ಪುಷ್ಕರ್‌ :  ‘ನಾನು ಜನಿವಾರಧಾರಿ ಬ್ರಾಹ್ಮಣ’ ಎಂದು ಹೇಳಿ ಚರ್ಚೆಗೆ ಕಾರಣವಾಗಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ತಮ್ಮ ಜಾತಿಯ ಮೂಲ ಹಾಗೂ ಗೋತ್ರವನ್ನು ಬಹಿರಂಗಪಡಿಸಿದ್ದಾರೆ. ‘ನಾನು ಕೌಲ್‌ ಬ್ರಾಹ್ಮಣ ಹಾಗೂ ನನ್ನ ಗೋತ್ರ ದತ್ತಾತ್ರೇಯ’ ಎಂದು ರಾಹುಲ್‌ ಹೇಳಿದ್ದಾರೆ.

ಇತ್ತೀಚೆಗೆ ಬಿಜೆಪಿ ಮುಖಂಡರು ರಾಹುಲ್‌ ಗಾಂಧಿ ಅವರು ಬ್ರಾಹ್ಮಣ ಎಂದು ಹೇಳಿಕೊಳ್ಳುವುದಾದರೆ ಅವರ ಗೋತ್ರ ಯಾವುದು ಎಂದು ಜರಿದಿದ್ದರು. ಇದಕ್ಕೆ ರಾಹುಲ್‌ ಈಗ ಉತ್ತರ ನೀಡಿದ್ದಾರೆ.

ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ರಾಜಸ್ಥಾನದ ಪ್ರಸಿದ್ಧ ಶ್ರೀಕ್ಷೇತ್ರ ಪುಷ್ಕರ್‌ನ ಬ್ರಹ್ಮ ಮಂದಿರಕ್ಕೆ ಸೋಮವಾರ ಭೇಟಿ ನೀಡಿ ಪುಷ್ಕರಣಿಯಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ ಅವರಿಗೆ ಪುರೋಹಿತರು ರಾಹುಲ್‌ ಅವರ ‘ಕುಲ-ಗೋತ್ರ’ದ ಬಗ್ಗೆ ಕೇಳಿದರು. ಆಗ ರಾಹುಲ್‌ ಅವರು, ‘ನಾನು ಕೌಲ್‌ ಬ್ರಾಹ್ಮಣ. ನನ್ನ ಗೋತ್ರ ದತ್ತಾತ್ರೇಯ’ ಎಂದು ಉತ್ತರಿಸಿದರು. ಈ ವಿಷಯವನ್ನು ರಾಹುಲ್‌ ಅವರ ಕೈಯಿಂದ ಪೂಜೆ ಮಾಡಿಸಿದ ಪುರೋಹಿತರು ಖಚಿತಪಡಿಸಿದ್ದಾರೆ.

ಇದೇ ವೇಳೆ ರಾಹುಲ್‌ ಗಾಂಧಿ ಅವರ ಪೂರ್ವಜರಾದ ಮೋತಿಲಾಲ್‌ ನೆಹರು, ಪಂ. ಜವಾಹರಲಾಲ್‌ ನೆಹರು, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ಪುಷ್ಕರ್‌ ದೇವಾಲಯಕ್ಕೆ ಭೇಟಿ ನೀಡಿದಾಗ ಸಹಿ ಮಾಡಿದ್ದ ದಾಖಲೆ ಪತ್ರಗಳನ್ನು ಬ್ರಹ್ಮ ಪುರೋಹಿತರು ಬಹಿರಂಗಪಡಿಸಿದ್ದಾರೆ. 1991ರ ಮೇ 21ರಂದು ಹತ್ಯೆಯಾಗಿದ್ದ ರಾಜೀವ್‌ ಗಾಂಧಿ ಅವರು ತಮ್ಮ ಹತ್ಯೆಯ 19 ದಿನ ಮುನ್ನ (ಮೇ 2) ಪುಷ್ಕರ್‌ಗೆ ಭೇಟಿ ನೀಡಿದ್ದರು. ಆಗ ಅವರು ದೇವಾಲಯದ ಸಂದರ್ಶಕರ ಪಟ್ಟಿಯಲ್ಲಿ ತಮ್ಮ ಅನುಭವಗಳನ್ನು ದಾಖಲಿಸಿದ್ದರು. ಅದರಲ್ಲಿ ಕೂಡ ಗಾಂಧಿ ಕುಟುಂಬವು ‘ಕೌಲ್‌ ಬ್ರಾಹ್ಮಣ’ ಜಾತಿಗೆ ಸೇರಿದ್ದು, ಕುಟುಂಬದ ಗೋತ್ರ ‘ದತ್ತಾತ್ರೇಯ’ ಎಂದು ತಿಳಿದುಬಂದಿದೆ ಎಂದು ಅರ್ಚಕರು ಹೇಳಿದರು.

ಈ ನಡುವೆ, ತಮ್ಮ ಪುಷ್ಕರ್‌ ಭೇಟಿಯ ಬಗ್ಗೆ ದೇಗುಲದ ಸಂದರ್ಶಕರ ಪುಸ್ತಕದಲ್ಲಿ ಬರೆದಿರುವ ರಾಹುಲ್‌ ಗಾಂಧಿ, ‘ವಂದೇ ಮಾತರಂ! ರಾಜೀವ್‌ ಗಾಂಧಿ ಅವರ ಪುತ್ರ ರಾಹುಲ್‌ ಗಾಂಧಿ ಎಂಬುವನಾದ ನಾನು, 26/11/2018ರಂದು ಪುಷ್ಕರದಲ್ಲಿ ಪೂಜೆ ಮಾಡಿರುವೆ. ನನ್ನ ಕುಲಪುರೋಹಿತರಾದ ದೀನಾನಾಥ ಕೌಲ್‌ ಹಾಗೂ ರಾಜನಾಥ್‌ ಕೌಲ್‌ ಅವರ ಪೌರೋಹಿತ್ಯದಲ್ಲಿ ನಡೆದ ಪೂಜೆಯು ನನ್ನನ್ನು ಸಂತೋಷಗೊಳಿಸಿತು. ನಾನು ಭಾರತದ ಹಾಗೂ ವಿಶ್ವದ ಶಾಂತಿಗೆ ಪ್ರಾರ್ಥಿಸುವೆ’ ಎಂದು ಬರೆದಿದ್ದಾರೆ.

ಯಾರಿವರು ಕೌಲ್‌ ಬ್ರಾಹ್ಮಣರು?

ಕೌಲ್‌ ಬ್ರಾಹ್ಮಣರೆಂದರೆ ‘ಕಾಶ್ಮೀರಿ ಪಂಡಿತರು’. ಕಾಶ್ಮೀರದಲ್ಲಿನ ಪಂಡಿತರು ಬ್ರಾಹ್ಮಣ ಸಮುದಾಯದವರಾಗಿದ್ದು, ಕೌಲ್‌ ಎಂಬ ಉಪನಾಮ (ಅಡ್ಡಹೆಸರು) ಹೊಂದಿದ ಅನೇಕರು ಇದ್ದಾರೆ. ಈ ಸಮುದಾಯದಲ್ಲಿ ತಾವೂ ಒಬ್ಬರು ಎಂದು ರಾಹುಲ್‌ ಹೇಳಿದ್ದಾರೆ. ಇನ್ನು ಗೋತ್ರಗಳ ಪಟ್ಟಿಯನ್ನು ಗಮನಿಸಿದಾಗ ‘ದತ್ತಾತ್ರೇಯ’ ಗೋತ್ರ ಇರುವುದು ಖಚಿತವಾಗಿದ್ದು, ರಾಹುಲ್‌ ಹೇಳಿಕೆ ಮೇಲ್ನೋಟಕ್ಕೆ ನಿಜ ಎಂದು ಕಂಡುಬರುತ್ತದೆ.