ಶಾಲೆಯ ಶುಲ್ಕ ಪಾವತಿಸಿಲ್ಲವೆಂದು ಶಿಕ್ಷಕರು ಕೊಟ್ಟ ಕಿರುಕುಳದಿಂದ ಮನನೊಂದ ಹೈದರಾಬಾದ್‌ನ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಲ್ಲಿನ ‘ಇರ್ಪಾನ್ ಟ್ಯಾಲೆಂಟ್ ಶಾಲೆ’ಯ 9ನೇ ತರಗತಿಯ ವಿದ್ಯಾರ್ಥಿಯಾದ ಮಿರ್ಜಾ ಸಲ್ಮಾನ್ ಬೇಗ್ ಎಂಬಾತನೇ ನೇಣಿಗೆ ಶರಣಾದ ಬಾಲಕ.

ಹೈದರಾಬಾದ್(ಜ.7): ನೋಟುಗಳ ಅಮಾನ್ಯದ ಬಳಿಕ ಎಟಿಎಂ, ಬ್ಯಾಂಕುಗಳ ಮುಂದೆ ಕ್ಯೂನಲ್ಲಿ ನಿಂತು 80ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಸುದ್ದಿಗಳು ವರದಿಯಾಗುತ್ತಲೇ ಇವೆ. ಆದರೆ, ಇದೀಗ ಬಾಲಕನೊಬ್ಬನ ಸಾವಿಗೂ ನೋಟು ಅಮಾನ್ಯ ನೀತಿಯು ಪರೋಕ್ಷ ಕಾರಣವಾಗಿದೆ.

ಶಾಲೆಯ ಶುಲ್ಕ ಪಾವತಿಸಿಲ್ಲವೆಂದು ಶಿಕ್ಷಕರು ಕೊಟ್ಟ ಕಿರುಕುಳದಿಂದ ಮನನೊಂದ ಹೈದರಾಬಾದ್‌ನ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಲ್ಲಿನ ‘ಇರ್ಪಾನ್ ಟ್ಯಾಲೆಂಟ್ ಶಾಲೆ’ಯ 9ನೇ ತರಗತಿಯ ವಿದ್ಯಾರ್ಥಿಯಾದ ಮಿರ್ಜಾ ಸಲ್ಮಾನ್ ಬೇಗ್ ಎಂಬಾತನೇ ನೇಣಿಗೆ ಶರಣಾದ ಬಾಲಕ.

ಅರೆಬೆತ್ತಲೆ ನಿಲ್ಲಿಸಿದ್ದರು: ಸಲ್ಮಾನ್ 2 ತಿಂಗಳ ಫೀಸ್ ಕಟ್ಟಿಲ್ಲ ಎಂಬ ಕಾರಣಕ್ಕಾಗಿ ಶಾಲೆಯ ಶಿಕ್ಷಕರು ಆತನ ಪ್ಯಾಂಟ್ ಬಿಚ್ಚಿಸಿ ಅರೆಬೆತ್ತಲೆ ಮಾಡಿ, ಕಿರಿಯ ವಿದ್ಯಾರ್ಥಿಗಳ ಜತೆ ಕೂರಿಸಿ, ಶಿಕ್ಷಿಸಿದ್ದರು. ಇದರಿಂದ ಆತ ತೀವ್ರ ನೊಂದಿದ್ದ. ತದನಂತರ, ಕಳೆದ ಬುಧವಾರ ಶಾಲೆಗೆ ಆಗಮಿಸಿದ್ದ ಸಲ್ಮಾನ್, ಬಾಕಿಯಿದ್ದ ಶುಲ್ಕವನ್ನು ಪಾವತಿಸಿದ್ದ. ತನಗಾದ ಅವಮಾನವನ್ನು ಸಹಪಾಠಿಗಳೊಂದಿಗೆ ಹಂಚಿಕೊಂಡಿದ್ದ ಆತ, ‘ಇನ್ನು ಮುಂದೆ ನಾನು ಶಾಲೆಗೆ ಬರುವುದೇ ಇಲ್ಲ’ ಎಂದು ಹೇಳಿ ಮನೆಗೆ ವಾಪಸಾಗಿದ್ದ.

ನೇಣು ಹಾಕಿಕೊಂಡ: ಶಾಲೆಯಿಂದ ನೇರವಾಗಿ ಮನೆಗೆ ಬಂದವನೇ, ಕೊಠಡಿಯೊಳಕ್ಕೆ ನುಗ್ಗಿ ದುಪಟ್ಟಾದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲವು ದಿನಗಳಿಂದ ಶಾಲೆಯಲ್ಲಿ ನೀಡುತ್ತಿದ್ದ ಕಿರುಕುಳದಿಂದ ಮನನೊಂದು ಆತ ನೇಣಿಗೆ ಶರಣಾಗಿರುವುದಾಗಿ ಅವನ ಸಹೋದರ ಬಶೀರ್ ಆರೋಪಿಸಿದ್ದಾರೆ. ಜತೆಗೆ, ನಾನಿನ್ನು ಶಾಲೆಗೆ ಬರುವುದಿಲ್ಲ ಎಂದು ಸಲ್ಮಾನ್ ಹೇಳಿದ್ದಾಗಿ ಆತನ ಸಹಪಾಠಿ ಮಾಹಿತಿ ನೀಡಿದ್ದಾನೆ.

ನೋಟು ಅಮಾನ್ಯ ಕಾರಣ?: 500 ಹಾಗೂ 1,000 ಮುಖಬೆಲೆಯ ನೋಟುಗಳ ಅಮಾನ್ಯವಾದ ಕಾರಣ ಹಣದ ಸಮಸ್ಯೆ ಉಂಟಾಗಿ, ಎರಡು ತಿಂಗಳು ಫೀಸ್ ಕಟ್ಟಲು ಸಾಧ್ಯವಾಗಿರಲಿಲ್ಲ ಎಂದು ಸಲ್ಮಾನ್ ಪೋಷಕರು ಅಳಲು ತೋಡಿಕೊಂಡಿದ್ದಾರೆ. ಮಗನ ಸಾವಿನ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದು, ಶಾಲಾ ಪ್ರಾಂಶುಪಾಲ ಖ್ವಾಜಾ ಜೈನುಲ್ಲಾಬಿದೀನ್ ಅವರನ್ನು ಬಂಸಲಾಗಿದೆ. ಆದರೆ, ಶಾಲೆಯಲ್ಲಿನ ಕಿರುಕುಳ ಕುರಿತ ಆರೋಪವನ್ನು ತಳ್ಳಿಹಾಕಿರುವ ಶಾಲಾ ಆಡಳಿತ ಮಂಡಳಿ, ಬಾಲಕನ ಸಾವಿಗೆ ವೈಯಕ್ತಿಕ ಕಾರಣವಿರಬಹುದು ಎಂದು ಹೇಳಿದೆ.