ಲೈಂಗಿಕ ಕಿರುಕುಳ ನೀಡಿದ ನಿರ್ಮಾಪಕನ ಹೆಸರು ಬಹಿರಂಗಪಡಿಸುವುದಿಲ್ಲ ಎಂದು ಶೃತಿ ಹರಿಹರನ್

news | Tuesday, February 27th, 2018
Suvarna Web Desk
Highlights

‘ಕಾಸ್ಟಿಂಗ್ ಕೌಚ್’ ಕುರಿತ ಹೇಳಿಕೆಗೆ ನಾನು ಈಗಲೂ ಬದ್ಧ. ಆದರೆ ‘ಕಾಸ್ಟಿಂಗ್ ಕೌಚ್’ ಹೆಸರಲ್ಲಿ ನನಗೆ ಲೈಂಗಿಕ ಕಿರುಕುಳ ನೀಡಿದ ನಿರ್ಮಾಪಕನ ಹೆಸರು ಬಹಿರಂಗ ಪಡಿಸಲು ನಾನು ಇಚ್ಛಿಸುವುದಿಲ್ಲ. ಆತನ ವಿರುದ್ಧ ದೂರು ನೀಡುವ ಅಗತ್ಯವೂ ನನಗೀಗ ಮುಖ್ಯವಲ್ಲ. ಒಂದು ವೇಳೆ ನಾನು ಹಾಗೆ ಮಾಡಿದರೆ, ಇದುವರೆಗೂ ಆ ನಿರ್ಮಾಪಕನ ಸಿನಿಮಾಗಳಲ್ಲಿ ಕೆಲಸ ಮಾಡಿದ ನಟಿಯರ ಬಗ್ಗೆ ಕೆಟ್ಟ ಅಭಿಪ್ರಾಯ ಬರಬಹುದು ಎನ್ನುವ ಆತಂಕ ನನ್ನದು. - ಹೀಗೆ ಹೇಳಿದ್ದು ಶ್ರುತಿ ಹರಿಹರನ್.

ಬೆಂಗಳೂರು (ಫೆ. 27): ‘ಕಾಸ್ಟಿಂಗ್ ಕೌಚ್’ ಕುರಿತ ಹೇಳಿಕೆಗೆ ನಾನು ಈಗಲೂ ಬದ್ಧ. ಆದರೆ ‘ಕಾಸ್ಟಿಂಗ್ ಕೌಚ್’ ಹೆಸರಲ್ಲಿ ನನಗೆ ಲೈಂಗಿಕ ಕಿರುಕುಳ ನೀಡಿದ ನಿರ್ಮಾಪಕನ ಹೆಸರು ಬಹಿರಂಗ ಪಡಿಸಲು ನಾನು ಇಚ್ಛಿಸುವುದಿಲ್ಲ. ಆತನ ವಿರುದ್ಧ ದೂರು ನೀಡುವ ಅಗತ್ಯವೂ ನನಗೀಗ ಮುಖ್ಯವಲ್ಲ. ಒಂದು ವೇಳೆ ನಾನು ಹಾಗೆ ಮಾಡಿದರೆ, ಇದುವರೆಗೂ ಆ ನಿರ್ಮಾಪಕನ ಸಿನಿಮಾಗಳಲ್ಲಿ ಕೆಲಸ ಮಾಡಿದ ನಟಿಯರ ಬಗ್ಗೆ ಕೆಟ್ಟ ಅಭಿಪ್ರಾಯ ಬರಬಹುದು ಎನ್ನುವ ಆತಂಕ ನನ್ನದು. - ಹೀಗೆ ಹೇಳಿದ್ದು ಶ್ರುತಿ ಹರಿಹರನ್.

ಮಂಸೋರೆ ನಿರ್ದೇಶನದ ‘ನಾತಿ ಚರಾಮಿ’ ಚಿತ್ರದ ಮುಹೂರ್ತ ಸಂದರ್ಭದಲ್ಲಿ ‘ಕಾಸ್ಟಿಂಗ್ ಕೌಚ್’ ಕುರಿತು ಅವರು ನೀಡಿದ್ದ ಹೇಳಿಕೆಯ ನಂತರದ ವಿದ್ಯಮಾನಗಳಿಗೆ ಪ್ರತಿಕ್ರಿಯಿಸಿದರು. ‘ನಾನು 18 ವರ್ಷದಲ್ಲಿದ್ದಾಗ ಆದ ಅನುಭವ ಅದು. ಅಂದರೆ ಐದು ವರ್ಷಗಳ ಹಿಂದಿನ ಘಟನೆ. ನಾನು ಡಾನ್ಸರ್ ಆಗಿ ಇಲ್ಲಿಗೆ ಬಂದವಳು. ಆಗ ಅವಕಾಶಕ್ಕೆ ಎದುರು ನೋಡುತ್ತಿದ್ದೆ. ಕನ್ನಡದ  ಹೆಸರಾಂತ ನಿರ್ಮಾಪಕರೊಬ್ಬರಿಂದ ನನಗೆ ‘ಕಾಸ್ಟಿಂಗ್ ಕೌಚ್’ ಅನುಭವ ಆಯಿತು. ಯಾರೋ ಮಧ್ಯವರ್ತಿಯೊಬ್ಬ ಆ ವಿಚಾರ ಬಂದು ಹೇಳಿದಾಗ ಶಾಕ್ ಆಯಿತು. ಭಯವೂ ಆಯಿತು. ಕೋಪದಿಂದ ತಿರಸ್ಕರಿಸಿ ಬಂದಿದ್ದೆ ಎನ್ನುವುದಾಗಿ ನಾನು ರಾಷ್ಟ್ರ ಮಟ್ಟದ ಖಾಸಗಿ ವಾಹಿನಿ ಸಂದರ್ಶನದಲ್ಲಿ ಹೇಳಿದ್ದೆ. ಅದು ಬೇರೆಯದೇ ರೀತಿಯಲ್ಲಿ ಸುದ್ದಿಯಾಯಿತು. ಹಲವು
ವಿದ್ಯಮಾನಗಳಿಗೂ ಕಾರಣವಾಯಿತು. ಅದರೂ ನಾನು ಈಗಲೂ ಆ ಹೇಳಿಕೆಗೆ ಬದ್ಧ’ ಎಂಬುದಾಗಿ ನಟಿ ಶ್ರುತಿ ಸ್ಪಷ್ಟಪಡಿದರು.
 

ಸಮಸ್ಯೆ ಎದುರಿಸುವಷ್ಟು ಗಟ್ಟಿಯಾಗಿದ್ದೇನೆ: 
ಶ್ರುತಿ ಅವರು ಈ ಹೇಳಿಕೆ ನೀಡಿದಾಗ ಈಗ ಈ ಕತೆ ಹೇಳಿದ್ದು ಯಾಕೆ ಮತ್ತು ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ್ದರ ಔಚಿತ್ಯವೇನು ಎಂಬ ಪ್ರಶ್ನೆ ಕೇಳಿಬಂದಿತ್ತು. ಅದಕ್ಕೂ ಶ್ರುತಿ  ಪ್ರತಿಕ್ರಿಯಿಸಿದ್ದಾರೆ. ‘ಯಾವುದೇ ಸಮಸ್ಯೆ ಎದುರಿಸುವುದಕ್ಕೆ ಒಂದಷ್ಟು ಮಾನಸಿಕ ಸಿದ್ಧತೆ ಬೇಕು. ಗಟ್ಟಿತನ ಇರಬೇಕು. ಈಗ ನಾನು ಅ ಹಂತಕ್ಕೆ ಬಂದಿದ್ದೇನೆ. ನನಗೂ ಒಂದಷ್ಟು ಜವಾಬ್ದಾರಿ ಅನ್ನೋದು ಬಂದಿದೆ. ಸಾಮಾಜಿಕ ಹೊಣೆಗಾರಿಕೆಯಿದೆ. ಈ ನಿಟ್ಟಿನಲ್ಲಿಯೇ ಈ ಹೇಳಿಕೆ ನೀಡಿದ್ದೇನೆ. ಮಾತನಾಡಿದ್ದು ಯಾವಾಗ ಎನ್ನುವುದಕ್ಕಿಂತ ನಟಿಯರಿಗೆ ಇಂತಹ ಸಮಸ್ಯೆಗಳು ಎದುರಾಗಿಯೋ ಇಲ್ಲವೋ ಎನ್ನುವುದು ಮುಖ್ಯ’ ಎನ್ನುತ್ತಾರೆ ಶ್ರುತಿ.

ಹೆಸರು ಬಹಿರಂಗಪಡಿಸಲಾರೆ: ಇದೇ ಸಂದರ್ಭದಲ್ಲಿ ಇಷ್ಟೆಲ್ಲಾ ಮಾತನಾಡುವಾಗ ಲೈಂಗಿಕ ಕಿರುಕುಳ ನೀಡಿದ ನಿರ್ಮಾಪಕನ ಹೆಸರನ್ನು ಬಹಿರಂಗ ಪಡಿಸಬಹುದಲ್ಲ ಎಂಬ ಪ್ರಶ್ನೆ ಎದುರಾಯಿತು. ಅದಕ್ಕೆ ಶ್ರುತಿ, ‘ಆತನ ಹೆಸರು ನಾನ್ಯಾಕೆ ಹೇಳಬೇಕೆನ್ನುವುದು ನನ್ನ ಪ್ರಶ್ನೆ. ಅಂತಹ ವ್ಯಕ್ತಿಗಳಿಗೆ ಶಿಕ್ಷೆ ಅಗಬೇಕು. ಮುಂದೆ ಇಂತಹ ಘಟನೆಗಳು ಆಗಬಾರದು ಅನ್ನೋ ಕಾಳಜಿ ನನಗೂ ಇದೆ. ಆದರೆ ಬೇರೆಯವರಿಗೆ ತೊಂದರೆ ಆಗುತ್ತದೆ ಅನ್ನೋ ಕಾರಣಕ್ಕೆ ಆ ನಿರ್ಮಾಪಕನ ಹೆಸರನ್ನು ಬಹಿರಂಗ ಪಡಿಸಲ್ಲ’ ಎಂದರು.
‘ಮುಂದೆ ಸಮಾನ ಮನಸ್ಸುಗಳನ್ನು ಒಟ್ಟಾಗಿಸಿ, ಇಂತಹ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡಬೇಕು ಎನ್ನುವ ಉದ್ದೇಶವಿದೆ. ಸದ್ಯಕ್ಕೆ ಅದನ್ನೆಲ್ಲ ಹೇಗೆ ಮಾಡಬೇಕು ಅನ್ನೋದನ್ನು ಯೋಚಿಸುತ್ತಿದ್ದೇನೆ’ ಎನ್ನುವ ಶ್ರುತಿ ‘ಸದ್ಯಕ್ಕೀಗ ಚಿತ್ರೋದ್ಯಮದಲ್ಲಿ ‘ಕಾಸ್ಟಿಂಗ್ ಕೌಚ್’ ಅಷ್ಟಾಗಿ ಇಲ್ಲ. ಕನ್ನಡಕ್ಕಿಂತ ತಮಿಳಿನಲ್ಲಿ ಈ ಸಮಸ್ಯೆ ಜಾಸ್ತಿ ಇತ್ತು. ಈಗ ಬಹುತೇಕ ಎಲ್ಲಾ ಕಡೆ ಕಡಿಮೆಯಾಗಿದೆ. ಅಂತಲೂ ಖಾಸಗಿ ವಾಹಿನಿ ಸಂದರ್ಶನದ ವೇಳೆ ಹೇಳಿದ್ದೆ’ ಎಂಬುದಾಗಿಯೂ ಹೇಳುತ್ತಾರೆ.  

Comments 0
Add Comment

    ಹೇಗಿದೆ ಇಂದು ತೆರೆಕಂಡ "ಅಬ್ಬೆ ತುಮಕೂರ ಸಿದ್ಧಿಪುರುಷ ವಿಶ್ವಾರಾಧ್ಯರು"?

    video | Friday, April 13th, 2018