ಭಾರತ ಸೇರಿದಂತೆ ಒಟ್ಟು 20 ದೇಶಗಳ ಮುಂದೆ ಹೈಪರ್'ಲೂಪ್ ಯೋಜನೆಯ ಪ್ರಸ್ತಾವವಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಯನ್ನು ಪರಿಗಣಿಸುತ್ತಾರಾ ಎಂದು ಕಾದುನೋಡಬೇಕಷ್ಟೇ.

ಬೆಂಗಳೂರು(ಡಿ. 11): ಭಾರತದಲ್ಲಿ ಬುಲೆಟ್ ರೈಲು ಸಾಕಾರಗೊಳ್ಳುವ ಮುನ್ನವೇ ಹೈಪರ್ ಲೂಪ್ ಎಂಬ ಭವಿಷ್ಯದ ಸಾರಿಗೆ ವ್ಯವಸ್ಥೆಯ ಪ್ರೊಪೋಸಲ್ ಕೇಂದ್ರ ಸರಕಾರದ ಮುಂದಿದೆ. ಶೂನ್ಯ ವಾತಾವರಣದ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಹೈಪರ್'ಲೂಪ್ ತಂತ್ರಜ್ಞಾನ ಬುಲೆಟ್ ರೈಲಿಗಿಂತಲೂ ಸುರಕ್ಷಾ ಹಾಗೂ ಕಡಿಮೆ ವೆಚ್ಚದ ಪ್ರಾಜೆಕ್ಟ್ ಎನ್ನಲಾಗಿದೆ. ಹೈಪರ್'ಲೂಪ್ ಟ್ರಾನ್ಸ್'ಪೋರ್ಟೇಶನ್ ಟೆಕ್ನಾಲಜೀಸ್ ಸಂಸ್ಥೆಯ ಸಹ-ಸಂಸ್ಥಾಪಕ ಬಿಬೋಪ್ ಜಿ ಗ್ರೆಸ್ಟಾ ಅವರು ಜಾಗತಿಕ ತಂತ್ರಜ್ಞಾನ ಶೃಂಗಸಭೆಯ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಕುರಿತು ಅವರು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಜೊತೆ ಮಾತನಾಡಿದ್ದಾರೆ. ಹೈಪರ್'ಲೂಪ್ ಕಂಪನಿಯವರು ಈಗಾಗಲೇ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಯೋಜನೆಯ ಪ್ರಸ್ತಾಪ ಮಂಡಿಸಿದ್ದಾರೆ.

ಬುಲೆಟ್ ಟ್ರೈನ್'ಗಿಂತ ಇದು ಉತ್ತಮವಾ?
ಗಂಟೆಗೆ 200-700 ಕಿಮೀ ವೇಗದಲ್ಲಿ ಹೋಗುವ ಬುಲೆಟ್ ಟ್ರೈನ್ ಬಗ್ಗೆ ಕೆಲವಾರು ಆಕ್ಷೇಪಗಳಿವೆ. ರೈಲು ಹಳಿಯ ಮೇಲಿನ ಘರ್ಷಣೆಯಾಗುವುದು ಪ್ರಮುಖ ಸಮಸ್ಯೆ. ಬಿಬೋಪ್ ಗ್ರೆಸ್ಟಾ ಹೇಳುವ ಪ್ರಕಾರ ಗಂಟೆಗೆ 500 ಕಿಮೀಗಿಂತ ಹೆಚ್ಚು ವೇಗದಲ್ಲಿ ರೈಲು ಚಲಿಸಿದರೆ, ಗಾಳಿಯು ದ್ರವಂತಾಗುತ್ತದೆ. ಇದು ಒಂದು ರೀತಿಯಲ್ಲಿ ನೀರಿನ ಗೋಡೆ ಅಪ್ಪಳಿಸಿದಂತಾಗುತ್ತದೆ. ಇದರಿಂದ ಸಾಕಷ್ಟು ಸುರಕ್ಷತಾ ಸಮಸ್ಯೆ ಎದುರಾಗುತ್ತದೆ. ಅಲ್ಲದೇ ಈ ಬುಲೆಟ್ ರೈಲಿಗೆ ಸಿಕ್ಕಾಪಟ್ಟೆ ಹಣ ಹಾಗೂ ಶಕ್ತಿ ವ್ಯಯವಾಗುತ್ತದೆ. ಅದು ಯಾವುದೇ ಕೋನದಲ್ಲೂ ಆದಾಯದ ಯೋಜನೆಯಲ್ಲ ಎಂದನ್ನುತ್ತಾರೆ ಹೈಪರ್'ಲೂಪ್ ಸಂಸ್ಥಾಪಕರು.

ಹೈಪರ್'ಲೂಪ್ ಹೇಗೆ?
ಇದು ಘರ್ಷಣೆ ಮುಕ್ತ ವ್ಯಾಕ್ಯೂಮ್ ವಾತಾವರಣದ ವ್ಯವಸ್ಥೆಯಾಗಿದೆ. ಇದರಲ್ಲಿ ಗಂಟೆಗೆ 900-1200 ಕಿಮೀ ವೇಗದಲ್ಲಿ ವಾಹನವನ್ನು ಚಲಾಯಿಸಬಹುದು. ವಿಮಾನಕ್ಕಿಂತಲೂ ಫಾಸ್ಟಾಗಿ ಹೋಗಬಹುದು. ಹೈಪರ್'ಲೂಪ್'ನಲ್ಲಿ ಕೂತು ಪ್ರಯಾಣಿಸಿದರೆ ಏರೋಪ್ಲೇನ್'ನಲ್ಲಿದ್ದಂತೆ ಭಾಸವಾಗುತ್ತದೆ. ಪ್ರಯಾಣ ಮಾಡುತ್ತಿದ್ದೀರೆಂಬ ಭಾವನೆಯೇ ಸಿಗದಷ್ಟು ಸ್ಮೂತಾಗಿ ಸಾಗಬಹುದು ಎಂದು ಗ್ರೆಸ್ಟಾ ಹೇಳುತ್ತಾರೆ.

ಎಷ್ಟು ವೆಚ್ಚವಾಗುತ್ತದೆ?
ಸದ್ಯದ ಅಂದಾಜಿನ ಪ್ರಕಾರ, ಪ್ರತೀ ಕಿಮೀ ಹೈಪರ್'ಲೂಪ್'ಗೆ 40 ಮಿಲಿಯನ್ ಡಾಲರ್ (270 ಕೋಟಿ ರೂಪಾಯಿ) ವೆಚ್ಚವಾಗುತ್ತದೆ. ಅಂದರೆ, ಬೆಂಗಳೂರಿನಲ್ಲಿ ನಿರ್ಮಾಣ ಮಾಡಬೇಕೆಂದಿರುವ ಸ್ಟೀಲ್ ಫ್ಲೈಓವರ್'ಗೆ ಆಗುವ ವೆಚ್ಚದಷ್ಟೇ ಹಣದಲ್ಲಿ ಹೈಪರ್'ಲೂಪ್ ನಿರ್ಮಿಸಬಹುದಂತೆ.

ಯಾವೆಲ್ಲಾ ದೇಶದಲ್ಲಿದೆ?
ಹೈಪರ್'ಲೂಪ್ ಭವಿಷ್ಯದ ತಂತ್ರಜ್ಞಾನವಾಗಿದ್ದು ಇನ್ನೂ ಯಾವುದೇ ದೇಶದಲ್ಲಿ ಕಾರ್ಯಗತವಾಗಿಲ್ಲ. ಅಬುಧಾಬಿಯಲ್ಲಿ ಯೋಜನೆಗೆ ಅಂಗೀಕಾರ ದೊರೆತಿದ್ದು, ಕೆಲವೇ ವರ್ಷಗಳಲ್ಲಿ ಅಲ್ಲಿ ಯೋಜನೆ ಶುರುವಾಗಬಹುದು. ಅಮೆರಿಕದಲ್ಲಿ ಯೋಜನೆ ಕಾರ್ಯಗತಗೊಳಿಸಲು ಸಮೀಕ್ಷೆ ಮತ್ತು ಅಧ್ಯಯನಗಳು ನಡೆಯುತ್ತಿವೆ. ಭಾರತ ಸೇರಿದಂತೆ ಒಟ್ಟು 20 ದೇಶಗಳ ಮುಂದೆ ಹೈಪರ್'ಲೂಪ್ ಯೋಜನೆಯ ಪ್ರಸ್ತಾವವಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಯನ್ನು ಪರಿಗಣಿಸುತ್ತಾರಾ ಎಂದು ಕಾದುನೋಡಬೇಕಷ್ಟೇ.