಯತೆ ಅಳಿಯಲಿದೆ ಎಂದರು.

ಪ್ರಧಾನಿ ಮುಂದೆ ತುಟಿ ಬಿಚ್ಚಲಿಲ್ಲ: ಬರಗಾಲದ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನಾ ಮಾಡುವಂತೆ ಪ್ರಧಾನಿ ಮೋದಿ ಬಳಿಗೆ ಹೋದ ನಿಯೋಗದಲ್ಲಿ ನನ್ನೊಂದಿಗೆ ಬಿಎಸ್‌ವೈ, ಅನಂತಕುಮಾರ್‌, ಶೆಟ್ಟರ್‌, ಈಶ್ವರಪ್ಪ, ಸದಾನಂದಗೌಡ ಅವರೂ ಇದ್ದರು. ರೈತರ ಸಾಲ ಮನ್ನಾ ಬಗ್ಗೆ ಮಾತನಾಡಿ ಎಂದು ಒತ್ತಿ ಹೇಳಿದರೂ ಜಪ್ಪಯ್ಯ ಅಂದರೂ ತುಟಿ ಬಿಚ್ಚಲಿಲ್ಲ. ಇಂಥವರಿಗೆ ರೈತರ ಬಗ್ಗೆ ಮಾತನಾಡುವ ನೈತಿಕತೆ ಕಿಂಚಿತ್ತೂ ಇಲ್ಲ. ಈಗ ಸಾಲ ಮನ್ನಾ ಮಾಡಿ ಎನ್ನುತ್ತಿದ್ದಾರೆ. ಇಂಥ ಡೋಂಗಿ ರಾಜಕಾರಣ ಬಹಳ ದಿನ ನಡೆಯಲ್ಲ ಎಂದು ಹರಿಹಾಯ್ದರು.

ಬಿಎಸ್‌ವೈ ಸಿಎಂ ಆಗಿದ್ದಾಗ ಸಾಲ​ಮನ್ನಾ ಮಾಡಲು ನಾನೇನು ನೋಟ್‌ ಪ್ರಿಂಟಿಂಗ್‌ ಮಷಿನ್‌ ಇಟ್ಟುಕೊಂಡಿಲ್ಲ ಎಂದಿದ್ದರು. ಬಿಜೆಪಿ ಮುಖಂಡರ ಮನೆ​ಗಳಲ್ಲಿ ನೋಟ್‌ ಪ್ರಿಂಟಿಂಗ್‌ ಮಷಿನ್‌​ಗಳು ಇಲ್ಲದಿರಬಹುದು. ನೋಟುಗಳನ್ನು ಎಣಿಸುವ ಯಂತ್ರಗಳಿವೆ. ತಮ್ಮ ಮನೆಯಲ್ಲಿ ನೋಟ್‌ ಎಣಿಸುವ 2 ಮಷಿನ್‌ಗಳಿವೆ ಎಂದು ಈಶ್ವರಪ್ಪ ಅವರೇ ಹೇಳಿಕೊಂಡಿದ್ದಾರೆ. ನಾನು ನೋಟು ಎಣಿಸುವ ಯಂತ್ರಗಳನ್ನು ನಾನು ಇಟ್ಟುಕೊಳ್ಳುವುದಿಲ್ಲ. ನಾನು ಯಾವುದೇ ಭ್ರಷ್ಟಾಚಾರ ಎಸಗಿಲ್ಲ ಎಂದರು.