ನಾನು ಜೈನನಲ್ಲ, ಹಿಂದೂ ವೈಷ್ಣವ: ಅಮಿತ್‌ ಶಾ

First Published 7, Apr 2018, 9:06 AM IST
I am a Hindu Vaishnav not Jain Says Amit Shah
Highlights

ತಮ್ಮನ್ನು ಜೈನ ಸಮುದಾಯಕ್ಕೆ ಸೇರಿದವರು ಎಂದು ಹೇಳಿದ್ದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ತಾವೊಬ್ಬ ವೈಷ್ಣವ ಹಿಂದೂ ಎಂದು ಹೇಳಿದ್ದಾರೆ. ಬಿಜೆಪಿಯ 38ನೇ ಸಂಸ್ಥಾಪನಾ ದಿನಾಚರಣೆ  ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಶಾ, ಈ ಸ್ಪಷ್ಟನೆ ನೀಡಿದ್ದಾರೆ.

ಮುಂಬೈ: ತಮ್ಮನ್ನು ಜೈನ ಸಮುದಾಯಕ್ಕೆ ಸೇರಿದವರು ಎಂದು ಹೇಳಿದ್ದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ತಾವೊಬ್ಬ ವೈಷ್ಣವ ಹಿಂದೂ ಎಂದು ಹೇಳಿದ್ದಾರೆ. ಬಿಜೆಪಿಯ 38ನೇ ಸಂಸ್ಥಾಪನಾ ದಿನಾಚರಣೆ  ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಶಾ, ಈ ಸ್ಪಷ್ಟನೆ ನೀಡಿದ್ದಾರೆ.

ಈ ಹಿಂದಿನ ಕರ್ನಾಟಕ ಪ್ರವಾಸದ ವೇಳೆ ಮಾತನಾಡಿದ್ದ ಅಮಿತ್‌ ಶಾ, ಸಿದ್ದರಾಮಯ್ಯ ‘ಅಹಿಂದ’ ನಾಯಕರಲ್ಲ, ಅವರು ‘ಅಹಿಂದು’ ನಾಯಕ ಎಂದು ಹೇಳಿಕೆ ನೀಡಿದ್ದರು. ಆ ಹೇಳಿಕೆಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ‘ಮೊದಲು ಶಾ ಅಹಿಂದುವೋ, ಅಲ್ಲವೋ ಎಂಬುದನ್ನು ಸ್ಪಷ್ಟಪಡಿಸಬೇಕು. ಅಮಿತ್‌ ಶಾ ಜೈನರು. ಮೊದಲು ಅವರು ಅಹಿಂದು ಹೌದೋ, ಅಲ್ಲವೋ ಎಂಬುದನ್ನು ಸ್ಪಷ್ಟಪಡಿಸಬೇಕು. ಜೈನ ಪ್ರತ್ಯೇಕ ಧರ್ಮ. ಅವರು ಹೇಗೆ ನನ್ನ ಬಗ್ಗೆ ಹಾಗೆಲ್ಲ ಮಾತನಾಡುತ್ತಾರೆ?’ ಎಂದು ಹೇಳಿದ್ದರು.

ಈ ಬಗ್ಗೆ ಶುಕ್ರವಾರ ಪತ್ರಕರ್ತರು ಪ್ರಶ್ನಿಸಿದ ವೇಳೆ ಉತ್ತರಿಸಿದ ಶಾ, ‘ನಾನು ಜೈನ ಅಲ್ಲ, ನಾನು ಹಿಂದೂ ವೈಷ್ಣವ’ ಎನ್ನುವ ಮೂಲಕ ಗೊಂದಲಗಳಿಗೆ ತೆರೆ ಎಳೆಯುವ ಯತ್ನಮಾಡಿದರು.

ವಿಭಜನೆ ಉದ್ದೇಶ: ಇದೇ ವೇಳೆ ‘ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಪ್ರಸ್ತಾಪ ಸಲ್ಲಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರ ಹಿಂದುಗಳ ವಿಭಜನೆಯ ಉದ್ದೇಶ ಹೊಂದಿದೆ ಎಂಬುದು ನನ್ನ ಅಭಿಪ್ರಾಯ’ ಎಂದು ಹೇಳಿದರು. ‘ಇದೇ ಶಿಫಾರಸನ್ನು 2013ರಲ್ಲಿ ಯುಪಿಎ ಸರ್ಕಾರ ತಿರಸ್ಕರಿಸಿತ್ತು. ಯಡಿಯೂರಪ್ಪ ಸಿಎಂ ಆಗುವುದನ್ನು ತಪ್ಪಿಸುವ ಏಕೈಕ ಉದ್ದೇಶದಿಂದ ಪ್ರಸ್ತುತ ನಿರ್ಧಾರ ಕೈಗೊಳ್ಳಲಾಗಿದೆ. ಇದೊಂದು ಚುನಾವಣಾ ಗಿಮಿಕ್‌’ ಎಂದು ತಿಳಿಸಿದರು.

loader